×
Ad

ಬ್ರಹ್ಮ,ವಿಷ್ಣು,ಮಹೇಶ್ವರರ ಪ್ರತಿರೂಪವೇ ಶಿಕ್ಷಕರು: ಶಾಸಕಿ ಶಾರದಾ ಶೆಟ್ಟಿ

Update: 2017-09-06 22:05 IST

ಹೊನ್ನಾವರ, ಸೆ.6: ಸರ್ಕಾರದ ವಿವಿಧ ಯೋಜನೆಗಳ ಒತ್ತಡದ ಕೆಲಸಗಳ ನಡುವೆಯೂ ಶಿಕ್ಷಕರು  ಗಣನೀಯ ಸಾಧನೆ ಮಾಡುತ್ತಿದ್ದಾರೆ ಎಂದು ಶಾಸಕಿ ಶಾರದಾ ಶೆಟ್ಟಿ ಹೇಳಿದರು.

ತಾಲೂಕಿನ ಕರ್ಕಿನಾಕಾದ ಹವ್ಯಕ ಸಭಾಭವನದಲ್ಲಿ ಶಿಕ್ಷಕಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬ್ರಹ್ಮ,ವಿಷ್ಣು,ಮಹೇಶ್ವರರ ಪ್ರತಿರೂಪವೇ ಶಿಕ್ಷಕರು. ದೇಶದ ಪ್ರಗತಿ ವರ್ಗ ಕೋಣೆಯಲ್ಲಿದೆ ಎಂದು ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಹೇಳಿದಂತೆ ವಿದ್ಯಾರ್ಥಿಗಳ ವ್ಯಕ್ತಿತ್ವದ ವಿಕಸನಕ್ಕೆ ಶಿಕ್ಷಕರ ಪಾತ್ರ ಮಹತ್ವವಾದುದು. ತಾಲೂಕಿನಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಗಳಿಸಿ ರಾಜ್ಯ ಮಟ್ಟದಲ್ಲಿ ಸಾಧನೆಯ ಜೊತೆ ಪಠ್ಯೇತರ ಚಟುವಟಿಕೆಯಲ್ಲೂ ಸಾಧನೆ ಮಾಡುತ್ತಿದ್ದಾರೆ. ಇದರ ಹಿಂದೆ ಶಿಕ್ಷಕರ ಪರಿಶ್ರಮವಿದೆ. ಶಿಕ್ಷಕರನ್ನು ಗೌರವಭಾವದಿಂದ ನೋಡಬೇಕು ಎಂದು ಕರೆ ನೀಡಿದರು.

ಜಿಪಂ ಸದಸ್ಯ ಶಿವಾನಂದ ಹೆಗಡೆ ಮಾತನಾಡಿ, ಸಮಾಜ ಸುಧಾರಣೆಗೆ ಶಿಕ್ಷಕರ ಪಾತ್ರದೊಡ್ಡದು. ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಶಿಕ್ಷಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದರು. 

ಈ ವೇಳೆ ನಿವೃತ್ತಿ ಹೊಂದಿದ ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರನ್ನು ಹಾಗೂ ನಿವೃತ್ತರಾದ ಪ್ರಾಧ್ಯಾಪಕರಾದ ಡಾ. ಜಿ.ಪಿ.ಪಾಠಣಕರ್ ಮತ್ತು ವಿ.ಎಸ್.ಭಟ್ ಅವರನ್ನು ಸನ್ಮಾನಿಸಲಾಯಿತು. ತಾಲೂಕಿನ ಶಿಕ್ಷಕರ ವೇತನ ವಿವರ ನೀಡುವ ಮೊಬೈಲ್ ಆ್ಯಪ್ ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷ ಉಲ್ಲಾಸ ನಾಯ್ಕ, ಜಿಪಂ ಸದಸ್ಯರಾದ ಪುಷ್ಪಾ ನಾಯ್ಕ, ಸವಿತಾ ಗೌಡ, ತಾಪಂ ಸದಸ್ಯರಾದ ಮೀರಾ ತಾಂಡೇಲ್, ರೂಪಾ ಗೌಡ ಲಯನ್ಸ ಕ್ಲಬ್ ಅಧ್ಯಕ್ಷ ಡಿ.ಡಿ.ಮಡಿವಾಳ, ಶಿಕ್ಷಕರ ಸಂಘದ ಅಧ್ಯಕ್ಷ ಎನ್.ಎಸ್.ನಾಯ್ಕ, ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಎನ್.ಗೌಡ ಇತರರಿದ್ದರು.  ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ ಪದಕಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಣ ಸಮನ್ವಯಾಧಿಕಾರಿ ಜಿ.ಎಸ್.ನಾಯ್ಕ ವಂದನಾರ್ಪಣೆ ಮಾಡಿದರು. ಶಿಕ್ಷಕರಾದ ಮೋಹನ ನಾಯ್ಕ, ಕಲ್ಪನಾ ಹೆಗಡೆ, ಜಿ.ಆರ್.ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News