ಜಾನಪದ ಸಂಸ್ಕೃತಿ ಬದುಕಿಗೆ ನೈಜ ಅರ್ಥವನ್ನು ಕಲ್ಪಿಸಿಕೊಡುತ್ತದೆ: ಹಿರೇಮಗಳೂರು ಕಣ್ಣನ್
ಮಡಿಕೇರಿ, ಸೆ.7: ಭಾರತೀಯ ಸಂಸ್ಕೃತಿಯ ಮೂಲ ಸತ್ತ್ವವಾದ ‘ಜಾನಪದ’ದ ಬೇರುಗಳು ಎಂದಿಗೂ ಸಡಿಲವಾಗಕೂಡದು. ಜಾನಪದ ಸಂಸ್ಕೃತಿ ಬದುಕಿಗೆ ನೈಜ ಅರ್ಥವನ್ನು ಕಲ್ಪಿಸಿಕೊಡುವಂತದ್ದಾಗಿದೆ ಎಂದು ಖ್ಯಾತ ವಾಗ್ಮಿ ಹಿರೇಮಗಳೂರು ಕಣ್ಣನ್ ಅಭಿಪ್ರಾಯಪಟ್ಟಿದ್ದಾರೆ.
ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಮತ್ತು ಮಡಿಕೇರಿ ತಾಲೂಕು ಜಾನಪದ ಪರಿಷತ್ ವತಿಯಿಂದ ನಗರದ ರೋಟರಿ ಸಭಾಂಗಣದಲ್ಲಿ ಶಿಕ್ಷಕ-ಶಿಕ್ಷಕಿಯರಿಗೆ ನಡೆದ ‘ಕನ್ನಡ ಭಾಷೆಯಲ್ಲಿ ಜಾನಪದ ಸೊಗಡು’ ವಿಚಾರ ಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜಾನಪದ ಸಂಸ್ಕ ತಿಯಿಂದ ನಾವು ದೂರವಾದರೆ ನಮ್ಮ ಭಾಷೆ ಮತ್ತು ಬದುಕಿನೊಂದಿಗೆ ನಾಡು ನುಡಿಯ ಸಂಬಂಧಗಳನ್ನೆ ಕಳೆದುಕೊಳ್ಳುವ ಮೂಲಕ ನೆಲದ ಸಂಸ್ಕೃತಿಯಿಂದ ದೂರವಾಗಬೇಕಾಗುತ್ತದೆ. ಲೌಕಿಕ ಬದುಕಿಗೆ ನಮ್ಮನ್ನು ನಾವು ಒಪ್ಪಿಸಿಕೊಳ್ಳುವ ಮೂಲಕ ಬದುಕಿನ ಸ್ವಾರಸ್ಯವನ್ನೆ ಕಳೆದುಕೊಳ್ಳುತ್ತಿರುವುದಾಗಿ ವಿಷಾದಿಸಿದರು.
ಇಂಗ್ಲಿಷ್ ವ್ಯಾಮೋಹದಿಂದ ಇಂಟರ್ ನ್ಯಾಷನಲ್ ಸ್ಕೂಲ್‍ಗಳಿಗೆ ದಾಖಲಾಗುವ ಮಕ್ಕಳು ತಮ್ಮ ಮೂಲ ಸಂಸ್ಕೃತಿಯಿಂದ ದೂರವಾಗಿ ಅಂತರ್ ಪಿಶಾಚಿಗಳಂತಾಗುತ್ತಿರುವ ಬಗ್ಗೆ ಅತೀವ ಬೇಸರವನ್ನು ವ್ಯಕ್ತಪಡಿಸಿದ ಕಣ್ಣನ್, ನಮ್ಮೆಲ್ಲ ಭಾವನೆಗಳಿಗೆ ಹತ್ತಿರವಾದ ಭಾಷೆಯನ್ನು ದೂರಮಾಡಿ ಬದುಕು ಜಠಿಲವಾಗುತ್ತಿದೆ ಎಂದು ವಿವರಿಸಿದರು.
ರೋಟರಿ ಜೋನಲ್ ಲೆಫ್ಟಿನೆಂಟ್ ಅಂಬೆಕಲ್ ವಿನೋದ್ ಕುಶಾಲಪ್ಪ ಮಾತನಾಡಿ, ರೊಟರಿ ಸಂಸ್ಥೆ ತನ್ನ ಕ್ಲಬ್‍ಗಳ ಮೂಲಕ ಸಮಾಜ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ. ಪ್ರಸ್ತುತ ಶಿಕ್ಷಣಕ್ಕೆ ಪೂರಕವಾದ ‘ಟೀಚ್’ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದ್ದು, 10 ಸಾವಿರ ಇ-ಲರ್ನಿಂಗ್ ಕೇಂದ್ರಗಳನ್ನು ತೆರೆಯುವ ಗುರಿಯನ್ನು ಹೊಂದಿದೆ ಎಂದರು.
ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಮಾತನಾಡಿ, ಜೀವನ ಮೌಲ್ಯಗಳು ಅಳಿಸಿಹೋಗುತ್ತಿರುವ ಹಂತದಲ್ಲಿ ಗ್ರಾಮೀಣ ಜಾನಪದ ಸೊಗಡನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಅತ್ಯವಶ್ಯ. ವ್ಯಾವಹಾರಿಕವಾಗಿ ನಾವು ಇಂಗ್ಲಿಷ್ ಸೇರಿದಂತೆ ವಿವಿಧ ಭಾಷೆಗಳನ್ನು ಬಳಸುತ್ತೇವಾದರು ನೆಲದ ಭಾಷೆ ‘ಕನ್ನಡ’ದ ಬಳಕೆಯಿಂದ ಮಾತ್ರ ಇದು ನನ್ನದು ಎನ್ನುವ ಭಾವನೆ ಮೂಡುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ವೇಳೆ ಹಿರಿಯ ಪತ್ರಕರ್ತ ಎಂ.ಎನ್. ಮಂಜುನಾಥ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಾಗೂ ವಿಚಾರಗೋಷ್ಠಿಯಲ್ಲಿ ಪಾಲ್ಗೊಂಡ ಶಿಕ್ಷಕರಿಗೆ ಅಭಿನಂದನಾ ಪತ್ರವನ್ನು ನೀಡಲಾಯಿತು.
ವೇದಿಕೆಯಲ್ಲಿ ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ., ಮಿಸ್ಟಿ ಹಿಲ್ಸ್ ಗೌರವ ಕಾರ್ಯದರ್ಶಿ ಪಿ.ಎಂ.ಸಂದೀಪ್, ರೋಟರಿ ಟೀಚ್ ಕಾರ್ಯಕ್ರಮದ ಅಧ್ಯಕ್ಷ ರಾಜೇಶ್ ಬಿ.ಎಂ. ಉಪಸ್ಥಿತರಿದ್ದರು.
===========================================