ಕಾನೂನು ಶಿಕ್ಷಣ ಪಡೆದವರಿಗೆ ವಿಫುಲ ಅವಕಾಶ: ನ್ಯಾ. ಎ.ಕೆ.ನವೀನ ಕುಮಾರಿ
ತುಮಕೂರು, ಸೆ.6: ಕಾನೂನು ಶಿಕ್ಷಣ ಪಡೆಯುವುದರಿಂದ ವಿಫುಲವಾದ ಅವಕಾಶಗಳಿದ್ದು, ವಿದ್ಯಾರ್ಥಿಗಳು ವೃತ್ತಿ ನೈಪುಣ್ಯತೆ ಯನ್ನು ಮೈಗೂಡಿಸಿಕೊಳ್ಳಲು ಕಠಿಣವಾದ ಅಧ್ಯಯನ ನಡೆಸುವುದರಿಂದ ಉನ್ನತ ಸ್ಥಾನಮಾನವನ್ನು ಪಡೆಯಬಹುದಾಗಿದೆ ಎಂದು ಪ್ರಧಾನ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶೆ ಎ.ಕೆ.ನವೀನ್‍ಕುಮಾರಿ ತಿಳಿಸಿದ್ದಾರೆ.
ನಗರದ ಸೂಫಿಯಾ ಕಾನೂನು ಕಾಲೇಜಿನಲ್ಲಿ ಆಯೋಜಿಸಿದ್ದ ಹೊಸ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಮತ್ತು ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು,ಶಿಕ್ಷಕರಾಗಿದ್ದ ಸರ್ವೆಪಲ್ಲಿ ರಾಧಕೃಷ್ಣನ್ ರವರು ರಾಷ್ಟ್ರಪತಿ ಸ್ಥಾನವನ್ನು ಅಲಕರಿಸಿದ್ದರು. ವಿಜ್ಞಾನಿಯಾಗಿದ್ದ ಎ.ಪಿಜೆ ಅಬ್ದುಲ್ ಕಲಾಂರವರು ರಾಷ್ಟ್ರಪತಿಯ ಸ್ಥಾನವನ್ನು ಹೊಂದಿದ್ದರೂ ಕೂಡ ಶಿಕ್ಷಕ ವೃತ್ತಿಯನ್ನುಹೆಚ್ಚು ಪ್ರೀತಿಸುತ್ತಿದ್ದರು. ಶಿಕ್ಷಕರು ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳಾಗಿ ರೂಪಿಸುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತಾರೆ ಎಂದರು.
ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅನ್ನದ ಮಾರ್ಗವನ್ನು ಕಂಡುಕೊಳ್ಳಲು ಶಿಕ್ಷಕರ ಪಾತ್ರ ಮಹತ್ತರವಾದುದ್ದು, ಆದ್ದರಿಂದ ವಿದ್ಯಾರ್ಥಿಗಳು ಉನ್ನತ ಸ್ಥಾನಮಾನವನ್ನು ಪಡೆಯಲು ಕಾನೂನು ವಿದ್ಯಾರ್ಥಿಗಳು ಹೆಚ್ಚು ಅಧ್ಯಯನ ಮಾಡುವ ವಿದ್ಯಾರ್ಥಿಗಳು ಆಸಕ್ತಿ ವಹಿಸಬೇಕು.ಹೆಣ್ಣು ಮಕ್ಕಳು ಕಾನೂನು ಶಿಕ್ಷಣ ಪಡೆಯಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಾಬಾ ಸಾಹೇಬ್ ಜಿನರಾಳ್ಕರ್ ಮಾತನಾಡಿ, ಸಂವಿಧಾನದ ಹಕ್ಕುಗಳ ಜಾರಿಗೆ, ಸಾಮಾಜಿಕ ನ್ಯಾಯದ ಪ್ರತಿಪಾದನೆಗೆ ಕಟ್ಟಿ ಬದ್ಧರಾಗಬೇಕಾದ ಜವಾಬ್ದಾರಿ ಕಾನೂನು ವಿದ್ಯಾರ್ಥಿಗಳ ಮೇಲೆ ಇದ್ದು, ವಿದ್ಯಾರ್ಥಿಗಳು ಕಾನೂನಿನ ಸಂಪೂರ್ಣ ಅಧ್ಯಯನದಿಂದ ಸ್ವಯಂ ಹಕ್ಕುಗಳ ರಕ್ಷಣೆಯೊಂದಿಗೆ ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡಲು ವಿದ್ಯಾರ್ಥಿಗಳು ತಮ್ಮ ಮನಸ್ಸುಗಳನ್ನು ರೂಪಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಎಸ್ ಶಫಿ ಅಹಮದ್ ಮಾತನಾಡಿ, ವಿದ್ಯಾರ್ಥಿಗಳು ಕಾನೂನು ಶಿಕ್ಷಣವನ್ನು ಉತ್ತಮ ರೀತಿಯಲ್ಲಿ ಅಭ್ಯಾಸ ಮಾಡಿ ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರು ಹಾಗೂ ವಕೀಲರು ಆದ ಎಸ್.ರಮೇಶ ಮಾತನಾಡಿದರು ಉಪನ್ಯಾಸಕರಾದ ಓಬಣ್ಣ, ಶ್ರೀನಿವಾಸ್, ಮಮತ ವೇದಿಕೆಯಲ್ಲಿದ್ದರು.