ದ್ವೇಷ ರಾಜಕಾರಣಕ್ಕೆ ಕನ್ನಡತನದ ಉತ್ತರ

Update: 2017-09-05 04:12 GMT

ಕೇಂದ್ರ ಸಂಪುಟ ವಿಸ್ತರಣೆಯಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದು ಬರೇ ಕನ್ನಡಿಯ ಗಂಟು. ಮೋದಿ ಪ್ರಧಾನಿಯಾಗಲು ಅತ್ಯಧಿಕ ಸಂಸದರನ್ನು ನೀಡಿದ ಹೆಗ್ಗಳಿಕೆಯನ್ನು ಕರ್ನಾಟಕ ಹೊಂದಿದೆಯಾದರೂ, ಕೇಂದ್ರ ಸರಕಾರಕ್ಕೆ ಮಾತ್ರ ಕರ್ನಾಟಕವೆಂದರೆ ಅಷ್ಟಕ್ಕಷ್ಟೇ. ಇಲ್ಲಿಯ ಪರಂಪರೆ, ಪರಮ ಜೀವನ ವೌಲ್ಯಗಳೇ ದಿಲ್ಲಿಯ ಬಿಜೆಪಿಯ ನಾಯಕರಿಗೆ ನುಂಗವಲಾರದ ತುತ್ತು. ಸಂಪುಟ ವಿಸ್ತರಣೆಯಲ್ಲಿ ರಾಜ್ಯಕ್ಕೆ ಸಿಕ್ಕಿದ ಪಾಲು, ದಿಲ್ಲಿಯ ನಾಯಕರು ರಾಜ್ಯದ ಮೇಲೆ ಹೊಂದಿರುವ ಅಸಹನೆಯ ಪ್ರತಿಫಲನವಾಗಿದೆ. ಕಾಟಾಚಾರಕ್ಕಾಗಿ ಕರ್ನಾಟಕದ ಸಂಸದರೊಬ್ಬರಿಗೆ ಸಹಾಯಕ ಸಚಿವ ಸ್ಥಾನವನ್ನು ನೀಡಿದೆಯಾದರೂ, ಅದು, ಭವಿಷ್ಯದಲ್ಲಿ ರಾಜ್ಯ ಬಿಜೆಪಿಯೊಳಗೆ ನಡೆಯಲಿರುವ ಕೆಲವು ಬದಲಾವಣೆಗಳ ಸೂಚನೆಯನ್ನಷ್ಟೇ ಜನರಿಗೆ ನೀಡುತ್ತಿದೆ.

ಹೊಸದಾಗಿ ಕೇಂದ್ರದಲ್ಲಿ ಸಚಿವ ಸ್ಥಾನವನ್ನು ಪಡೆದಿರುವ ಉತ್ತರಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ್ ಹೆಗಡೆಗೂ, ಕರ್ನಾಟಕಕ್ಕೂ ಏನು ಸಂಬಂಧ ಎಂದು ಕೇಳಿದರೆ, ಸ್ವತಃ ರಾಜ್ಯದ ಬಿಜೆಪಿಯ ಜನರಲ್ಲೇ ಉತ್ತರವಿಲ್ಲ. ಇವರು ರಾಜ್ಯವನ್ನು ಕೇಂದ್ರದಲ್ಲಿ ಸಚಿವನಾಗಿ ಪ್ರತಿನಿಧಿಸುವುದು ಪಕ್ಕಕ್ಕಿರಲಿ, ತಾನು ಆರಿಸಿ ಬಂದ ಕ್ಷೇತ್ರವನ್ನೇ ನಿರ್ಲಕ್ಷಿಸುತ್ತಿರುವ ಬಗ್ಗೆ ವ್ಯಾಪಕ ಆರೋಪವಿದೆ. ಸಾರ್ವಜನಿಕವಾಗಿ ಅನಾಗರಿಕ ವರ್ತನೆಗೆ ಕುಖ್ಯಾತಿಯನ್ನು ಪಡೆದಿರುವ ಈ ಸಂಸದ, ಇತ್ತೀಚೆಗೆ ವೈದ್ಯರೊಬ್ಬರಿಗೆ ಸಾರ್ವಜನಿಕವಾಗಿ ಥಳಿಸುವ ಮೂಲಕ ವ್ಯಾಪಕ ಟೀಕೆಯನ್ನು ಎದುರಿಸುತ್ತಿರುವವರು. ಉತ್ತರ ಕನ್ನಡದಲ್ಲಿ ಕೋಮು ಉದ್ವಿಗ್ನಕಾರಿ ಭಾಷಣ ಮಾಡಿದ ಆರೋಪಗಳು ಇವರ ಮೇಲಿವೆ. ಕ್ರಿಮಿನಲ್ ಮೊಕದ್ದಮೆಗಳನ್ನು ಇವರ ವಿರುದ್ಧ ಜಡಿಯಲಾಗಿದೆ.

