ಸಾವಯವ ಕೃಷಿಯ ಮೂಲಕ ರೈತರು ಹಸಿರು ಕ್ರಾಂತಿಗೆ ಮುಂದಾಗಬೇಕು: ಶೋಭಾ ಕರಂದ್ಲಾಜೆ
ಮೂಡಿಗೆರೆ, ಸೆ.5: ಭಾರತದಲ್ಲಿ ಆಹಾರ ಉತ್ಪಾದನೆ ಕಡಿಮೆಯಾಗಿದ್ದರಿಂದ ವಿದೇಶಗಳಿಂದ ಕೊಳೆತ ಆಹಾರಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಇವುಗಳನ್ನು ಕೊನೆಗೊಳಿಸುವ ಹಸಿರು ಕ್ರಾಂತಿಗಾಗಿ ಪಣ ತೊಡಲು ಭಾರತೀಯ ರೈತರು ಸಿದ್ಧರಾಗಬೇಕು. ಅದಕ್ಕಾಗಿ ಆಯಾ ರಾಜ್ಯ ಸರಕಾರಗಳು ಬಿತ್ತನೆ ಬೀಜ ಸಹಿತ ಅಗತ್ಯ ಸಲಕರಣೆಗಳನ್ನು ರೈತರಿಗೆ ಒದಗಿಸಬೇಕೆಂದು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಅವರು ಪಟ್ಟಣದ ರೈತ ಭವನದಲ್ಲಿ ಮಂಗಳವಾರ ಕೃಷಿ ಮತ್ತು ತೋಟಗಾರಿಕ ವಿಶ್ವ ವಿದ್ಯಾಲಯ ಹಾಗೂ ಕೃಷಿ ವಿಜ್ಞಾನ ಕೇಂದ್ರ ವತಿಯಿಂದ ನಡೆದ ಸಂಕಲ್ಪದಿಂದ ಸಿದ್ಧಿ, ನ್ಯೂ ಇಂಡಿಯಾ ಮಂಥನ್ ಕಾರ್ಯಕ್ರಮದಲ್ಲಿ ಮಾತನಾಡಿ, ರೈತರೆಲ್ಲರೂ ಹಸಿರು ಕ್ರಾಂತಿಗಾಗಿ ಸಾವಯವ ಗೊಬ್ಬರವನ್ನು ಬಳಸುವುದು ಅಗತ್ಯವಿದೆ. ರಾಸಾಯನಿಕ ಗೊಬ್ಬರಗಳಿಂದ ಭೂಮಿ ವಿಷಕಾರಿಯಾಗಿದೆ. ಅಲ್ಲಿ ಬೆಳೆಯುವ ತರಕಾರಿ ಸಹಿತಿ ವಿವಿಧ ಬೆಳೆಗಳು ವಿಷಯುಕ್ತವಾಗಿದೆ. ಆದ್ದರಿಂದ ಸಾವಯವ ಕೃಷಿಯ ಮೂಲಕ ರೈತರು ಹಂತ ಹಂತವಾಗಿ ಹಸಿರು ಕ್ರಾಂತಿಗೆ ಮುಂದಾಗಬೇಕು ಎಂದು ಕರೆ ನೀಡಿದರು.
ಶಾಸಕ ಬಿ.ಬಿ.ನಿಂಗಯ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರೈತರು ಆತ್ಮಹತ್ಯಗೆ ಶರಣಾಗುವುದಕ್ಕೆ ಕಾರಣವೇನೆಂಬುದನ್ನು ಮೊದಲು ಅರಿತುಕೊಳ್ಳುವ ಕೆಲಸ ಸರಕಾರದಿಂದಾಗಬೇಕು. ಸಾವನ್ನಪ್ಪಿದ ರೈತರ ಜೀವಕ್ಕೆ 5 ಲಕ್ಷದಂತೆ ಪರಿಹಾರ ನಿಗದಿಗೊಳಿಸಿದ್ದರೆ ಅದು ಮೂರ್ಖತನವಾಗುತ್ತದೆ. ರೈತನ ಜೀವಕ್ಕೆ ಬೆಲೆ ನಿಗದಿಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ. ರೈತರು ಆಕಸ್ಮಿಕವಾಗಿ ಸಾವನ್ನಪ್ಪಿದರೆ ರೈತ ಸಂಜೀವಿನಿಯಂತಹ ಯೋಜನೆಗಳು ರೈತರನ್ನು ಸಂತೃಪ್ತಿಗೊಳಿಸುವುದು ಅಸಾಧ್ಯ. ಕೃಷಿಯನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವ ಸಂಕಲ್ಪ ಭಾವನೆ ಹೊಂದುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಎಂಎಲ್‍ಸಿ ಎಂ.ಕೆ.ಪ್ರಾಣೇಶ್ ಮಾತನಾಡಿ, ಹವಮಾನ ವೈಪರ್ಯತ್ಯದಿಂದ ರೈತರು ಸಂಕಷ್ಟದ ಸ್ಥಿತಿಗೆ ತಲುಪಿದ್ದಾರೆ. ಕಾರ್ಯಕ್ರಮಗಳಲ್ಲಿ ಮಾತ್ರ ಸಂಕಲ್ಪ ಮಾಡುವುದಾದರೆ ಅದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಸಂಕಲ್ಪವನ್ನು ಕಾರ್ಯರೂಪಕ್ಕೆ ತಂದರೆ ಮಾತ್ರ ಅದು ಪ್ರಯೋಜನವಾಗುತ್ತದೆ. ಭಾರತ ಕೃಷಿ ಪ್ರಧಾನ ದೇಶದಲ್ಲಿ ಕೃಷಿಗೆ ಹೆಚ್ಚು ಆಧ್ಯತೆ ನೀಡಬೇಕಾಗಿದೆ. ಈ ದೇಶ ಮುಂದುವರೆಯಬೇಕೆಂದರೆ ಒಬ್ಬ ವ್ಯಕ್ತಿಯಿಂದ ಮಾತ್ರ ಸಾಧ್ಯವಿಲ್ಲ. ಆದ್ದರಿಂದ ಸಾಮೂಹಿಕ ಕೃಷಿಯ ಮೂಲಕ ದೇಶದ ಆರ್ಥಿಕ ಪರಿಸ್ಥಿತಿಯನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯವ ಕೆಲಸ ರೈತರಿಂದಾಗಬೇಕಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿ.ವಿ ಕುಲಪತಿ ಡಾ.ಪಿ.ನಾರಾಯಣ ಸ್ವಾಮಿ ವಹಿಸಿದ್ದರು.
ಜಿಪಂ ಅಧ್ಯಕ್ಷೆ ಚೈತ್ರಶ್ರಿ, ತಾಪಂ ಅಧ್ಯಕ್ಷ ಕೆ.ಸಿ.ರತನ್, ಜಿಪಂ ಸದಸ್ಯ ಶಾಮಣ್ಣ, ತಾಪಂ ಭಾರತಿ ರವೀಂದ್ರ, ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಬಿ.ಎಸ್.ಜಯರಾಂ, ಕೃಷಿಕ ಸಮಾಜದ ಅಧ್ಯಕ್ಷ ಡಿ.ಎಲ್.ಅಶೋಕ್ ಕುಮಾರ್, ವಿಸ್ತರಣ ನಿರ್ದೇಶಕ ಡಾ.ಟಿ.ಹೆಚ್.ಗೌಡ, ಕಾಫಿ ಬೆಳೆಗಾರ ಕಲ್ಲೇಶ್ ಉಪಸ್ಥಿತರಿದ್ದರು.