ಬಿಎಂಟಿಸಿ ಬಸ್ಸಿನಲ್ಲಿ ವಿಧಾನಸೌಧಕ್ಕೆ ಪ್ರಯಾಣಿಸಿದ ಸಾರಿಗೆ ಸಚಿವ ಎಚ್.ಎಂ.ರೇವಣ್ಣ
ಬೆಂಗಳೂರು, ಸೆ. 4: ಇತ್ತೀಚಿಗಷ್ಟೇ ಸಾರಿಗೆ ಸಚಿವರಾಗಿ ಅಕಾರ ವಹಿಸಿಕೊಂಡ ಎಚ್.ಎಂ.ರೇವಣ್ಣ ತಮ್ಮ ಮೊದಲ ಸಚಿವ ಸಂಪುಟ ಸಭೆಗೆ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸಿದರು.
ಸೋಮವಾರ ನಗರದ ಲಾಲ್‌ಬಾಗ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ಬಿಎಂಟಿಸಿಯ 92ನೆ ಬಸ್ ದಿನಾಚರಣೆ ಕಾರ್ಯಕ್ರಮಕ್ಕೆ ತಮ್ಮ ನಿವಾಸದಿಂದ ಬಿಎಂಟಿಸಿ ಬಸ್‌ನಲ್ಲೇ ಆಗಮಿಸಿದ ಸಚಿವ ರೇವಣ್ಣ ಮೆರಗು ತಂದರು. ಬಸ್ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ, ಕಾರು ಪ್ರಯಾಣಿಕರ ಬಳಿ ಹೋಗಿ ನಗರದಲ್ಲಿ ಸಂಚಾರ ದಟ್ಟಣೆ ತಪ್ಪಿಸಲು ಸಾರ್ವಜನಿಕ ಸಾರಿಗೆಯನ್ನು ಬಳಸುವಂತೆ ಗುಲಾಬಿ ಕೊಟ್ಟು ಮನವಿ ಮಾಡಿದರು. ನಂತರ ಈ ಬಾರಿಯ ಬಸ್ ದಿನಾಚರಣೆಯನ್ನು ಜನರಿಗೆ ವೈಯಕ್ತಿಕ ಸಾರಿಗೆಯ ಬದಲು ಸಮೂಹ ಸಾರಿಗೆ ಉಪಯೋಗಿಸಲು ಅರಿವು ಮೂಡಿಸುವ ಹಮ್ಮಿಕೊಂಡಿದ್ದ ಮಾನವ ಸರಪಳಿಯಲ್ಲಿ ಪಾಲ್ಗೊಂಡು ಸಾಥ್ ಕೊಟ್ಟರು.
ನಂತರ ಮಾಧ್ಯಮಗಳ ಪ್ರತಿನಿಗಳೊಂದಿಗೆ ಸಚಿವ ಎಚ್.ಎಂ.ರೇವಣ್ಣ ಮಾತನಾಡಿ, ನಗರದ ಸಂಚಾರ ದಟ್ಟಣೆ ಹಾಗೂ ನಗರದ ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ವೈಯಕ್ತಿಕ ಸಾರಿಗೆಯಿಂದ ಸಾರ್ವಜನಿಕ ಸಾರಿಗೆಯತ್ತ ಪ್ರಯಾಣಿಕರನ್ನು ಆಕರ್ಷಿಸಲು ಸಂಸ್ಥೆ ವಿಶೇಷ ಆಸಕ್ತಿ ಹೊಂದಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿಗಳ ಕೊಟ್ಟಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ ಸಾರಿಗೆ ವ್ಯವಸ್ಥೆಯಲ್ಲಿ ಪಾರದರ್ಶಕ ಆಡಳಿತಕ್ಕೆ ಹೆಚ್ಚು ಒತ್ತು ನೀಡಲಾಗುವುದು. ಬೆಂಗಳೂರು ನಗರದ ಸಾರ್ವಜನಿಕ ಪ್ರಯಾಣಿಕರಿಗೆ ಸಮರ್ಪಕ ಸಾರಿಗೆ ಸೌಲಭ್ಯವನ್ನು ಒದಗಿಸುವ ಧ್ಯೇಯ ಹೊಂದಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿಎಂಟಿಸಿ ಅಧ್ಯಕ್ಷ ನಾಗರಾಜ ಯಾದವ್, ಉಪಾಧ್ಯಕ್ಷ ಗೋವಿಂದರಾಜು, ನಗರದ ನೇತಾಜಿ ಸುಭಾಶ್ ಚಂದ್ರ ಬೋಸ್ ಶಾಲೆಯ ವಿದ್ಯಾರ್ಥಿಗಳು, ಬಸ್ ಪ್ರಯಾಣಿಕರ ವೇದಿಕೆ ಸದಸ್ಯರು, ಗಿವ್ ಆವೇ ಆ್ಯಂಬುಲೆನ್ಸ್ ಏಜೆನ್ಸಿ ಸದಸ್ಯರು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಅಕಾರಿಗಳು ಸೇರಿದಂತೆ ಇತರರು ಇದ್ದರು.