ಬಿಜೆಪಿಯೊಳಗಿರುವ ಮಂದಿಗೇ ಈ ಸಂಸದರ ಕುರಿತಂತೆ ಹೇಳುವಂತಹ ಗೌರವವಿಲ್ಲ. ಉತ್ತರ ಕನ್ನಡದಾಚೆಗೆ ವಿಸ್ತರಿಸಿಕೊಳ್ಳುವ ನಾಯಕತ್ವ ಇವರದಲ್ಲ. ಇದೀಗ ಬಿಜೆಪಿಯ ರಾಜ್ಯಮಟ್ಟದ ನಾಯಕರ ಎಲ್ಲ ನಿರೀಕ್ಷೆಗಳೂ ತಲೆಕೆಳಗಾಗುವಂತೆ ಕೇಂದ್ರ ವರಿಷ್ಠರು ಅನಂತಕುಮಾರ್ ಹೆಗಡೆಯನ್ನು ಸಚಿವ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ. ಈ ಆಯ್ಕೆಗೆ ರಾಜ್ಯದ ನಾಯಕರಿಂದ ನಿರೀಕ್ಷಿತ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಯಡಿಯೂರಪ್ಪ ಸೇರಿದಂತೆ ಹಲವು ನಾಯಕರು ಈ ಆಯ್ಕೆಯ ಕುರಿತಂತೆ ನಿಗೂಢ ವೌನಕ್ಕೆ ಶರಣಾಗಿದ್ದಾರೆ.

ಅನಂತಕುಮಾರ್ ಹೆಗಡೆ ಆಯ್ಕೆಯ ಮೂಲಕ ಬಿಜೆಪಿಯ ಕೇಂದ್ರ ವರಿಷ್ಠರು ರಾಜ್ಯ ಬಿಜೆಪಿಗೆ ಕೆಲವು ಸಂದೇಶಗಳನ್ನು ರವಾನಿಸಿದ್ದಾರೆ. ಅನಂತಕುಮಾರ್ ಹೆಗಡೆಯ ಆಯ್ಕೆಗೆ ಸದ್ಯಕ್ಕೆ ಇರುವ ಅರ್ಹತೆಗಳು ಅವರ ಮೇಲಿರುವ ಕ್ರಿಮಿನಲ್ ಮೊಕದ್ದಮೆಗಳು ಮತ್ತು ಕೋಮುಉದ್ವಿಗ್ನಕಾರಿ ಭಾಷಣಗಳು. ಇದಕ್ಕೆ ಹೊರತಾಗಿ ರಾಜ್ಯದ ಜನಸಾಮಾನ್ಯರ ಸಾಮಾಜಿಕ, ಆರ್ಥಿಕ ಸಂಕಟಗಳನ್ನು ಮುಂದಿಟ್ಟುಕೊಂಡು ಯಾವುದೇ ಹೋರಾಟಗಳನ್ನು ನಡೆಸಿದ, ಆ ಮೂಲಕ ಪಕ್ಷಕ್ಕೆ ಶಕ್ತಿ ತುಂಬಿದ ಇತಿಹಾಸ ಇವರಿಗಿಲ್ಲ. ಕೆಲ ದಿನಗಳ ಹಿಂದೆ ರಾಜ್ಯಕ್ಕೆ ಕಾಲಿಟ್ಟ ಅಮಿತ್ ಶಾಗೆ ರಾಜ್ಯ ಬಿಜೆಪಿ ಬಿಕ್ಕಟ್ಟನ್ನು ಪರಿಹರಿಸುವ ಯಾವ ದಾರಿಯೂ ತೆರೆದುಕೊಳ್ಳದೇ ಇದ್ದಾಗ, ಕ್ರಿಮಿನಲ್ ಮೊಕದ್ದಮೆಗಳನ್ನು ಹೊಂದಿರುವ ಈ ಸಂಸದ ಒಂದು ಆಶಾಕಿರಣವಾಗಿ ಕಂಡಿದ್ದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ.

