ಹೇಮಾವತಿ ನೀರಿಗಾಗಿ ಡಿಸಿ ಕಚೇರಿ ಮುತ್ತಿಗೆ ಯತ್ನ: ಬಿಜೆಪಿ ಕಾರ್ಯಕರ್ತರ ಬಂಧನ, ಬಿಡುಗಡೆ
ತುಮಕೂರು, ಸೆ.5:ಜಿಲ್ಲೆಯಲ್ಲಿ ಹೇಮಾವತಿ ನೀರಿಗಾಗಿ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಎಲ್ಲಾ ಕೆರೆಗಳಿಗೆ ಹೇಮಾವತಿ ಹರಿಸುವಂತೆ ಆಗ್ರಹಿಸಿ ಶಾಸಕ ಬಿ. ಸುರೇಶ್‍ಗೌಡ ನೇತೃತ್ವದಲ್ಲಿ ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ನೂರಾರು ಮಂದಿ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ನಂತರ ಬಿಡುಗಡೆ ಮಾಡಿದರು.
ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಗ್ರಾಮಾಂತರ ಕ್ಷೇತ್ರದ ವಿವಿಧೆಡೆಗಳಿಂದ ಜಮಾಯಿಸಿದ್ದ ನೂರಾರು ಮಂದಿ ಬಿಜೆಪಿ ಕಾರ್ಯಕರ್ತರು ರಾಜ್ಯ ಸರಕಾರ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ವೇಳೆ ಶಾಸಕ ಬಿ. ಸುರೇಶ್‍ಗೌಡ ಹಾಗೂ ಕಾರ್ಯಕರ್ತರು ಪೊಲೀಸ್ ಸರ್ಪಗಾವಲನ್ನು ಬೇಧಿಸಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದರು. ತಕ್ಷಣ ಎಚ್ಚೆತ್ತ ಪೊಲೀಸರು ಶಾಸಕ ಸುರೇಶ್‍ಗೌಡ ಹಾಗೂ ಕಾರ್ಯಕರ್ತರನ್ನು ಬಂಧಿಸಿ ಸಾರಿಗೆ ಸಂಸ್ಥೆ ಬಸ್‍ನಲ್ಲಿ ಕರೆದೊಯ್ಯಲು ಯತ್ನಿಸಿದಾಗ ರೊಚ್ಚಿಗೆದ್ದ ಬಿಜೆಪಿ ಕಾರ್ಯಕರ್ತರು ಬಸ್‍ಗೆ ಅಡ್ಡಲಾಗಿ ನಿಂತು ತಮ್ಮ ಕೈಯಲ್ಲಿದ್ದ ಬಿಜೆಪಿ ಬಾವುಟದ ಕಡ್ಡಿಗಳು ಹಾಗೂ ಇನ್ನು ಕೆಲವರು ಕಲ್ಲು ತೂರಿ ಬಸ್‍ನ ಕಿಟಕಿಯ ಗಾಜುಗಳನ್ನು ಪುಡಿ ಪುಡಿ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಬಿ.ಸುರೇಶ್‍ಗೌಡ ಮಾತನಾಡಿ, ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಜನ-ಜಾನುವಾರುಗಳು ಕುಡಿಯಲು ನೀರಿಲ್ಲದೆ ಪರದಾಡುತ್ತಿದ್ದಾರೆ. ನೀರಿಗಾಗಿ ಹಾಹಾಕಾರ ಉಂಟಾಗಿದೆ. ಆದರೂ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಇದ್ಯಾವುದನ್ನೂ ಲೆಕ್ಕಿಸದೆ ತಮಗೆ ಮನಬಂದಂತೆ ನೀರು ಬಿಡುತ್ತಿದ್ದಾರೆ.ಕಾನೂನು ಪ್ರಕಾರ ಕೊನೆಯ ಭಾಗದ ಕೆರೆಗಳನ್ನು ತುಂಬಿಸಬೇಕಾಗಿದೆ.ಆದರೆ ಇವರು ಮೊದಲ ಭಾಗದಿಂದ ನೀರನ್ನು ಪೋಲು ಮಾಡಿಕೊಂಡು ಬರುತ್ತಿರುವುದರಿಂದ ಗ್ರಾಮಾಂತರ ಭಾಗದ ಕೆರೆಗಳಿಗೆ ನೀರು ಇಲ್ಲದಂತಾಗಿದೆ.ಇದನ್ನು ನೋಡಿದರೆ ಜಿಲ್ಲೆಯಲ್ಲಿ ಕಾನೂನು ಪಾಲನೆ ಆಗುತ್ತದೆಯೇ ಎಂಬ ಅನುಮಾನ ಮೂಡುತ್ತಿದೆ ಎಂದು ಕಿಡಿಕಾರಿದರು.
