1200 ಮನೆಗಳಿಗೆ ಸಮರ್ಪಕ ನೀರು ಒದಗಿಸುವುದು ಸವಾಲಿನ ಕೆಲಸ: ಶಾಸಕ ಡಾ.ರಫೀಕ್ ಅಹ್ಮದ್
ತುಮಕೂರು, ಸೆ.07: ದಿಬ್ಬೂರಿನಲ್ಲಿ ಬಡವರಿಗಾಗಿ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ನಿರ್ಮಿಸಿರುವ 1200 ಮನೆಗಳಿಗೆ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ 5 ಲಕ್ಷ ಲೀಟರ್ ಸಾಮರ್ಥ್ಯದ ಓವರ್‍ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ತುಮಕೂರು ನಗರ ಶಾಸಕ ಡಾ.ರಫೀಕ್ ಅಹ್ಮದ್ ಗುದ್ದಲಿ ಪೂಜೆ ನೆರವೇರಿಸಿದರು.
ಸುಮಾರು 10 ಎಕರೆ ಜಾಗದಲ್ಲಿ ನಿರ್ಮಾಣವಾಗಿ 1200 ಮನೆಗಳ ನಿರ್ಮಾಣ ಕಾರ್ಯ ಮುಗಿದಿದ್ದು, ಆಗಸ್ಟ್ 19 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನೆಗಳನ್ನು ಉದ್ಘಾಟಿಸಿದ್ದರು. ಸುಮಾರು ಐದು ಸಾವಿರಕ್ಕೂ ಅಧಿಕ ಜನರು ಒಂದೆ ಕಡೆ ವಾಸ ಮಾಡುವ ಬಡಾವಣೆ ಇದಾಗಿದ್ದು, ಪ್ರತಿ ಮನೆಗೆ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅನುದಾನದಲ್ಲಿ ಸುಮಾರು 1.03 ಕೋಟಿ ರೂ. ವೆಚ್ಚದಲ್ಲಿ 5 ಲಕ್ಷ ಲೀಟರ್ ಸಾಮರ್ಥ್ಯದ ಓವರ್ ಟ್ಯಾಂಕ್ ನಿರ್ಮಿಸಿ, ಪ್ರತೀ ಮನೆಗೆ ನೀರು ದೊರಕಿಸುವ ಜವಾಬ್ದಾರಿಯನ್ನು ನಗರಪಾಲಿಕೆ ಮತ್ತು ಕೊಳಗೇರಿ ಅಭಿವೃದ್ಧಿ ಮಂಡಳಿ ಹೊತ್ತಿದೆ.
ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಗುದ್ದಲಿ ಪ್ರಜೆ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಡಾ.ರಫೀಕ್ ಅಹ್ಮದ್, 1200 ಮನೆಗಳಿಗೆ ಸಮರ್ಪಕವಾಗಿ ನೀರು ಒದಗಿಸುವುದು ಒಂದು ಸವಾಲಿನ ಕೆಲಸವಾಗಿದೆ. ಈ ಹಿನ್ನೆಲೆಯಲ್ಲಿ ಸುಮಾರು 5 ಲಕ್ಷ ಲೀಟರ್ ಸಾಮರ್ಥ್ಯದ ದೊಡ್ಡ ಟ್ಯಾಂಕ್ ನಿರ್ಮಿಸಿ ಎಲ್ಲಾ ಮನಗೆಗಳಿಗೆ ಅಗತ್ಯವಿರುವ ನೀರು ನೀಡಲು ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ಕೊಳಗೇರಿ ಅಭಿವೃದ್ಧಿ ಮಂಡಳಿ 1.03 ಕೋಟಿ ರೂ. ಖರ್ಚು ಮಾಡುತ್ತಿದೆ. ಇದರಿಂದ ಭವಿಷ್ಯದಲ್ಲಿ ಉದ್ಬವಿಸಬಹುದಾದ ದೊಡ್ಡ ಸಮಸ್ಯೆ ಈಗಲೇ ಬಗಹರಿದಂತಾಗಿದೆ ಎಂದರು.
ಈ ಸಂದರ್ಭದಲ್ಲಿ ವಾರ್ಡಿನ ಸದಸ್ಯ ಪ್ರೆಸ್ ರಾಜಣ್ಣ, ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳಾದ ಎಇಇ ಮಹೇಂದ್ರ, ಎಇ. ಷಣ್ಮುಖಪ್ಪ, ಗುತ್ತಿಗೆದಾರ ಹನುಮಂತರಾಯಪ್ಪ ಮತ್ತಿತರರಿದ್ದರು.