ಸಣ್ಣ ಕೈಗಾರಿಕೆಗಳ ಪುನಶ್ಚೇತನಕ್ಕೆ ಒತ್ತು: ಸಚಿವೆ ಗೀತಾ ಮಹದೇವಪ್ರಸಾದ್
ಬೆಂಗಳೂರು, ಸೆ. 7: ಕಾವೇರಿ ಕರಕುಶಲ ಉತ್ಪನ್ನಗಳ ಮಾರಾಟ ಮಳಿಗೆಗಳನ್ನು ಈಗಾಗಲೇ ಮಲೇಶಿಯಾ, ಜಪಾನ್, ಅಮೆರಿಕಾ ಸೇರಿದಂತೆ ವಿದೇಶಗಳಲ್ಲಿಯೂ ಆರಂಭಿಸಿದ್ದು, ಶೀಘ್ರದಲ್ಲೆ ಆಸ್ಟ್ರೇಲಿಯಾದಲ್ಲಿಯೂ ಮಳಿಗೆ ಆರಂಭಿಸಲಾಗುವುದು ಎಂದು ಸಣ್ಣ ಕೈಗಾರಿಕಾ ಇಲಾಖೆ ನೂತನ ಸಚಿವೆ ಗೀತಾ ಮಹದೇವ ಪ್ರಸಾದ್ ತಿಳಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ಹೊರತಂದಿರುವ ಕಾವೇರಿ ಲಾಯಲ್ಟಿ ಕಾರ್ಡ್ ಹಾಗೂ ಕಾವೇರಿ ಗಿಫ್ಟ್ ಕಾರ್ಡ್‌ಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಈ ಕಾರ್ಡ್‌ಗಳನ್ನು ಪರಿಚಯಿಸುವ ಮೂಲಕ ಕರಕುಶಲ ಅಭಿವೃದ್ಧಿ ನಿಗಮದ ಕಾವೇರಿ ಮಳಿಗೆಗೆ ಗ್ರಾಹಕರನ್ನು ಸೆಳೆಯಲು ಅನುಕೂಲವಾಗಲಿದೆ ಎಂದರು.
ಕಾವೇರಿ ಕರಕುಶಲ ಉತ್ಪನ್ನ ಮಾರಾಟ ಮಳಿಗೆಗಳಲ್ಲಿ ಗ್ರಾಹಕರು ಖರೀದಿಸಿದ ವಸ್ತುಗಳ ಮೌಲ್ಯಕ್ಕೆ ಅನುಗುಣವಾಗಿ ರಿವಾರ್ಡ್ ಪಾಯಿಂಟ್‌ನ್ನು ಕಾವೇರಿ ಲಾಯಲ್ಟಿ ಕಾರ್ಡ್‌ಗಳಿಗೆ ಕ್ರೆಡಿಟ್ ಮಾಡಲಾಗುತ್ತದೆ. ಇದನ್ನು ಗ್ರಾಹಕರು ತನ್ನ ಮುಂದಿನ ಖರೀದಿ ಸಮಯದಲ್ಲಿ ವಸ್ತುಗಳನ್ನು ಖರೀದಿ ಮಾಡಲು ಬಳಸಿಕೊಳ್ಳಬಹುದು.
ಜೊತೆಗೆ ನಿಗಮವು 1ಸಾವಿರ ರೂ., 2 ಸಾವಿರ ರೂ. ಮತ್ತ 5 ಸಾವಿರ ರೂ. ಮೌಲ್ಯದ ಕಾವೇರಿ ಗಿಫ್ಟ್ ಕಾರ್ಡ್ ಅನ್ನು ಪರಿಚಯಿಸಿದೆ. ಈ ಕಾರ್ಡ್‌ಗಳ ಮೂಲಕ ನಿಗಮದ ವಹಿವಾಟು ಹೆಚ್ಚಳವಾಗಲಿದೆ. ಅಲ್ಲದೆ, ಗ್ರಾಹಕರಿಗೆ ಉಡುಗೊರೆ ನೀಡಲು ನೆರವಾಗಲಿದೆ ಎಂದರು.
ಪುನಶ್ಚೇತನ: ರಾಜ್ಯದಲ್ಲಿ ಸಣ್ಣ ಕೈಗಾರಿಕೆಗಳ ಸಮಸ್ಯೆಗಳ ಬಗ್ಗೆ ಮಾಹಿತಿ ಇದೆ. ಸಂಕಷ್ಟದಲ್ಲಿರುವ ಸಣ್ಣ ಕೈಗಾರಿಕೆಗಳ ಪುನಶ್ಚೇತನಕ್ಕೆ ವಿಶೇಷ ಆಸ್ಥೆ ವಹಿಸಿದ್ದು, ತನಗಿರುವ ಅಲ್ಪಾವಧಿಯಲ್ಲೇ ಸಣ್ಣ ಕೈಗಾರಿಕೆಗಳ ಪುನಶ್ಚೇತನ ಹಾಗೂ ಪ್ರೋತ್ಸಾಹಕ್ಕೆ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ತಮ್ಮ ಪತಿ ಮಹದೇವ ಪ್ರಸಾದ್ ಅವರ ಕೊಠಡಿಯಲ್ಲೇ ತಾನೂ ಸಚಿವೆಯಾಗಿ ಅಧಿಕಾರ ವಹಿಸಿಕೊಂಡಿರುವುದು ಸಂತಸ ತಂದಿದೆ. ಪತಿ ಕಾರ್ಯ ನಿರ್ವಹಿಸಿದ ಕಚೇರಿಯಲ್ಲಿ ಅವರ ಮಾರ್ಗದರ್ಶನದಲ್ಲೇ ತಾನೂ ಕೆಲಸ ಮಾಡುತ್ತೇನೆ ಎಂದು ಅವರು ತಿಳಿಸಿದರು.