ಆದೇಶದ ಪ್ರತಿ ನೋಡಿ, ಪರಿಶೀಲಿಸಿ ಪ್ರತಿಕ್ರಿಯೆ ನೀಡುವೆ : ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಸೆ.5: ಡಿವೈಎಸ್ಪಿ ಎಂಕೆ. ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಆದೇಶ ನೀಡಿದ ಸುಪ್ರೀಂ ಕೋರ್ಟ್ ನ ಆದೇಶದ ಪ್ರತಿ ಇನ್ನೂ ನಮ್ಮ ಕೈ ಸೇರಿಲ್ಲ. ಆದೇಶದ ಪ್ರತಿ ನೋಡಿ, ಪರಿಶೀಲಿಸಿ ಪ್ರತಿಕ್ರಿಯೆ ನೀಡುವುದಾಗಿ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸಿಐಡಿ ತನಿಖೆಯ ಬಿ ರಿಪೋರ್ಟ್ ರದ್ದಾಗಿದೆಯೋ ಅಥವಾ ತನಿಖೆಗೆ ಮರು ಆದೇಶ ಆಗಿದೆಯೋ ಎನ್ನುವುದು ಗೊತ್ತಿಲ್ಲ. ಸಿಬಿಐ ಆದೇಶದ ಪ್ರತಿ ಕೈಗೆ ಸಿಕ್ಕಿದ ಬಳಿಕ ಎಲ್ಲವೂ ತಿಳಿಯಲು ಸಾಧ್ಯ ಎಂದು ಹೇಳಿದ್ದಾರೆ.
ಜಾರ್ಜ್ ರಾಜೀನಾಮೆಗೆ ಬಿಎಸ್ ವೈ ಒತ್ತಾಯ: ಡಿವೈಎಸ್ಪಿ ಎಂಕೆ. ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಒತ್ತಾಯಿಸಿದ್ದಾರೆ.
ಮುಖ್ಯ ಮಂತ್ರಿ ಸಿದ್ದರಾಮಯ್ಯ ಎರಡು ದಿನಗಳ ಒಳಗಾಗಿ ಕೆ.ಜೆ. ಜಾರ್ಜ್ ಅವರ ರಾಜೀನಾಮೆ ಪಡೆಯಬೇಕು. ಇಲ್ಲವಾದರೆ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಬಿಎಸ್ ವೈ ಎಚ್ಚರಿಕೆ ನೀಡಿದ್ದಾರೆ
ಸಿಬಿಐ ತನಿಖೆಯಿಂದ ನಮಗೆ ನ್ಯಾಯ ದೊರೆಯುವ ವಿಶ್ವಾಸವಿದೆ:ಎಂ.ಕೆ ಮಾಚಯ್ಯ
“ಸಿಬಿಐ ತನಿಖೆಯಿಂದ ನಮಗೆ ನ್ಯಾಯ ದೊರೆಯುವ ವಿಶ್ವಾಸವಿದೆ. ತನಿಖೆಗೆ ಪೂರ್ಣ ಸಹಕಾರ ನೀಡುತ್ತೇವೆ. ಸಚಿವರ ರಾಜೀನಾಮೆ ಬಗ್ಗೆ ನಾವು ಮಾತನಾಡುವುದಿಲ್ಲ. ನಮಗೆ ನ್ಯಾಯ ದೊರೆಯಬೇಕು. ಸಹೋದರನ ಸಾವಿಗೆ ಕಾರಣವೇನು ? ಅವರ ಆತ್ಮಹತ್ಯೆ ಹಿಂದೆ ಯಾರೆಲ್ಲ ಇದ್ದಾರೆ ಎಂಬ ಸತ್ಯ ನಮಗೆ ಗೊತ್ತಾಗಬೇಕು” ಎಂದು ಎಂಕೆ ಗಣಪತಿ ಸಹೋದರ ಎಂ.ಕೆ ಮಾಚಯ್ಯ ಹೇಳಿದ್ದಾರೆ.
ಸಿಬಿಐ ಯಾವುದೇ ಒತ್ತಡಕ್ಕೆ ಮಣಿಯದೆ ತನಿಖೆ ನಡೆಸಲಿ:ಎಚ್.ಡಿ.ಕುಮಾರ ಸ್ವಾಮಿ
ಸುಪ್ರೀಂ ಕೋರ್ಟ್ ಆದೇಶವನ್ನು ಸ್ವಾಗತಿಸಿರುವ ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರ ಸ್ವಾಮಿ.ಡಿವೈಎಸ್ ಪಿ ಎಂಕೆ.ಗಣಪತಿ ಕುಟುಂಬಕ್ಕೆ ಅನ್ಯಾಯವಾಗಿತ್ತು. ಕಾಟಾಚಾರಕ್ಕೆ ಸರಕಾರ ತನಿಖೆ ನಡೆಸಿದೆ. ಸಿಬಿಐ ಯಾವುದೇ ಒತ್ತಡಕ್ಕೆ ಮಣಿಯದೆ ತನಿಖೆ ನಡೆಸಲಿ ’’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಸಿಬಿಐ ತನಿಖೆಗೆ ರಾಜ್ಯ ಸರಕಾರ ಸಂಪೂರ್ಣ ಸಹಕಾರ :ಸಚಿವ ರಾಮಲಿಂಗ ರೆಡ್ಡಿ
ಎಂಕೆ ಗಣಪತಿ ಆತ್ಮಹತ್ಯೆ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟ್ ಆದೇಶದಂತೆ ಸಿಬಿಐ ತನಿಖೆ ನಡೆಸಲಿ.ಸಿಬಿಐ ತನಿಖೆಗೆ ರಾಜ್ಯ ಸರಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಗೃಹ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.