×
Ad

ಸಮಾಜದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಪ್ರಮುಖ: ಗಣೇಶ್ ಕಾರ್ಣಿಕ್

Update: 2017-09-05 23:47 IST

ಮಡಿಕೇರಿ, ಸೆ.5: ಸಮಾಜದ ಅಭಿವೃದ್ಧಿಯಲ್ಲಿ ಹಾಗೂ ಉತ್ತಮ ಪ್ರಜೆಗಳ ರಚನೆಯಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದ್ದು, ಸಮಾಜ ಶಿಕ್ಷಕರನ್ನು ಗೌರವಿಸುವ ಮಹತ್ಕಾರ್ಯವನ್ನು ಮಾಡಬೇಕೆಂದು ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಗಣೇಶ್ ಕಾರ್ಣಿಕ್ ಕರೆ ನೀಡಿದ್ದಾರೆ.

ನಗರದ ಸಂತ ಜೋಸೆಫರ ಶಾಲೆಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಇವರ ಸಂಯುಕ್ತ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ವಪಲ್ಲಿ ರಾಧಾಕೃಷ್ಣನ್ ಜಗತ್ತು ಕಂಡ ಶ್ರೇಷ್ಠ ಚಿಂತಕ. ಭಾರತೀಯ ತತ್ವಶಾಸ್ತ್ರದಲ್ಲಿ ಅಪಾರ ಜ್ಞಾನ ಹೊಂದಿದ್ದರು. ತತ್ವಜ್ಞಾನವನ್ನು ಜಗತ್ತಿಗೆ ಪರಿಚಯಿಸಿದರು ಎಂದು ಹೇಳಿದರು. 

 ಎಲ್ಲರ ಬದುಕಿನಲ್ಲಿ ಬೆಳಕನ್ನು ಮೂಡಿಸುವ ಕೆಲಸವನ್ನು ಶಿಕ್ಷಕರು ಮಾಡುತ್ತಿದ್ದಾರೆ. ಅವರ ಜೀವನ ಎಲ್ಲರಿಗೂ ಪ್ರೇರಣೆಯಾಗಿದೆ. ಸಮಾಜದ ಅಭಿವೃದ್ದಿಗೆ ಶಿಕ್ಷಕರ ಕೊಡುಗೆ ಅಪಾರ. ವಿದ್ಯಾರ್ಥಿಗಳಿಗೆ ಒಳ್ಳೆಯ ಸಲಹೆ, ಮಾರ್ಗದರ್ಶನ ನೀಡಿದರೆ ಸಮಾಜವನ್ನು ಮತ್ತಷ್ಟು ಪರಿವರ್ತನೆಯತ್ತ ಕೊಂಡೊಯ್ಯಬಹುದು ಎಂದು ಗಣೇಶ್ ಕಾರ್ಣಿಕ್ ತಿಳಿಸಿದರು.

ಶಿಕ್ಷಕರು ಪ್ರತಿಯೊಂದು ಮಗುವನ್ನು ತನ್ನ ಮಗು ಎಂದು ಭಾವಿಸಿದಾಗ ಸಮಾಜದಲ್ಲಿ ಪರಿವರ್ತನೆ ಕಾಣಬಹುದು. ಆ ದಿಸೆಯಲ್ಲಿ ದೇಶ ಬದಲಾಗಬೇಕಾದರೆ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ನನ್ನ ಪಾತ್ರ ಏನು ಎಂದು ಯೋಚಿಸಬೇಕು ಎಂದು ಹೇಳಿದರು. 

ಶಾಸಕ ಕೆ.ಜಿ.ಬೋಪಯ್ಯ ಅವರು ಮಾತನಾಡಿ, ಶಿಕ್ಷಕರು ಉತ್ತಮ ಪ್ರಜೆಗಳನ್ನು ರೂಪಿಸುವ ರೂವಾರಿಗಳಾಗಿದ್ದು, ಸಮಾಜದ ಅಭಿವೃದ್ಧಿಗೆ ಮತ್ತಷ್ಟು ಶ್ರಮಿಸಬೇಕು. ಶಿಕ್ಷಕರು ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡುವುದರ ಜತೆಗೆ ವ್ಯಕ್ತಿತ್ವ ನಿರ್ಮಾಣ ಮಾಡಲು ಪಣ ತೊಡುವಂತಾಗಬೇಕು ಎಂದರು. 

ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿಸೆಂಟ್ ಡಿಸೋಜ ಮಾತನಾಡಿ,  ಮೌಲ್ಯಯುತ ಶಿಕ್ಷಣ ಅನುಷ್ಠಾನಕ್ಕೆ ಸಮಾಜ ಹಾಗೂ ಶಿಕ್ಷಣ ಸಂಸ್ಥೆಗಳು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕು. ಸರ್ಕಾರದ ಜೊತೆಗೆ ಸಮಾಜ ಹಾಗೂ ಶಿಕ್ಷಣ ಸಂಸ್ಥೆಗಳು ಕೈಜೋಡಿಸಿದಾಗ ಆರೋಗ್ಯಯುತ ಸಮಾಜ ನಿರ್ಮಾಣ ಮಾಡಬಹುದು. ಯಾವುದೇ ಕ್ಷೇತ್ರದಲ್ಲಿ ಕಲಿಕೆ ನಿರಂತರವಾಗಿರಬೇಕು ಎಂದು ಅಭಿಪ್ರಾಯಪಟ್ಟರು.


ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಪ್ರಾಥಮಿಕ ಶಾಲಾ ವಿಭಾಗದಲ್ಲಿ ಮಡಿಕೇರಿ ತಾಲೂಕು ಕರಿಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಧರ್ ಎಸ್, ಸೋಮವಾರಪೇಟೆ ತಾಲೂಕಿನ ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾದ ಸತೀಶ್ ಸಿ.ಎಸ್., ವಿರಾಜಪೇಟೆ ತಾಲೂಕಿನ ಬೆಕ್ಕೆಸೊಡ್ಲೂರು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಕೃಷ್ಣ ಕೆ.ಈ. ಪ್ರೌಢ ಶಾಲಾ ವಿಭಾಗದಿಂದ ಮಡಿಕೇರಿ ತಾಲೂಕು ಚೆಯ್ಯಂಡಾಣೆ, ನರಿಯಂದಡ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಆರ್.ಮನೋಹರ್ ನಾಯ್ಕ್, ಸೋಮವಾರಪೇಟೆ ತಾ. ಎಸ್.ಜೆ.ಎಂ. ಬಾಲಿಕಾ ಪ್ರೌಢಶಾಲೆಯ ವೃತ್ತಿ ಶಿಕ್ಷಕರಾದ ವಿರುಪಾಕ್ಷಯ್ಯ ಎಸ್.ಎಸ್. ಹಾಗೂ ವಿರಾಜಪೇಟೆ ತಾಲ್ಲೂಕು ಟಿ.ಶೆಟ್ಟಿಗೇರಿ ಎಂ.ಎಂ.ಸ್ಮಾರಕ ಸರ್ಕಾರಿ ಪ್ರೌಢ ಶಾಲೆಯ ರುಕ್ಮಿಣಿ ಸಿ.ಕೆ. ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.   

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಡಿ.ಎಂ.ದಾನೋಜಿ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್.ಗಾಯತ್ರಿ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಜೋಯಪ್ಪ ಬಿ.ಆರ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ.ಸೋಮಶೇಖರ, ಅನುದಾನಿತ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಎ.ಮೋಹನ್, ಕ.ರಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಎಚ್.ಎಸ್.ಚೇತನ್, ಕೊ.ಜಿ.ಪ್ರಾ.ಶಾ.ಮು.ಶಿ.ಸಂಘದ ಅಧ್ಯಕ್ಷ ಎನ್.ಕೆ. ಪ್ರಭು, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ಎ.ಪ್ರವೀಣ್, ಮಡಿಕೇರಿ ತಾಲ್ಲೂಕು ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮಹಬೂಬ್‍ಸಾಬ್ ಎನ್.ಕೆ., ಮಡಿಕೇರಿ ಕ.ರಾ.ಪ್ರಾ.ಸ.ಶಿ.ಸಂಘದ ಅಧ್ಯಕ್ಷ ಜನಾರ್ಧನ ಹಾಗೂ ಮಡಿಕೇರಿ ಅನುದಾನಿತ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾದ ವಿಲ್‍ಫ್ರೇಡ್ ಕ್ರಾಸ್ತಾ ಇತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News