ಶಿವಮೊಗ್ಗ: ಎರಡು ಖಾಸಗಿ ಬಯೋ ಸೇವಾ ಕೇಂದ್ರ ರದ್ದತಿಗೆ ಆದೇಶ
ಶಿವಮೊಗ್ಗ, ಸೆ. 5: ಕಾನೂನುಬಾಹಿರವಾಗಿ ಪಡಿತರ ಚೀಟಿದಾರರಿಗೆ ಟೋಕನ್ ಮುದ್ರಿಸಿ ಕೊಡುತ್ತಿದ್ದ ಹಾಗೂ ಸಮರ್ಪಕವಾಗಿ ಕಾರ್ಯನಿರ್ವಹಣೆ ಮಾಡದ ಆರೋಪದ ಮೇರೆಗೆ ಶಿವಮೊಗ್ಗದ ನಗರದ ವಿವಿಧೆಡೆ ಕಾರ್ಯನಿರ್ವಹಿಸುತ್ತಿದ್ದ ಎರಡು ಖಾಸಗಿ ಬಯೋ ಸೇವಾ ಕೇಂದ್ರಗಳನ್ನು ರದ್ದುಗೊಳಿಸಿ ಜಿಲ್ಲಾ ಆಹಾರ ಇಲಾಖೆ ಆದೇಶ ಹೊರಡಿಸಿದೆ.
ಬೊಮ್ಮನಕಟ್ಟೆ ಬಡಾವಣೆಯಲ್ಲಿದ್ದ ಎಂ.ಕೆ.ಎಂಟರ್‍ಪ್ರೈಸಸ್ ಮತ್ತು ಟ್ಯಾಂಕ್ ಮೊಹಲ್ಲಾದ ಎಸ್.ಆರ್.ಟಿ. ಏಜೆನ್ಸಿ ರದ್ದುಗೊಂಡ ಬಯೋ ಸೇವಾ ಕೇಂದ್ರಗಳಾಗಿವೆ ಎಂದು ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಲಕ್ಷ್ಮೀನಾರಾಯಣ ರೆಡ್ಡಿಯವರು ಪತ್ರಿಕಾ ಪ್ರಕಟನೆಯಲ್ಲಿ ಮಾಹಿತಿ ನೀಡಿದ್ದಾರೆ.
ಈ ಎರಡು ಕೇಂದ್ರಗಳಲ್ಲಿ ಇಲಾಖೆಯ ಅನುಮತಿ ಪಡೆಯದೆ ಟೋಕನ್‍ಗಳ ಮುದ್ರಣ ಮಾಡಿ ಕೊಡಲಾಗುತ್ತಿತ್ತು. ಪ್ರತಿ ಟೋಕನ್‍ಗೆ ಪಡಿತರ ಚೀಟಿದಾರರಿಂದ 10 ರೂ. ಸಂಗ್ರಹಿಸಲಾಗುತ್ತಿತ್ತು. ಜೊತೆಗೆ ಸಮರ್ಪಕವಾಗಿ ಕಾರ್ಯನಿರ್ವಹಣೆ ಮಾಡದ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಕೇಳಿ ಬಂದ ದೂರಿನ ಆಧಾರದ ಮೇಲೆ ನಗರ ಅನೌಪಚಾರಿಕ ಪಡಿತರ ಪ್ರದೇಶದ ಸಹಾಯಕ ನಿರ್ದೇಶಕರು ತಪಾಸಣೆ ನಡೆಸಿದಾಗ ಲೋಪ ಕಂಡುಬಂದಿತ್ತು ಎಂದು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಈ ಎರಡು ಕೇಂದ್ರಗಳಿಗೆ ಇಲಾಖೆಯಿಂದ ನೀಡಿದ್ದ ಪ್ರತ್ಯೇಕ ಲಾಗಿನ್‍ಗಳನ್ನು ತಕ್ಷಣದಿಂದಲೇ ರದ್ದುಗೊಳಿಸಲಾಗಿದೆ. ಹಾಗೆಯೇ ಕೇಂದ್ರದವರು ಇಲಾಖೆಗೆ ಕಟ್ಟಿದ್ದ 1000 ರೂ. ಭದ್ರತಾ ಠೇವಣಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಆಹಾರ ಇಲಾಖೆಯ ಅನುಮತಿಯ ಮೇರೆಗೆ ನಗರದ ವಿವಿಧೆಡೆ ಕಾರ್ಯನಿರ್ವಹಣೆ ಮಾಡುತ್ತಿರುವ ಖಾಸಗಿ ಬಯೋ ಸೇವಾ ಕೇಂದ್ರಗಳು ನಿಯಮಾನುಸಾರ ಪಡಿತರದಾರರಿಗೆ ಸೇವೆ ನೀಡಬೇಕು. ಇಲಾಖೆಯ ಅನುಮತಿಯಿಲ್ಲದೆ ಟೋಕನ್‍ಗಳನ್ನು ಮುದ್ರಿಸಿ ಕೊಡುವುದು, ಪಡಿತರ ಚೀಟಿಗೆ ಸಂಬಂಧಿಸಿದ ಕೆಲಸಗಳಿಗೆ ಸಾರ್ವಜನಿಕರಿಂದ ಕಾನೂನುಬಾಹಿರವಾಗಿ ಹಣ ವಸೂಲಿ ಮಾಡಿದ್ದು ಕಂಡುಬಂದರೆ ಶಿಸ್ತು ಕ್ರಮ ಜರಗಿಸಲಾಗುವುದು ಎಂದು ಜಿಲ್ಲಾ ಉಪ ನಿರ್ದೇಶಕ ಲಕ್ಷ್ಮೀನಾರಾಯಣ ರೆಡ್ಡಿಯವರು ಎಚ್ಚರಿಕೆ ನೀಡಿದ್ದಾರೆ.