ಯಡಿಯೂರಪ್ಪ ಬಿಜೆಪಿಯ ಚುಕ್ಕಾಣಿಯನ್ನು ವಹಿಸಿಕೊಂಡಿದ್ದಾರಾದರೂ, ಬಿಜೆಪಿಯ ಪಾಲಿಗೆ ಅವರೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದಾರೆ. ಬಿಜೆಪಿಯ ಹಿರಿಯರೇ ಎರಡು ಬಣಗಳಾಗಿ ಒಡೆದು ಹಗ್ಗಜಗ್ಗಾಟ ನಡೆಸುತ್ತಿರುವುದರಿಂದ, ಬಿಜೆಪಿಯನ್ನು ಅಡ್ಡ ದಾರಿಯ ಮೂಲಕ ರಾಜ್ಯದಲ್ಲಿ ಮತ್ತೆ ಎತ್ತಿ ನಿಲ್ಲಿಸುವ ಯೋಜನೆಯೊಂದನ್ನು ಅವರು ರೂಪಿಸುವುದಕ್ಕೆ ಹೊರಟಂತಿದೆ. ಇದಕ್ಕೆ ಹಿಂದಿನಿಂದ ಆರೆಸ್ಸೆಸ್ ಇದಕ್ಕೆ ತನ್ನ ಬೆಂಬಲವನ್ನೂ ನೀಡುತ್ತಿದೆ. ಈ ಕಾರಣದಿಂದಲೇ, ರಾಜ್ಯದಲ್ಲಿ ಕಟ್ಟರ್ ಹಿಂದುತ್ವದ ತಳಹದಿಯಲ್ಲಿ ಬಿಜೆಪಿಯನ್ನು ಮರು ಜೀವಗೊಳಿಸಿ, ಅದಕ್ಕೆ ಪೂರಕವಾಗಿ ಒಬ್ಬ (ಅ)ಯೋಗ್ಯ ನಾಯಕನನ್ನು ಒದಗಿಸುವುದು. ಆರೆಸ್ಸೆಸ್ ಪಾಲಿಗೆ ಅಂತಹದೊಂದು ಯೋಗ್ಯ ವ್ಯಕ್ತಿಯಾಗಿ ಕಂಡಿರುವುದು ಅನಂತಕುಮಾರ್ ಹೆಗಡೆ.

ಸದಾ ತನ್ನ ಸಮಾಜವಿರೋಧಿ ಕೋಮು ಉದ್ವಿಗ್ನಕಾರಿ ಭಾಷಣಗಳನ್ನೇ ಬಂಡವಾಳವಾಗಿಸಿಕೊಂಡು ಆರಿಸಿ ಬರುತ್ತಿರುವ ಅನಂತಕುಮಾರ್ ಹೆಗಡೆಯ ಸಂಸ್ಕೃತಿ ಅಮಿತ್ ಶಾನಂತಹ ನಾಯಕರಿಗೆ ಹಿತವಾಗಿ ಕಂಡಿದೆ. ಸದ್ಯಕ್ಕೆ ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ಆಡಳಿತಕ್ಕೆ ‘ಜನಪರ’ ಎನ್ನುವ ಹೆಗ್ಗಳಿಕೆಯಿದೆ. ಜನಸಾಮಾನ್ಯರ ಪ್ರೀತಿಯನ್ನು ತನ್ನದಾಗಿಸಿಕೊಳ್ಳುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಸರಕಾರದ ಆಡಳಿತವನ್ನು ಖಂಡಿಸಿ ಬಿಜೆಪಿಯನ್ನು ಬೆಳೆಸುವಂತಹ ಸನ್ನಿವೇಶ ರಾಜ್ಯದಲ್ಲಿಲ್ಲ.

