ಸಿರಬಡಿಗೆ: ಹೈನುಗಾರಿಕೆ ಕುರಿತ ವಿಚಾರ ಸಂಕಿರಣ
ಚಿಕ್ಕಮಗಳೂರು, ಸೆ.5: ವಿನಾಶದ ಅಂಚಿನಲ್ಲಿರುವ ದೇಶಿಯ ಗೋತಳಿಗಳನ್ನು ರೈತರು ಎಷ್ಟೇ ಕಷ್ಟವಾದರೂ ಬಿಡದೇ ಸಲಹುವ ಮೂಲಕ ಅವುಗಳನ್ನು ಮುಂದಿನ ಪೀಳಿಗೆಗೆ ಉಳಿಸಬೇಕು ಎಂದು ಹಿರಿಯ ಪಶುಪರೀಕ್ಷಕ ಕ.ದ.ಕೃಷ್ಣರಾಜು ಮನವಿ ಮಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕಿನ ಸಿರಬಡಿಗೆ ಗ್ರಾಮದಲ್ಲಿ ಏರ್ಪಡಿಸಿದ್ದ ಹೈನುಗಾರಿಕೆ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗೋವು ಚಲಿಸುವ ದೇವಾಲಯ ಮತ್ತು ಔಷಧಾಲಯವಾಗಿದೆ, ಗೋವುಗಳು ರೈತನ ಎರಡು ಕಣ್ಣುಗಳು, ಜಾನುವಾರುಗಳು ಇಲ್ಲದಿದ್ದರೆ ಕೃಷಿ ಚಟುವಟಿಕೆ ಸಾಧ್ಯವಿಲ್ಲ ಎಂದು ಹೇಳಿದರು.
ಗೋಮೂತ್ರ ಮತ್ತು ಸಗಣಿಯನ್ನು ಕೃಷಿಗೆ ಬಳಸುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ, ಅಧಿಕ ಇಳುವರಿ ಹಾಗೂ ಲಾಭ ದೊರೆಯುತ್ತದೆ. ಮನುಷ್ಯನ ದುರಾಸೆ ಮತ್ತು ಸ್ವಾರ್ಥದಿಂದಾಗಿ ಗೋಸಂತತಿ ಈಗಾಗಲೇ ಅಳಿವಿನ ಅಂಚಿನಲ್ಲಿದೆ ಈಗಲಾದರೂ ಎಚ್ಚೆತ್ತು ಅವುಗಳನ್ನು ಕಾಪಾಡದಿದ್ದರೆ ಮುಂದಿನ ಪೀಳಿಗೆಗೆ ಭಾವಚಿತ್ರದಲ್ಲಿ ಮಾತ್ರ ನೋಡಲು ಸಾಧ್ಯವಾಗುತ್ತದೆ ಎಂದು ಎಚ್ಚರಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಬೇಬಿ ಮಾತನಾಡಿ, ರೈತರಿಗೆ ಹೈನುಗಾರಿಕೆ ಮಾಡಲು ಸಂಸ್ಥೆ ವತಿಯಿಂದ ಕೊಟ್ಟಿಗೆ ನಿರ್ಮಾಣ, ಗೋವುಗಳ ಖರೀದಿ, ಹಾಲು ಕರೆಯುವ ಯಂತ್ರ ಸೇರಿದಂತೆ ಇನ್ನಿತರ ವೆಚ್ಚಗಳಿಗೆ ಸಾಲ ಮತ್ತು ಸಹಾಯ ಧನ ನೀಡಲಿದೆ. ಅದನ್ನು ಬಳಸಿ ಕೊಳ್ಳುವ ಮೂಲಕ ಗ್ರಾಮೀಣ ಜನತೆ ಆರ್ಥಿಕವಾಗಿ ಸಬಲರಾಗಬೇಕು. ಗೋತಳಿಗಳನ್ನು ಕಾಪಾಡಬೇಕು ಎಂದು ಮನವಿ ಮಾಡಿದರು.
ಈ ಸಂರ್ಭದಲ್ಲಿ ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ಜಯಂತಿ ಅಧ್ಯಕ್ಷತೆ ವಹಿಸಿದ್ದರು. ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಶಿವರುದ್ರಪ್ಪ, ಕಾರ್ಯದರ್ಶಿ ಓಂಕಾರಪ್ಪ, ಮಾಜಿ ಪ್ರಧಾನ ಚಂದ್ರಪ್ಪ, ಯೋಜನೆಯ ಕೃಷಿ ಮೇಲ್ವಿಚಾರಕ ದೇವರಾಜ್, ವಲಯ ಮೇಲ್ವಿಚಾರಕ ತಿಲಕ್‍ರಾಜ್ ಉಪಸ್ಥಿತರಿದ್ದರು.