ಗೌರಿ ಲಂಕೇಶ್ ಹತ್ಯೆ ಖಂಡಿಸಿ ವಿವಿಧೆಡೆ ಪತ್ರಕರ್ತರ ಪ್ರತಿಭಟನೆ
ಮಂಡ್ಯ, ಸೆ.6: ಹಿರಿಯ ಪತ್ರಕರ್ತೆ, ಚಿಂತಕಿ ಗೌರಿ ಲಂಕೇಶ್ ಹತ್ಯೆಯನ್ನು ಪತ್ರಕರ್ತರು ಖಂಡಿಸಿದ್ದು, ಜಿಲ್ಲೆಯ ವಿವಿಧೆಡೆ ಬುಧವಾರ ಪ್ರತಿಭಟನೆ ನಡೆಸಿ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಗೌರಿ ಲಂಕೇಶ್‍ರವರಿಗೆ ಸಂತಾಪ ಸಲ್ಲಿಸಿ, ನಂತರ, ಮೌನ ಮೆರವಣಿಗೆಯಲ್ಲಿ ತೆರಳಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ದುಷ್ಕರ್ಮಿಗಳನ್ನು ಬಂಧಿಸಿ, ಪತ್ರಕರ್ತರಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಲಾಯಿತು.
ಪತ್ರಕರ್ತರು ಸೇರಿದಂತೆ ಸಾಮಾಜಿಕ ಚಿಂತಕರ ಹತ್ಯೆ ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇಂತಹ ಕೃತ್ಯಗಳನ್ನು ಪ್ರಜಾಪ್ರಭುತ್ವದ ಅಸ್ತಿತ್ವಕ್ಕೆ ಅಪಾಯಕಾರಿ. ಇಂತಹ ದುಷ್ಕೃತ್ಯಗಳಿಗೆ ಕಡಿವಾಣ ಹಾಕಬೇಕಾದುದು ಸರಕಾರಗಳ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.
ಹಿರಿಯ ಪತ್ರಕರ್ತರಾದ ಪಿ.ಜೆ.ಚೈತನ್ಯಕುಮಾರ್, ಕೆ.ಎನ್.ರವಿ, ಎ.ಎಲ್.ಬಸವೇಗೌಡ, ಮತ್ತೀಕೆರೆ ಜಯರಾಂ, ಕೆ.ಸಿ.ಮಂಜುನಾಥ್, ಇತರರು ಮಾತನಾಡಿ, ಗೌರಿ ಲಂಕೇಶ್ ಅವರ ಬರವಣಿಗೆ, ಹೋರಾಟಗಳನ್ನು ಸ್ಮರಿಸಿದರು.
ನಾಗಮಂಗಲ: ಪಟ್ಟಣದ ಕೆನರಾಬ್ಯಾಂಕ್ ಬಳಿ ಸಮಾವೇಶಗೊಂಡ ಪತ್ರಕರ್ತರು ಅಲ್ಲಿಂದ ಮಿನಿ ವಿಧಾನಸೌಧದವರೆಗೆ ಮೆರವಣಿಗೆ ನಡೆಸಿ ತಹಸಶೀಲ್ದಾರ್‍ರವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರಸ್ತುತ ದಿನದಲ್ಲಿ ಪತ್ರಕರ್ತರಿಗೆ ರಕ್ಷಣೆ ಇಲ್ಲದಂತಾಗಿದೆ. ಕೂಡಲೇ ಗೌರಿ ಲಂಕೇಶ್‍ರವನ್ನು ಹತ್ಯೆಗೈದ ಆರೋಪಿಗಳನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಅವರು ತಾಕೀತು ಮಾಡಿದರು.
ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಪಿ.ಜೆ.ಜಯರಾಂ, ಸೀತಾರಾಂ, ಮಂಜುನಾಥ್, ಹರೀಶ್, ಬಾಲಕೃಷ್ಣ, ಪುಟ್ಟರಾಜು, ಯೋಗೇಶ್, ಗದ್ದೆಬೂವನಹಳ್ಳಿ ದೇವರಾಜು, ಸೀತಾರಾಂ, ವಿನೋಧ, ಚಂದ್ರಮೌಳಿ, ಕುಮಾರ್, ಇತರರು ಪಾಲ್ಗೊಂಡಿದ್ದರು.
ಮಳವಳ್ಳಿ: ಮಳವಳ್ಳಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪುರಸಭೆ ಸದಸ್ಯ ದೊಡ್ಡಯ್ಯ, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ನಾಗೇಶ್, ಪುಟ್ಟಸ್ವಾಮಿ ಆರಾಧ್ಯ, ಪ್ರಭಾಕರ್, ಶಿವಮಲ್ಲು, ದಿವಾಕರ್, ಸ್ವಾಮಿ, ಉಮೇಶ್ ಪಾಲ್ಗೊಂಡಿದ್ದರು.