ಆದುದರಿಂದಲೇ, ರಾಜ್ಯದ ಶಾಂತಿ ನೆಮ್ಮದಿಯನ್ನು ಕೆಡಿಸಿ, ಸಮಾಜವನ್ನು ಕೋಮು ಆಧಾರದಲ್ಲಿ ವಿಭಜಿಸಿ, ದ್ವೇಷ ಭಾವನೆಗಳನ್ನು ಬಿತ್ತಿ ಬಿಜೆಪಿಯನ್ನು ಬೆಳೆಸುವ ಹೊಸ ತಂತ್ರ ಆರೆಸ್ಸೆಸ್ ಮತ್ತು ಅಮಿತ್ ಶಾ ಜಂಟಿ ಸಹಭಾಗಿತ್ವದಲ್ಲಿ ರೂಪುಗೊಂಡಿದೆ. ಅದರ ಭಾಗವಾಗಿ, ಕೋಮುವಿಷ ಹರಡುವ ಮೂಲಕ ಸುದ್ದಿಯಲ್ಲಿರುವ ಅನಂತಕುಮಾರ್ ಹೆಗಡೆಯನ್ನು ಸಚಿವ ಸಂಪುಟಕ್ಕೆ ಸೇರಿಸಲಾಗಿದೆ. ಹಾಗೆಯೇ ಮುಂದಿನ ದಿನಗಳಲ್ಲಿ ಯಡಿಯೂರಪ್ಪ, ಈಶ್ವರಪ್ಪ ಇವರನ್ನೆಲ್ಲ ಬದಿಗಿಟ್ಟು, ಆರೆಸ್ಸೆಸ್‌ನ ಮುಖಂಡ ಸಂತೋಷ್ ನಾಯಕತ್ವದಲ್ಲಿ ರಾಜ್ಯದಲ್ಲಿ ಬಿಜೆಪಿ ಹೊಸ ವೇಷದಲ್ಲಿ ಜನರ ಬಳಿಗೆ ಹೋಗುವುದಕ್ಕೆ ನಿರ್ಧರಿಸಿದಂತಿದೆ. ಆರೆಸ್ಸೆಸ್‌ನ ಸಂತೋಷ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಣೆಯಾದರೂ ಅಚ್ಚರಿ ಯೇನಿಲ್ಲ.

ಇದೀಗ ಬಿಜೆಪಿ ಮತ್ತು ಸಂಘಪರಿವಾರ ಜಂಟಿಯಾಗಿ ರೂಪಿಸಿರುವ ‘ಮಂಗಳೂರು ಚಲೋ’ ಈ ಕಾರ್ಯಯೋಜನೆಯ ಮೊದಲ ಹಂತವಾಗಿದೆ. ಈ ರ್ಯಾಲಿ ಯಾವ ಕಾರಣಕ್ಕೂ ಮಂಗಳೂರಿಗೆ ಸೀಮಿತವಾಗಿ ಉಳಿಯುವುದಿಲ್ಲ. ಈ ಮೂಲಕ ರಾಜ್ಯಾದ್ಯಂತ ಕೋಮುಉದ್ವಿಗ್ನತೆಯ ಕಿಚ್ಚನ್ನು ಹರಡುತ್ತಾ, ದ್ವೇಷ ರಾಜಕಾರಣದ ಮೂಲಕ ಮುಂದಿನ ಚುನಾವಣೆಯನ್ನು ಎದುರಿಸುವ ದುರುದ್ದೇಶವನ್ನು ಬಿಜೆಪಿ ಹೊಂದಿದೆ. ಆದರೆ ಒಂದಂತೂ ಸತ್ಯ. ಅಮಿತ್ ಶಾ ಉತ್ತರ ಭಾರತದಲ್ಲಿ ದ್ವೇಷ ರಾಜಕಾರಣದ ಮೂಲಕ ಅಧಿಕಾರ ಹಿಡಿದಂತೆ, ಕರ್ನಾಟಕದಲ್ಲಿ ಅದನ್ನು ಸಾಧಿಸುವುದು ಕಷ್ಟ. ಕರ್ನಾಟಕದ ಸೌಹಾರ್ದ ಪರಂಪರೆಯ ಅರಿವೇ ಇಲ್ಲದ ಅಮಿತ್ ಶಾ, ರಾಜ್ಯದಲ್ಲಿ ಬಿಜೆಪಿಯನ್ನು ಇನ್ನಷ್ಟು ಪಾತಾಳದೆಡೆಗೆ ತಳ್ಳಲಿದ್ದಾರೆ. ಅನಂತಕುಮಾರ್ ಹೆಗಡೆಯಂತಹ ಸಂಸದನನ್ನು ರಾಜ್ಯ ನಾಯಕನಾಗಿ ರೂಪಿಸುವುದರಿಂದ ಬಿಜೆಪಿ ಅಳಿದುಳಿದ ವರ್ಚಸ್ಸನ್ನು ಕಳೆದುಕೊಳ್ಳಲಿದೆ.

