ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನಿಡಬೇಕು: ಕೆ.ಪಿ.ಸದಾಶಿವಮೂರ್ತಿ
ಚಾಮರಾಜನಗರ, ಸೆ.5: ಚಾಮರಾಜನಗರ ಜಿಲ್ಲೆ ಹಿಂದುಳಿದಿದ್ದರೂ ಜಿಲ್ಲೆಯ ವಿದ್ಯಾರ್ಥಿಗಳು ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ಎಸೆಸೆಲ್ಸಿಯಲ್ಲಿ 12ನೆ ಸ್ಥಾನ ಪಡೆದಿರುವುದು ಸಂತಸಕರ ವಿಷಯ ಎಂದು ಜಿ.ಪಂ.ಸದಸ್ಯ ಹಾಗು ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಪಿ.ಸದಾಶಿವಮೂರ್ತಿ ಮೆಚ್ಚುಗೆ ವ್ಯಕ್ತಪಡಿಸಿದರು.
ಅವರು ತಾಲೂಕಿನ ಕೋಟಂಬಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿ ಮಾತನಾಡಿದರು. ನಮ್ಮ ಜಿಲ್ಲೆಯಲ್ಲಿ ಕಳೆದ ಬಾರಿಗಿಂತ ಈ ಸಾಲಿನಲ್ಲಿ ಹೆಚ್ಚು ವಿದ್ಯಾರ್ಥಿಗಳು ಎಸೆಸೆಲ್ಸಿಯಲ್ಲಿ ತೇರ್ಗಡೆ ಹೊಂದಿದ್ದು, ಮುಂದಿನ ದಿನಗಳಲ್ಲಿ ನೂರಕ್ಕೆ ನೂರರಷ್ಟು ಉತ್ತೀರ್ಣರಾಗುವಲ್ಲಿ ಶಿಕ್ಷಕರು ವಿದ್ಯಾರ್ಥಿಗಳನ್ನು ತಯಾರು ಮಾಡಬೇಕು ಎಂದರು.
ಸೈಕಲ್ ಪಡೆದ ವಿದ್ಯಾರ್ಥಿಗಳು ಸೈಕಲ್ ಅನ್ನು ಬೇರೆ ಉದ್ದೇಶಗಳಿಗೆ ಬಳಸದೆ ಸರಿಯಾದ ಸಮಯಕ್ಕೆ ಶಾಲೆಗೆ ಬರಲು ಉಪಯೋಗಿಸಿಕೊಳ್ಳಬೇಕು. ಅಲ್ಲದೆ ಪೋಷಕರು ಸಹ ತಮ್ಮ ಮಕ್ಕಳ ವಿದ್ಯಾ ಭ್ಯಾಸದ ಕಡೆ ಹೆಚ್ಚು ಗಮನ ನೀಡಿ ಅವರನ್ನು ಉನ್ನತ ಮಟ್ಟಕ್ಕೆ ಕೊಂಡ್ಯೊಯ್ಯಲು ಸಹಕಾರಿಯಾಗಬೇಕು ಎಂದರು.
ಸರ್ಕಾರ ವಿದ್ಯಾಭ್ಯಾಸಕ್ಕಾಗಿ ಉಚಿತ ಮಧ್ಯಾಹ್ನದ ಬಿಸಿಊಟ, ಹಾಲು, ನೋಟ್ ಬುಕ್, ಸಮವಸ್ತ್ರ, ಹಾಸ್ಟೆಲ್ ಸೌಲಭ್ಯ ಇನ್ನು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಕೋಟ್ಯಾಂತರ ರೂ. ವ್ಯಯ ಮಾಡುತ್ತಿದೆ ವಿದ್ಯಾರ್ಥಿಗಳು ಇದನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಪ್ರಜೆಗಳಾಗಬೇಕು ಎಂದು ಕರೆ ನಿಡಿದರು.
ತಾಪಂ ಅಧ್ಯಕ್ಷ ಎಚ್.ವಿ.ಚಂದ್ರು ಮಾತನಾಡಿ, ವಿದ್ಯಾರ್ಥಿಗಳಿಗೆ ತಳಮಟ್ಟದಿಂದಲೇ ಉತ್ತಮ ಶಿಕ್ಷಣ ನೀಡುವಲ್ಲಿ ಶಿಕ್ಷಕರು ಗಮನ ಹರಿಸಬೇಕು ಆಗ ಮಾತ್ರ ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣ ಸುಲಭವಾಗುತ್ತದೆ ಎಂದರು. ಪೋಷಕರು ಸಹ ಶಿಕ್ಷಕರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಶಾಲೆಯ ಅಭಿವೃದ್ಧಿ ಬಗ್ಗೆ ಗಮನ ಹರಿಸಬೇಕು. ಅಲ್ಲದೆ ಶಾಲಾಭಿವೃದ್ಧಿ ಸಮಿತಿಯವರು ಮಕ್ಕಳ ಕಡೆ ಗಮನ ಹರಿಸಿ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆ ತರಲು ಪ್ರಯತ್ನಿಸಬೇಕೆಂದರು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ದೊಡ್ಡತಾಯಮ್ಮ, ಉಪಾಧ್ಯಕ್ಷ ಬೂದಂಬಳ್ಳಿ ಶಂಕರ್, ಸದಸ್ಯರಾದ ರಾಜು, ಶಿವಣ್ಣ, ರಾಜೇಶ್ವರಿ, ಎಸ್‍ಡಿಎಂಸಿ ಅದ್ಯಕ್ಷ ಚಿನ್ನಸ್ವಾಮಿ, ಪಿಎಸಿಸಿ ಬ್ಯಾಂಕ್ ಉಪಾಧ್ಯಕ್ಷ ರಂಗಶೆಟ್ಟಿ, ಮುಖಂಡರಾದ ಸಿದ್ದರಾಜು, ಕುನ್ನೇಗೌಡ, ಗ್ರಾಪಂ ಮಾಜಿ ಅಧ್ಯಕ್ಷ ನಂಜುಂಡೇಗೌಡ, ಎಸ್‍ಡಿಎಂಸಿ ಸದಸ್ಯರಾದ ರಾಜು, ಮಹದೇವಗೌಡ, ನಾಗೇಂದ್ರ, ಮಹೇಶ್, ಮುಖ್ಯ ಶಿಕ್ಷಕ ನಾಘಸೇನಾ ಹಾಗೂ ಶಾಲೆಯ ಶಿಕ್ಷಕರು ಹಾಜರಿದ್ದರು.