×
Ad

ಮುಂದಿನ 5 ವರ್ಷಗಳಲ್ಲಿ 1,500 ದಶಲಕ್ಷ ಲೀಟರ್ ತ್ಯಾಜ್ಯನೀರು ಸಾಮರ್ಥ್ಯದ ಸಂಸ್ಕರಣೆಯ ಘಟಕಗಳ ನಿರ್ಮಾಣ: ಸಿಎಂ ಘೋಷಣೆ

Update: 2017-09-04 23:08 IST

ಬೆಂಗಳೂರು, ಸೆ.4: ಮುಂದಿನ ಐದು ವರ್ಷಗಳಲ್ಲಿ ನಗರದಲ್ಲಿ 1,565 ಕೋಟಿ ವೆಚ್ಚದಲ್ಲಿ 1,500 ದಶಲಕ್ಷ ಲೀಟರ್ ತ್ಯಾಜ್ಯನೀರು ಸಾಮರ್ಥ್ಯದ ಸಂಸ್ಕರಣೆಯ ಘಟಕಗಳನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಸೋಮವಾರ ನಗರದ ನಾಯಂಡಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ವೃಷಭಾವತಿ ವ್ಯಾಲಿ, ಕೆ.ಸಿ ವ್ಯಾಲಿ, ಹೆಬ್ಬಾಳ ಮತ್ತು ದೊಡ್ಡಬೆಲೆಯಲ್ಲಿ ಒಟ್ಟು 440 ಎಂಎಲ್‌ಡಿ ಸಾಮರ್ಥ್ಯದ ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ಕೆ.ಸಿ.ವ್ಯಾಲಿಯಲ್ಲಿ ಸಂಸ್ಕರಣಗೊಂಡ ನೀರು ಕೋಲಾರ ಜಿಲ್ಲೆಯ ಕೆರೆಗಳಿಗೆ ತುಂಬಿಸಲಾಗುವುದು. ಹೆಬ್ಬಾಳದಲ್ಲಿ ಸಂಸ್ಕರಣಗೊಂಡ ನೀರು ದೇವನಹಳ್ಳಿ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳಿಗೆ ಹರಿಸಲಾಗುವುದು ಎಂದು ತಿಳಿಸಿದರು.

ಬೆಂಗಳೂರು ನಗರಕ್ಕೆ ಒಳಚರಂಡಿಯಾಗಿ 95 ವರ್ಷಗಳಾಗಿವೆ, ಅಂದಿನಿಂದ ಇಂದಿನವರೆಗೆ ಒಳಚರಂಡಿಯನ್ನು ಗಂಭೀರವಾಗಿ ಪರಿಗಣಿಸದಿರುವುದು, ತ್ಯಾಜ್ಯ ನೀರಿನ ಸಂಸ್ಕರಣೆ ಮಾಡದಿರುವುದರಿಂದಲೇ ಈ ಎಲ್ಲ ಸಮಸ್ಯೆ ಮಳೆಯ ಅವಾಂತರಗಳಿಗೆ ಕಾರಣ. ಹಿಂದೆ ಇದ್ದವರು ಮಾಡಿದ ತಪ್ಪಿನಿಂದ ಮೇಯರ್, ಸಚಿವ ಜಾರ್ಜ್ ಮತ್ತು ಬಿಬಿಎಂಪಿ ಆಯುಕ್ತರು ವಿನಾಕಾರಣ ಜನರು ಬೈಗುಳಕ್ಕೆ ತುತ್ತಾಗುತ್ತಿದ್ದಾರೆ ಎಂದು ಹೇಳಿದರು.