ಯಡಿಯೂರಪ್ಪ ಮತ್ತು ಅವರನ್ನು ಆಶ್ರಯಿಸಿದ ಲಿಂಗಾಯತ ಸಮುದಾಯ ಬಿಜೆಪಿ ವಿರುದ್ಧ ನಿಲ್ಲಲಿದೆ. ಯಾವುದೇ ರಾಜಕೀಯ ಮುತ್ಸದ್ದಿತನವಿಲ್ಲದ ಹೆಗಡೆಯನ್ನು ಹಿಂಬಾಲಿಸುವ ಮನಸ್ಥಿತಿಯನ್ನು ಶೆಟ್ಟರ್, ಅಶೋಕ್, ಯಡಿಯೂರಪ್ಪ, ಈಶ್ವರಪ್ಪ ಮೊದಲಾದ ಹಿರಿಯರು ಹೊಂದಿಲ್ಲ ಎನ್ನುವುದು ಈಗಾಗಲೇ ಬಹಿರಂಗವಾಗಿದೆ. ಇದೇ ಸಂದರ್ಭದಲ್ಲಿ ಆರೆಸ್ಸೆಸ್‌ನ ನಾಯಕರಾಗಿರುವ ಸಂತೋಷ್, ಬಿಜೆಪಿಯೊಳಗೆ ಭಿನ್ನಮತವನ್ನು ಸೃಷ್ಟಿಸುತ್ತಿರುವುದರ ಬಗ್ಗೆ ಯಡಿಯೂರಪ್ಪ ಈಗಾಗಲೇ ಬಹಿರಂಗ ಹೇಳಿಕೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿಯೊಳಗಿನ ಸಂಘರ್ಷ ಬ್ರಾಹ್ಮಣ ಮತ್ತು ಬ್ರಾಹ್ಮಣ ವಿರೋಧಿ ಸಂಘರ್ಷವಾಗಿ ಪರಿವರ್ತನೆಗೊಳ್ಳಲಿದೆ.. ಹಾಗೆಯೇ ರಾಜ್ಯಕ್ಕೆ ಕಿಚ್ಚು ಹಚ್ಚಿ ಚುನಾವಣೆ ಗೆಲ್ಲಲು ಹೊರಟಿರುವ ಬಿಜೆಪಿಗೆ ಈ ನಾಡಿನ ಜನರೇ ಸರಿಯಾದ ಪಾಠವನ್ನು ಕಲಿಸಲಿದ್ದಾರೆ. ಬಿಜೆಪಿಯ ದ್ವೇಷ ರಾಜಕಾರಣಕ್ಕೆ ಕನ್ನಡ ಪರಂಪರೆಯ ಸೌಹಾರ್ದ ವೌಲ್ಯಗಳೇ ತಕ್ಕ ಉತ್ತರ ನೀಡಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News