ಆಧ್ಯಾತ್ಮಿಕ ಚಿಂತನೆಯಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣ: ಚಿಪ್ರಗುತ್ತಿ ಪ್ರಶಾಂತ್

Update: 2017-09-05 13:56 GMT

ಬಣಕಲ್, ಸೆ.5: ಸಮಾಜದಲ್ಲಿ ಆಧ್ಯಾತ್ಮಿಕ ಚಿಂತನೆಯಿಂದ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಸ್ವಾಸ್ಥ್ಯ ಸಮಾಜಕ್ಕಾಗಿ ನಮ್ಮ ಜೀವನ ಕ್ರಮವು ಆಧ್ಯಾತ್ಮಿಕ ಚಿಂತನೆಯೊಂದಿಗೆ ಶಿಸ್ತು ಬದ್ಧವಾದ ಮೌಲ್ಯವರ್ಧಿತ ಶಿಕ್ಷಣ ಮಕ್ಕಳಿಗೆ ದೊರೆಯಬೇಕು ಎಂದು ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಚಿಪ್ರಗುತ್ತಿ ಪ್ರಶಾಂತ್ ಅಭಿಪ್ರಾಯ ಪಟ್ಟರು.

ಅವರು ಕೊಟ್ಟಿಗೆಹಾರದ ತರುವೆ ಏಕಲವ್ಯ ವಸತಿ ಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ವಾಸ್ಥ್ಯಸಂಕಲ್ಪ ಮತ್ತು ಆಧ್ಯಾತ್ಮಿಕ ಚಿಂತನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಕ್ಕಳು ಹದಿಹರೆಯದಲ್ಲಿ ಶಿಕ್ಷಣದ ಜೀವನ ಕ್ರಮ ಹೇಗಿರಬೇಕು. ಆಧ್ಯಾತ್ಮಿಕ ಒಲವಿನಿಂದ ಪ್ರತಿ ಕೆಲಸವು ಫಲಪ್ರದವಾಗುತ್ತದೆ ಎಂದರು.

ಬೆಳಗ್ಗೆ ನಾವು ಏಳುವಾಗ ಬಲಬದಿಯಿಂದ ಏಳುವುದು ಉತ್ತಮ ಏಕೆಂದರೆ ಹೃದಯವು ದೇಹದ ಎಡಭಾಗದಲ್ಲಿ ಇರುವುದರಿಂದ ಬೆಳಗ್ಗೆ ರಕ್ತದ ಒತ್ತಡ ಹೆಚ್ಚಿರುವುದರಿಂದ ಬಲ ಭಾಗದಲ್ಲಿ ಏಳುವ ಹವ್ಯಾಸ ರೂಢಿಸಿಕೊಳ್ಳಿ. ಮಕ್ಕಳ ಮನಸ್ಸು ಮೃದುವಾಗಿದ್ದು ಹದಿಹರೆಯದಲ್ಲಿ ಉತ್ತಮ ದಾರಿಯಲ್ಲಿ ನಡೆಯಲು ಹಲವು ಅಡೆತಡೆಗಳು ಬರುತ್ತವೆ. ಅದನ್ನು ನಿಭಾಯಿಸಿ ಮನಸ್ಸನ್ನು ಹಗುರಗೊಳಿಸಿ ಆಧ್ಯಾತ್ಮಿಕವಾಗಿ ದೇವರನ್ನು ಸ್ತುತಿಸಬೇಕು ಎಂದು ತಿಳಿಸಿದರು.

ಶಿಕ್ಷಕರು ಮತ್ತು ಪೋಷಕರು ಮಕ್ಕಳಿಗೆ ಮೌಲ್ಯವರ್ಧಿತ ಶಿಕ್ಷಣ ನೀಡುವುದು ಮುಖ್ಯವಾಗುತ್ತದೆ. ಶಿಕ್ಷಣವನ್ನು ಯಾರು ಕೊಡಬಹುದು. ಆದರೆ ವಿದ್ಯೆಯನ್ನು ಗುರು ಮಾತ್ರ ನೀಡಬಲ್ಲವರಾಗಿದ್ದಾರೆ. ತಂದೆ ತಾಯಿಗೆ ಗೌರವ ನೀಡುವುದನ್ನು ಶಾಲೆಯಲ್ಲಿ ಶಿಕ್ಷಕರು ಕಲಿಸಬೇಕು. ಜಾತಿ ಭೇದ ಮಾಡದೇ ಮೌಲ್ಯವರ್ಧಿತ ಶಿಕ್ಷಣ ನೀಡುವುದರಲ್ಲಿ ಶಿಕ್ಷಕರ ಪಾತ್ರ ಅಪಾರವಾಗಿದೆ ಎಂದರು.

ಮಕ್ಕಳು ಇತ್ತೀಚೆಗೆ ಮೊಬೈಲ್ ಬಳಕೆಯಿಂದ ದಾರಿ ತಪ್ಪುತ್ತಿದ್ದಾರೆ. ಮಕ್ಕಳ ಶಿಕ್ಷಣದ ಜೀವನಕ್ರಮವನ್ನು ಪೋಷಕರು ಸೂಕ್ಷ್ಮವಾಗಿ ಗಮನಿಸಿ ಅವರನ್ನು ತಪ್ಪು ದಾರಿಗೆ ಹೋಗದಂತೆ ಉತ್ತಮ ಮಾರ್ಗಧರ್ಶನ ನೀಡಬೇಕಿದೆ. ಉತ್ತಮ ಚಿಂತನೆಯಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ತರುವೆ ಏಕಲವ್ಯ ವಸತಿ ಶಾಲಾ ಪ್ರಾಂಶುಪಾಲ ಟಿ.ಸತೀಶ್ ವಹಿಸಿದ್ದರು. ಧರ್ಮಸ್ಥಳ ಸಂಘದ ಯೋಜನಾಧಿಕಾರಿ ಸಂಜೀವ ನಾಯಕ, ಬಣಕಲ್‍ನ ವಲಯ ಮೇಲ್ವಿಚಾರಕಿ ಎಸ್.ಎಚ್.ಶಶಿಕಲ, ತರುವೆ ಒಕ್ಕೂಟದ ಅಧ್ಯಕ್ಷ ದೇವನಗೂಲ್ ಸಂದೀಪ್, ಧರ್ಮಸ್ಥಳ ಸಂಘದ ಗ್ರಾಮ ಸೇವಾ ಪ್ರತಿನಿಧಿ ಮತ್ತು ರಾಜ್ಯ ಜೇನು ಕೃಷಿ ಪ್ರಶಸ್ತಿ ವಿಜೇತ ಎ.ಬಿ.ಸುರೇಶ್‍ಗೌಡ, ಶಿಕ್ಷಕ ನಾಗಪ್ಪ ಬಿಸನಾಳ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News