ಜಿಲ್ಲಾಡಳಿತದ ನಿರ್ಬಂಧ ಉಲ್ಲಂಘಿಸಿ ಬೈಕ್ ರ್ಯಾಲಿಗೆ ಯತ್ನ: ಮುಖಂಡರ ಬಂಧನ
ಶಿವಮೊಗ್ಗ, ಸೆ. 6: ಶಿವಮೊಗ್ಗದಲ್ಲಿಯೂ ಬಿಜೆಪಿ ಯುವ ಮೋರ್ಚಾದ ಬೈಕ್ ರ್ಯಾಲಿಗೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ. ನಿರ್ಬಂಧ ಉಲ್ಲಂಘಿಸಿ ಮಂಗಳೂರಿಗೆ ಬೈಕ್ ರ್ಯಾಲಿ ನಡೆಸಲು ಮುಂದಾದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದ ಘಟನೆ ಬುಧವಾರ ನಗರದಲ್ಲಿ ನಡೆಯಿತು.
ಸಂಘಟನೆಯ ಪೂರ್ವ ನಿರ್ಧರಿತ ಕಾರ್ಯಕ್ರಮದಂತೆ ಬೆಳಗ್ಗೆ ಶಿವಮೂರ್ತಿ ವೃತ್ತದ ಬಳಿ ಕಾರ್ಯಕರ್ತರು ಜಮಾಯಿಸಿದರು. ಬೈಕ್ ರ್ಯಾಲಿ ನಡೆಸಲು ಮುಂದಾದರು. ಭಾರೀ ಸಂಖ್ಯೆಯಲ್ಲಿದ್ದ ಪೊಲೀಸರು ಕಾರ್ಯಕರ್ತರನ್ನು ತಡೆಯಲು ಮುಂದಾದರು. ಈ ಹಂತದಲ್ಲಿ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ನೂಕಾಟ ನಡೆಯಿತು. ಸ್ಥಳದಲ್ಲಿ ಕೆಲ ಸಮಯ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ತದನಂತರ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ವೃತ್ತದಲ್ಲಿಯೇ ಧರಣಿ ನಡೆಸಲಾರಂಭಿಸಿದರು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಆನಂತರ ಅಲ್ಲಿಯೇ ತೆರೆದ ವಾಹನವೊಂದರಲ್ಲಿ ನಿಂತು ಮುಖಂಡರು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.
ಕೆ.ಎಸ್.ಈಶ್ವರಪ್ಪ, ರುದ್ರೇಗೌಡ, ಯುವ ಮೋರ್ಚಾದ ಮುಖಂಡ ತೇಜಸ್ವಿ, ಡಿ.ಎಸ್.ಅರುಣ್ ಮೊದಲಾದವರು ಮಾತನಾಡಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂತರ ಮತ್ತೆ ಕಾರ್ಯಕರ್ತರು ಬೈಕ್ ರ್ಯಾಲಿಗೆ ಮುಂದಾದರು. ಈ ವೇಳೆ ಪೊಲೀಸರು ಮುಖಂಡರು, ಕಾರ್ಯಕರ್ತರನ್ನು ಬಂಧಿಸಿ ಡಿಎಆರ್ ಮೈದಾನಕ್ಕೆ ಕರೆದೊಯ್ದು ಬಿಡುಗಡೆಗೊಳಿಸಿದರು.
ಸಂಚಾರ ಅಸ್ತವ್ಯಸ್ತ: ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯ ಹಿನ್ನೆಲೆಯಲ್ಲಿ ಶಿವಮೂರ್ತಿ ವೃತ್ತ ಹಾಗೂ ಈ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಕೆಲ ಸಮಯ ವಾಹನಗಳ ಸಂಚಾರದ ಮೇಲೆ ನಿರ್ಬಂಧ ಹೇರಲಾಗಿತ್ತು. ಇದರಿಂದ ಈ ಮಾರ್ಗಗಳಲ್ಲಿ ಸಂಚರಿಸಬೇಕಾಗಿದ್ದ ವಾಹನ ಸವಾರರು ಸುತ್ತು ಬಳಸಿ ತೆರಳುವಂತಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ವೃತ್ತದ ಬಳಿ ಬಿಗಿ ಪೊಲೀಸ್ ಪಹರೆಯ ವ್ಯವಸ್ಥೆ ಮಾಡಲಾಗಿತ್ತು.