×
Ad

ಕೇಂದ್ರದ ಜನವಿರೋಧಿ ಆಡಳಿತವನ್ನು ಮರೆ ಮಾಚಲು ಬಿಜೆಪಿಯಿಂದ ಗೋರಾಜಕೀಯ: ಸಿಪಿಐ(ಎಂ) ಆರೋಪ

Update: 2017-09-05 16:56 IST

ಸಿದ್ದಾಪುರ, ಸೆ.5: ಕಸ್ತೂರಿ ರಂಗನ್ ವರದಿ, ನೋಟ್ ಬ್ಯಾನ್, ಜಿಎಸ್‍ಟಿ ಮೊದಲಾದ ಕ್ರಮಗಳಿಂದ ದೇಶದ ಜನರ ಜೀವನ ಕಷ್ಟಕರವಾಗಿದ್ದು, ಇದೀಗ ಕೇಂದ್ರ ಸರಕಾರದ ಜನವಿರೋಧಿ ನೀತಿಗಳನ್ನು ಮರೆ ಮಾಚಿ ಗೋವಿನ ಹೆಸರಿನಲ್ಲಿ ಶಾಂತಿ ಕದಡುವ ಮೂಲಕ ಅಶಾಂತಿ ಸೃಷ್ಟಿ ಮಾಡಲು ಬಿಜೆಪಿ ಮತ್ತು ಸಂಘಪರಿವಾರ ಪ್ರಯತ್ನಿಸುತ್ತಿದೆ ಎಂದು ಸಿಪಿಐ(ಎಂ) ಪಕ್ಷದ ಗ್ರಾಮ ಸಮಿತಿ ಸದಸ್ಯ ಎನ್.ಡಿ ಕುಟ್ಟಪ್ಪ ಆರೋಪಿಸಿದ್ದಾರೆ.

ನಗರ ಪತ್ರಕರ್ತರ ಸಂಘದ ಕಚೇರಿಯಲ್ಲಿ ಮಾತನಾಡಿದ ಅವರು, ಸಿದ್ದಾಪುರದಲ್ಲಿ ಗೋವು ಕಳ್ಳತನವಾಗುತ್ತಿದೆ ಹಾಗೂ ಇಲ್ಲಿನ ಜನರು ದನದ ಮಾಂಸ ಮಾತ್ರ ತಿನ್ನುತ್ತಿದ್ದಾರೆ ಎಂಬ ರೀತಿಯಲ್ಲಿ ಸ್ಥಳೀಯ ಬಿಜೆಪಿಯವರು ನಿರಂತರವಾಗಿ ಪತ್ರಿಕಾ ಹೇಳಿಕೆಗಳನ್ನು ನೀಡುತ್ತಿದೆ. ಅಲ್ಲದೆ ಬಕ್ರೀದ್ ದಿನ ಬಿಜೆಪಿ ಸಿದ್ದಾಪುರದಲ್ಲಿ ಪ್ರತಿಭಟನೆ ನಡೆಸಿದ ಸಂದರ್ಭ ಚೆಟ್ಟಳ್ಳಿ ಗ್ರಾಪಂ ಸದಸ್ಯ ಕಂಠಿ ಕಾರ್ಯಪ್ಪ ಕೋಮು ಪ್ರಚೋದನಾಕಾರಿ ಭಾಷಣ ಮಾಡಿ ಮುಸಲ್ಮಾನರನ್ನು ಐದು ನಿಮಿಷದಲ್ಲಿ ನಾಶ ಮಾಡುವುದಾಗಿ ಹೇಳಿರುವುದು ಖಂಡನೀಯ. ಸಿದ್ದಾಪುರ ಮತ್ತು ನೆಲ್ಯಹುದಿಕೇರಿ ಭಾಗದಲ್ಲಿ ಕೋಮು ಗಲಭೆಗೆ ಪ್ರಚೋದನೆ ನೀಡಿ ಅಶಾಂತಿಯನ್ನು ಸೃಷ್ಟಿಸಿ ರಾಜಕೀಯ ಮಾಡಲು ಬಿಜೆಪಿ ಷಡ್ಯಂತ್ರ ರೂಪಿಸುತ್ತಿದೆ ಎಂದು ಆರೋಪಿಸಿದರು.