ರೈತರ ಹೋರಾಟವನ್ನು ಹತ್ತಿಕ್ಕಲು ಪ್ರತಿಭಟನಾಕಾರರಕ್ಕಿಂತ ಪೊಲೀಸರನ್ನೇ ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ. ರೈತರಿಗೆ ತಮ್ಮ ಹಕ್ಕು ಕೇಳಲು ಸಹ ಸ್ವಾತಂತ್ರ್ಯ ಇಲ್ಲವೇ ಎಂದು ಪ್ರಶ್ನಿಸಿದರು.
ನಮ್ಮ ಹಕ್ಕಿಗಾಗಿ ಹೋರಾಟ ಮಾಡಲೇಬೇಕು. ಇಲ್ಲದಿದ್ದರೆ ನಮಗೆ ಸಿಗಬೇಕಾದ ಸೌಲಭ್ಯವಾಗಲೀ, ಹೇಮಾವತಿ ನೀರಾಗಲಿ ಯಾವುದೂ ದೊರೆಯುವುದಿಲ್ಲ. ಹೇಮಾವತಿ ಜಲಾಶಯದಿಂದ 1110 ಕ್ಯೂಸೆಕ್ ನೀರನ್ನು ಬಿಡಲಾಗಿತ್ತು. ಆದರೆ ನಮ್ಮ ಭಾಗಕ್ಕೆ ಬರುವಷ್ಟರಲ್ಲಿ ಕೇವಲ 500-600 ಕ್ಯೂಸೆಕ್ಸ್ ಮಾತ್ರ ನೀರು ಹರಿಯುತ್ತಿದೆ.ಇನ್ನುಳಿದ ನೀರೆಲ್ಲಾ ಮಾರ್ಗಮಧ್ಯೆಯೇ ಕಳ್ಳತನವಾಗುತ್ತಿದೆ. ಇದನ್ನು ತಡೆಗಟ್ಟಲು ಸಾಧ್ಯವಾಗದ ಜಿಲ್ಲಾಡಳಿತ ರೈತರನ್ನು ಕಳ್ಳರಂತೆ ಬಂಧಿಸಲು ಮುಂದಾಗಿದೆ. ಕ್ಷೇತ್ರದ ಜನ ನೆಮ್ಮದಿಯಾಗಿ ಬದುಕುಬೇಕು ಎಂಬುದು ನನ್ನ ಉದ್ದೇಶ. ಆದರೆ ಕೆಲವು ರಾಜಕಾರಣಿಗಳ ಕುತಂತ್ರದಿಂದಾಗಿ ನೆಮ್ಮದಿಗೆ ಭಂಗ ಉಂಟಾಗಿದೆ. ಈ ಭಾಗದ ರೈತರು ನೀರು ಹರಿಯುವವರೆಗೆ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದ ನೂರಾರು ಮಂದಿ ಬಿಜೆಪಿ ಕಾರ್ಯಕರ್ತರುಗಳು ಪಾಲ್ಗೊಂಡಿದ್ದರು.