ದೇಶದಲ್ಲಿ ಕೊಲ್ಲುವ ಸಂಸ್ಕೃತಿ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ: ಡಾ. ನಾ.ಡಿಸೋಜ

Update: 2017-09-07 11:47 GMT

ಸಾಗರ, ಸೆ.7: ಕೊಲ್ಲುವ ಸಂಸ್ಕೃತಿ ಎನ್ನುವುದು ಒಳ್ಳೆಯದಲ್ಲ. ಇದು ನಮ್ಮ ದೇಶದಲ್ಲಿ ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿ ಎಂದು ಸಾಹಿತಿ ಡಾ. ನಾ.ಡಿಸೋಜ ತಿಳಿಸಿದರು.

ಇಲ್ಲಿನ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಗುರುವಾರ ಪತ್ರಕರ್ತೆ, ಸಾಹಿತಿ ಗೌರಿ ಲಂಕೇಶ್ ಹತ್ಯೆಯನ್ನು ಖಂಡಿಸಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. 

ಪ್ರಗತಿಪರವಾಗಿ ಮಾತನಾಡುವವರ ಹತ್ಯೆ ನಡೆಯುತ್ತಿರುವುದು, ಹತ್ಯೆ ಮಾಡಿದವರು ಕಾನೂನಿನ ಕೈನಿಂದ ತಪ್ಪಿಸಿಕೊಳ್ಳುತ್ತಿರುವ ಬೆಳವಣಿಗೆ ಗಮನಿಸಿದರೆ ಇಂತಹ ಹೋರಾಟಗಳು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ ಎನ್ನುವಂತೆ ಆಗಿದೆ. ಈ ಹಿನ್ನೆಲೆಯಲ್ಲಿ ನಾವು ಇಂತಹ ಕೊಲ್ಲುವ ಶಕ್ತಿಗಳನ್ನು ಹಿಮ್ಮೆಟ್ಟಿಸಲು ಪರ್ಯಾಯ ಮಾರ್ಗ ಅನುಸರಿಸುವ ಅಗತ್ಯವಿದೆ ಎಂದರು. 

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಿತಕರ ಜೈನ್ ಮಾತನಾಡಿ, ಕೊಲ್ಲುವ ಮನಸ್ಥಿತಿ ಅತ್ಯಂತ ಹೀನವಾದದ್ದು. ಅದರ ಬದಲು ವ್ಯಕ್ತಿಯ ಮನಸ್ಸನ್ನು ಗೆಲ್ಲುವ ಸಂಸ್ಕೃತಿ ಜಾಗೃತವಾಗಬೇಕು. ಸಾಹಿತಿಗಳು, ಪತ್ರಕರ್ತರು, ವಿಚಾರವಾದಿಗಳು ಸೇರಿದಂತೆ ಎಲ್ಲ ವರ್ಗದ ಜನರು ನೆಮ್ಮದಿಯಿಂದ ಬದುಕುವ ವಾತಾವರಣ ನಿರ್ಮಾಣವಾಗಬೇಕು ಎಂದು ತಿಳಿಸಿದರು.

ಕರ್ನಾಟಕದಲ್ಲಿ ಕೊಲ್ಲುವ ಸಂಸ್ಕೃತಿ ಶಾಶ್ವತವಾಗಿ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಕಾನೂನು ವ್ಯವಸ್ಥೆಯನ್ನು ಇನ್ನಷ್ಟು ಬಿಗಿಗೊಳಿಸುವ ಅಗತ್ಯವಿದೆ. ಈಗಾಗಲೇ ನಡೆದಿರುವ ಗಣ್ಯರ ಕೊಲೆಗಳನ್ನು ಸೂಕ್ತ ತನಿಖೆ ನಡೆಸಿ, ದುಷ್ಕರ್ಮಿಗಳನ್ನು ಬಂಧಿಸಬೇಕು. ಗೌರಿ ಲಂಕೇಶ್ ಹತ್ಯೆ ಮಾಡಿದವರನ್ನು ಸರ್ಕಾರ ಬಂಧಿಸುವ ತನಕ ನಿರಂತರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ಲೇಖಕ ವಿಲಿಯಂ, ಜಿಲ್ಲಾ ಪಂಚಾಯ್ತಿ ಸದಸ್ಯೆ ಅನಿತಾ ಕುಮಾರಿ, ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಬಿ.ರಾಘವೇಂದ್ರ, ದಲಿತ ಸಂಘರ್ಷ ಸಮಿತಿಯ ಪರಮೇಶ್ವರ ದೂಗೂರು, ಲಕ್ಷ್ಮಣ ಸಾಗರ್, ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ನಗರಸಭೆ ಸದಸ್ಯೆ ಪರಿಮಳ ಇನ್ನಿತರರು ಮಾತನಾಡಿದರು.

 ನಗರಸಭೆ ಅಧ್ಯಕ್ಷ ಬೀಬಿ ಫಸಿಹಾ, ಉಪಾಧ್ಯಕ್ಷೆ ಸರಸ್ವತಿ, ಸದಸ್ಯರಾದ ಉಷಾ, ಲಲಿತಮ್ಮ, ಸಾಹಿತ್ಯ ಪರಿಷತ್‍ನ ಜಿಲ್ಲಾ ಉಪಾಧ್ಯಕ್ಷ ತಿರುಮಲ ಮಾವಿನಕುಳಿ, ಸ್ಥಳೀಯ ಶಾಖೆಯ ನಾರಾಯಣಮೂರ್ತಿ, ಎಂ.ಸಿ.ಪರಶುರಾಮಪ್ಪ, ವೆಂಕಟೇಶ್, ಗಂಗಮ್ಮ, ಟಿಪ್ಪು ಸಹರಾ ಯುವಜನ ಸಂಘದ ಅಧ್ಯಕ್ಷ ಸೈಯದ್ ಜಮೀಲ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಸೈಯದ್ ತನ್ವೀರ್, ಹನುಮಂತಪ್ಪ, ಶಿವಾನಂದ ಮಾಸೂರು,  ಮೊಹಮ್ಮದ್ ಜಕ್ರಿಯ, ಶಿರವಂತೆ ಚಂದ್ರಶೇಖರ್, ಕನ್ನಪ್ಪ ಮುಳಕೇರಿ ಇನ್ನಿತರರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News