×
Ad

ನಿಷೇಧಾಜ್ಞೆ ಉಲ್ಲಂಘಿಸಿ ಬೈಕ್ ರ್ಯಾಲಿ ನಡೆಸಿದವರ ಮೇಲೆ ಕ್ರಮಕ್ಕೆ ಒತ್ತಾಯ

Update: 2017-09-06 19:44 IST

ಚಿಕ್ಕಮಗಳೂರು, ಸೆ.6: ನಿಷೇಧಾಜ್ಞೆಯನ್ನು ಉಲ್ಲಂಘಿಸಿ ನಗರ ಮತ್ತು ಜಿಲ್ಲಾದ್ಯಂತ ಬೈಕ್ ರ್ಯಾಲಿ ನಡೆಸಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಚ್.ದೇವರಾಜ್ ಜಿಲ್ಲಾಡಳಿತ ಮತ್ತು ಪೋಲಿಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ಜಿಲ್ಲಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಅದನ್ನು ಉಲ್ಲಂಘಿಸಿ ಬಿಜೆಪಿಯವರು ಶಾಸಕರ ನೇತೃತ್ವದಲ್ಲೇ ವಿವಿಧೆಡೆ ಬೈಕ್ ರ್ಯಾಲಿ ನಡೆಸಿದ್ದರೂ ಅದನ್ನು ತಡೆಗಟ್ಟದೆ ಜಿಲ್ಲಾಡಳಿತ ಮತ್ತು ಪೋಲಿಸ್ ಇಲಾಖೆ ಕಣ್ಣುಮುಚ್ಚಿ ಕುಳಿತಿರುವುದು ರ್ಯಾಲಿಗೆ ಅವಕಾಶ ನೀಡಿರುವುದನ್ನು ನೋಡಿದರೆ ಪೋಲಿಸರು ಬಿಜೆಪಿಯೊಂದಿಗೆ ಕೈಜೋಡಿಸಿರುವ ಶಂಕೆ ಕಾಡುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಯಾವುದೇ ಅಡೆತಡೆ ಇಲ್ಲದೆ ಬೈಕ್ ರ್ಯಾಲಿ ನಡೆದಿರುವುದನ್ನು ನೋಡಿದರೆ ರಾಜ್ಯ ಸರ್ಕಾರ ಸಹ ಬಿಜೆಪಿಗೆ ಮಣಿದಿರುವುದು ಸ್ಪಷ್ಟವಾಗಿದೆ, ಜಿಲ್ಲಾಡಳಿತ ಮಲಗಿದೆಯೋ ಅಥವಾ ಎಚ್ಚರವಾಗಿದೆಯೋ ಎಂಬ ಅನುಮಾನ ಕಾಡುತ್ತಿದೆ. ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯ ಮೆರವಣಿಗೆಯನ್ನು ನಿಷೇಧಾಜ್ಞೆ  ಹಿನ್ನೆಲೆಯಲ್ಲಿ ತಡೆದ ಜಿಲ್ಲಾಡಳಿತ ಮತ್ತು ಪೋಲಿಸ್ ಇಲಾಖೆ ಬಿಜೆಪಿಯವರಿಗೆ ಮಾತ್ರ ಅವಕಾಶ ನೀಡಿರುವುದು ಅನೇಕ ಸಂಶಯಗಳಿಗೆ ಪುಷ್ಠಿ ನೀಡಿದೆ ಎಂದು ತಿಳಿಸಿದ್ದಾರೆ.

ಕಳೆದ ತಿಂಗಳು ಬಿಜೆಪಿಯವರು ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಎಸ್ಪಿ ಕಛೇರಿವರೆಗೆ ಮೆರವಣಿಗೆ ನಡೆಸುವ ಜೊತೆಗೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದರೂ ಅವರ ವಿರುದ್ದ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ಜಿಲ್ಲಾ ಪೋಲಿಸರ ವೈಫಲ್ಯತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News