ಯಾವುದೇ ಪ್ರಭಾವಿಗಳಿಗೆ ಅಂಜಲ್ಲ : ನಗರದಲ್ಲಿ ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವ ಪ್ರಭಾವಿಗಳಿಗೆ ಸರಕಾರ ಅಂಜುವುದಿಲ್ಲ. ಎಷ್ಟೇ ಪ್ರಭಾವಿಗಳಿದ್ದರು ಭಯಪಡದೆ, ಯಾವುದೇ ಮುಲಾಜಿಲ್ಲದೆ ರಾಜಕಾಲುವೆ ಮೇಲೆ ನಿರ್ಮಾಣ ಮಾಡಿರುವ ಕಟ್ಟಡಗಳನ್ನು ತೆರವುಗೊಳಿಸಲು ಕೂಡಲೆ ಕ್ರಮ ಕೈಗೊಳ್ಳಬೇಕು ಎಂದು ಬಿಬಿಎಂಪಿ ಆಯುಕ್ತರಿಗೆ ಸೂಚಿಸಿದರು.

ರಸ್ತೆಗುಂಡಿಗಳು ಮುಚ್ಚಲು ಗಡವು:ನಗರದಲ್ಲಿ ಕಳೆದ ಎರಡು ವಾರಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ಸೆಪ್ಟೆಂಬರ್ ತಿಂಗಳಿಗೆ ಮಳೆಗಾಲ ಅಂತ್ಯಗೊಳ್ಳಲಿದೆ. ಸೆಪ್ಟೆಂಬರ್ ತಿಂಗಳು ಅಂತ್ಯಗೊಳ್ಳುತ್ತಿದಂತೆ ನಗರದ ಎಲ್ಲ ರಸ್ತೆಗುಂಡಿಗಳು ಮುಚ್ಚಬೇಕು. ಮುಂದಿನ ದಿನಗಳಲ್ಲಿ ರಸ್ತೆ ಡಾಂಬರೀಕರಣ ಬದಲು ವೈಟ್‌ಟ್ಯಾಪಿಂಗ್‌ಗೆ ಹೆಚ್ಚು ಒತ್ತು ನೀಡಬೇಕು ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದರು.

 ಬಿಬಿಎಂಪಿ ವ್ಯಾಪ್ತಿಗೆ ನೂತನವಾಗಿ ಸೇರಿಸಿದ್ದ 110 ಹಳ್ಳಿಗಳಿಗೆ ಮೂಲಭೂತ ಸೌಕರ್ಯಗಳು, ಬೆಂಗಳೂರು ನಗರ ಒಳಚರಂಡಿ, ಕುಡಿಯುವ ನೀರು, ರಸ್ತೆ ಮತ್ತು ಮೆಟ್ರೋ ಹಾಗೂ ಸಬ್ ಅರ್ಬನ್ ರೈಲು ಸೇರಿದಂತೆ ಬೆಂಗಳೂರು ಅಭಿವೃದ್ಧಿಗಾಗಿ ಕಳೆದ 4 ವರ್ಷಗಳಲ್ಲಿ 22,242 ಕೋಟಿ ರೂ. ನೀಡಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸದ ಡಿ.ಕೆ. ಸುರೇಶ್, ಶಾಸಕ ಮುನಿರತ್ನ ಬೆಂಗಳೂರು ಅಭಿವೃದ್ಧಿಸಚಿವ ಕೆ.ಜೆ.ಜಾರ್ಜ್, ಮೇಯರ್ ಪದ್ಮಾವತಿ, ಆಯುಕ್ತ ಮಂಜುನಾಥ್ ಪ್ರಸಾದ್ ಸೇರಿದಂತೆ ಇತರರು ಇದ್ದರು.

ಹೊಟ್ಟೆ ತುಂಬಿದವರಿಂದ ವಿರೋಧ:ರಾಜ್ಯ ಸರಕಾರ ಕೈಗೊಂಡಿರುವ ಜನಪರ ಕಾರ್ಯಕ್ರಮಗಳಿಗೆ ಹೊಟ್ಟೆ ತುಂಬಿದವರು ವಿನಾಕಾರಣ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇಂದಿರಾ ಕ್ಯಾಂಟೀನ್ ಸೇರಿದಂತೆ ಇತರೆ ಜನಪರ ಕಾರ್ಯಕ್ರಮಗಳಿಗೆ ವಿನಾಕಾರಣ ಅಡ್ಡಿಪಡಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

-ಸಿದ್ದರಾಮಯ್ಯ,ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News