×
Ad

ಗೌರಿ ಲಂಕೇಶ್ ಹತ್ಯೆ ಖಂಡಿಸಿ ವಿವಿಧ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ

Update: 2017-09-06 19:36 IST

ತುಮಕೂರು, ಸೆ.6: ಪತ್ರಕರ್ತೆ ಹಾಗೂ ಪ್ರಗತಿಪರ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆಯನ್ನು ಖಂಡಿಸಿ, ವಿವಿಧ ಜನಪರ, ವಿದ್ಯಾರ್ಥಿಪರ, ದಲಿತಪರ ಸಂಘಟನೆಗಳು ಇಂದು ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ನಗರದ ಟೌನ್‍ಹಾಲ್ ವೃತ್ತದಲ್ಲಿ ಸಮಾವೇಶಗೊಂಡ ನೂರಾರು ಸಂಖ್ಯೆಯ ವಿವಿಧ ಸಂಘಟನೆಗಳ ಕಾರ್ಯಕರ್ತರು, ಗೌರಿ ಲಂಕೇಶ್ ಅವರ ಹತ್ಯೆಯನ್ನು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಖಂಡಿಸಿದರು. ನಂತರ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು. 

ಟೌನ್‍ಹಾಲ್ ವೃತ್ತದಿಂದ ಅಶೋಕ ರಸ್ತೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ತಲುಪಿದ ಯುವಜನರು, ವಿವಿಧ ಪ್ರಗತಿಪರ ಸಂಘಟನೆಗಳ ಸದಸ್ಯರು, ಮಹಿಳೆಯರು ಒಂದು ಗಂಟೆಗು ಹೆಚ್ಚು ಕಾಲ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಧರಣಿ ನಡೆಸಿದರು.

ಈ ವೇಳೆ ಪಿಯುಸಿಎಲ್ ಅಧ್ಯಕ್ಷ ಕೆ.ದೊರೈರಾಜು ಮಾತನಾಡಿ, ದೇಶದಲ್ಲಿ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಲೋಕದ ದಾರ್ಶನಿಕರು ಮತ್ತು ದಿಗ್ಗಜರನ್ನು ಕೊಲ್ಲುವ ಕೆಲಸ ನಡೆಯುತ್ತಿದ್ದು, ಇಂತಹ ಕೊಲ್ಲುವ ಸಂಸ್ಕೃತಿಗೆ ಅಂತ್ಯ ಹಾಡಬೇಕಾಗಿದೆ. ಕರ್ನಾಟಕದಲ್ಲಿ ಸಂಶೋಧಕ ಎಂ.ಎಂ.ಕಲಬುರ್ಗಿ ಹತ್ಯೆ ಸೇರಿದಂತೆ ವೈಚಾರಿಕ ಮನೋಭಾವುಳ್ಳ ವ್ಯಕ್ತಿಗಳ ಹತ್ಯೆ ಮುಂದುವರಿದಿದೆ. ಇಂತಹ ಸಂಸ್ಕೃತಿ ನಿಲ್ಲಬೇಕು ಎಂದು ಆಗ್ರಹಿಸಿದರು.

ಸಂಶೋಧಕರು, ವಿಚಾರವಾದಿಗಳು ಮತ್ತು ಪತ್ರಕರ್ತರನ್ನು ಹತ್ಯೆ ಮಾಡುತ್ತಿರುವ ಕೊಲೆಗಡುಕರನ್ನು ಬಂಧಿಸಬೇಕು. ಬಂಡವಾಳಶಾಹಿ ಮತ್ತು ಕೋಮುವಾದಿ ಶಕ್ತಿಗಳು ಯುವಜನರನ್ನು ಪ್ರಚೋದನೆ ಮಾಡುತ್ತಿದ್ದು ಇಂತಹ ಕೃತ್ಯಗಳನ್ನು ಸರಕಾರ ಹತ್ತಿಕ್ಕಬೇಕು ಎಂದು ಒತ್ತಾಯಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷೆ ಬಾ.ಹ.ರಮಾಕುಮಾರಿ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಸಂವಿಧಾನ ಹತ್ತಿಕ್ಕುವ ಕೆಲಸ ನಡೆಯುತ್ತಿದೆ,ಇದು ನಿಲ್ಲಬೇಕು. ಮುಂದಿನ ಯುವಪೀಳಿಗೆ ವೈಚಾರಿಕತೆ ಮೈಗೂಡಿಸಿಕೊಳ್ಳಲು ಇದು ಆಘಾತಕರ ಸಂಗತಿ. ವೈಚಾರಿಕ ಮತ್ತು ದಿಟ್ಟ ಪತ್ರಕರ್ತರನ್ನು ಕೊಲ್ಲುವ ಮೂಲಕ ಎಲ್ಲರ ಬಾಯಿ ಮುಚ್ಚಿಸುವ ಕೆಲಸ ನಡೆಯುತ್ತಿದೆ. ಕೊಲ್ಲುವುದರಿಂದ ವಿಚಾರವಾದವನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದರು.