ದನದ ಮಾಂಸದ ಹೆಸರಿನಲ್ಲಿ ಬಿಜೆಪಿ ಮುಸಲ್ಮಾನರನ್ನು ಅಕ್ರಮಿಸುವಾಗ ಕೆಲವು ಹಿಂದೂಗಳು ಸಂತೋಷ ಪಡಬಹುದು. ಆದರೆ ಹಿಂದೂಗಳನ್ನೂ ಬಿಜೆಪಿ ನೆಮ್ಮದಿಯಿಂದ ಬದುಕಲು ಬಿಡುವುದಿಲ್ಲ ಎಂದ ಅವರು, ಕೊಡಗಿನಲ್ಲಿ ದನ ಮಾಂಸ  ತಿನ್ನಬಾರದು ಎಂಬ ಕಾನೂನೇನಿಲ್ಲ. ಮುಸಲ್ಮಾನರು ದನಗಳನ್ನು ಸಾಕಬಾರದಾ ಎಂದು ಪ್ರಶ್ನಿಸಿದ ಅವರು, ಹಿಂದೂಗಳು, ಬ್ರಾಹ್ಮಣರು ದನದ ಮಾಂಸ ತಿನ್ನುತ್ತಿದ್ದರು ಹಾಗೂ ಇಂದಿಗೂ ಸಾಕಷ್ಟು ಹಿಂದೂಗಳು ದನ ಮಾಂಸ ತಿನ್ನುತ್ತಿದ್ದಾರೆ. ದನ ಮಾಂಸ ತಿನ್ನುತ್ತಿರುವ ಸಿದ್ದಾಪುರದ ಬಿಜೆಪಿ ಮುಖಂಡರ ಪಟ್ಟಿ ಬಿಡುಗಡೆ ಗೊಳಿಸಿಲು ಸಿದ್ಧವಾಗಿದ್ದೇನೆ ಎಂದು ಸವಾಲೆಸದರು.

ಪಕ್ಷದ ಗ್ರಾಮ ಸಮಿತಿ ಸದಸ್ಯ ಬೈಜು ಮಾತನಾಡಿ, ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನಮ್ಮ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಕಸ್ತೂರಿ ರಂಗನ್ ಸಮಿತಿಯ ವರದಿಯನ್ನು ಅನುಷ್ಠಾನಕ್ಕೆ ತರುವುದಿಲ್ಲ ಎಂದು ಭರವಸೆ ಕೊಟ್ಟಿದ್ದರು. ಆದರೆ ಅಧಿಕಾರಕ್ಕೆ ಬಂದ ನಂತರ ನರೇಂದ್ರ ಮೋದಿ ಸರಕಾರ ಈ ದೇಶದ ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಮಾಣಪತ್ರ ಮಂಡಿಸಿ ನಾವು ಕಸ್ತೂರಿ ರಂಗನ್ ಸಮಿತಿಯ ವರದಿಯನ್ನೇ ಅನುಷ್ಠಾನಕ್ಕೆ ತರುತ್ತೇವೆ ಎಂದು ಏಕ ಪಕ್ಷೀಯವಾಗಿ ಭರವಸೆ ಕೊಡುವ ಮೂಲಕ ಬಿಜೆಪಿ ಪಕ್ಷ ಕೊಡಗಿನ ಜನತೆಗೆ ಅತ್ಯಂತ ದೊಡ್ಡ ವಂಚನೆ ಮಾಡಿದೆ ಎಂದು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ಹಂಸ, ಸಾಲಿ ಪೌಲೋಸ್ ಮತ್ತು ಮಂಜು ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News