ಸಾಹಿತಿ ಕೆ.ಬಿ.ಸಿದ್ದಯ್ಯ ಮಾತನಾಡಿ, ಹಂತಕರನ್ನು ಬಂಧಿಸಬೇಕು. ವಿಚಾರವಾದಿಗಳನ್ನು ಹತ್ಯೆ ಮಾಡುವ ಮೂಲಕ ಭಯದ ವಾತಾವರಣ ಸೃಷ್ಟಿಸಲಾಗುತ್ತಿದೆ.ಅಭಿವ್ಯಕ್ತಿ ಸ್ವಾತಂತ್ರವನ್ನು ಹತ್ತಿಕ್ಕುವ ಮೂಲಕ ಜನರ ಬಾಯಿ ಮುಚ್ಚಿಸುವ ಕೆಲಸ ಮಾಡಲಾಗುತ್ತಿದೆ. ಇದರ ವಿರುದ್ದ ಯುವಜನರು ಸೆಟೆದ್ದು ನಿಲ್ಲಬೇಕಿದೆ ಎಂದರು.

 ಪ್ರತಿಭಟನೆಯಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಸೈಯದ್ ಮುಜೀಬ್,  ರಂಗಕರ್ಮಿ ಹೊನ್ನವಳ್ಳಿ ನಟರಾಜ್, ದಲಿತ ಮುಖಂಡ ನರಸಿಂಹಯ್ಯ, ಕನ್ನಡ ಸಾಹಿತ್ಯ ಪರಿಷತ್‍ನ ಅನ್ನಪೂರ್ಣ ವೆಂಕಟ ನಂಜಪ್ಪ, ಪ್ರಗತಿಪರ ಮುಖಂಡ ಡ್ಯಾಗೇರಹಳ್ಳಿ ವಿರೂಪಾಕ್ಷ, ಕೊಟ್ಟ ಶಂಕರ್ ಮೊದಲಾದವರು ಮಾತನಾಡಿದರು.

ಪ್ರತಿಭಟನಾ ಮೆರವಣಿಗೆಯಲ್ಲಿ ಮುಖಂಡರಾದ ಎನ್.ಕೆ.ಸುಬ್ರಮಣ್ಯ,ಎಸ್‍ಯುಸಿಐ ಸ್ವಾಮಿ, ಎಸ್‍ಎಫ್‍ಐ ಶಿವಣ್ಣ, ಡಿವೈಎಫ್‍ಐ ಎಸ್.ರಾಘವೇಂದ್ರ, ರವಿ ಪುಟ್ಟೇಗೌಡ, ದರ್ಶನ್,ಉಪನ್ಯಾಸಕ ರಂಗಧಾಮಯ್ಯ, ಪತ್ರಕರ್ತ ವೆಂಕಟಾಚಲ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪ್ರತಿಭಟನೆ: ಗೌರಿ ಲಂಕೇಶ್ ಅವರ ಹತ್ಯೆಯನ್ನು ಖಂಡಿಸಿ, ಕೊಲೆ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ, ಪಾಪ್ಯುಲರ್ ಫ್ರಂಟ್ ಅಫ್ ಇಂಡಿಯಾ, ಎಸ್ ಡಿಪಐ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ಟೌನ್‍ಹಾಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಪಿಎಫ್ ಐ ಪ್ರಧಾನ ಕಾರ್ಯದರ್ಶಿ ರಹಾನ್‍ಖಾನ್,ಎಸ್ ಡಿಪಿಐನ ಜಿಲ್ಲಾಧ್ಯಕ್ಷ ಷಬ್ಬೀರ್ ಅಹ್ಮದ್, ಮುಖ್ತಿಯಾರ್ ಅಹ್ಮದ್, ಹ್ಯೂಮನ್ ರೈಟ್ಸ್ ಪ್ರೋಟೆಸ್ಟ್ ಸೆಂಟ್ರಲ್‍ನ ಅಧ್ಯಕ್ಷ ಸಾಧಿಕ ಪಾಷ ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News