ಮದ್ಯದಂಗಡಿ ತೆರೆಯಲು ಅನುಮತಿ ನೀಡದಂತೆ ಆಗ್ರಹಿಸಿ ಗ್ರಾಮಸ್ಥರ ಧರಣಿ
ಶಿವಮೊಗ್ಗ, ಸೆ. 7: ಪ್ರಸ್ತುತ ಗ್ರಾಮದಲ್ಲಿ ಮುಚ್ಚಲ್ಪಟ್ಟಿರುವ ಮದ್ಯದಂಗಡಿ ಪುನಾರಾರಂಭಕ್ಕೆ ಪರವಾನಿಗೆ ನೀಡದಂತೆ ಆಗ್ರಹಿಸಿ ನಗರದ ಹೊರವಲಯ ಹರಿಗೆ ಗ್ರಾಮದ ನಿವಾಸಿಗಳು ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಧರಣಿ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಗ್ರಾಮಸ್ಥರು ಮಾತನಾಡಿ, ಹರಿಗೆ ಗ್ರಾಮದಲ್ಲಿ ಈ ಹಿಂದೆ ಕಾರ್ಯನಿರ್ವಹಣೆ ಮಾಡುತ್ತಿದ್ದ ಶ್ರೀನಿಧಿ ವೈನ್‍ಶಾಪ್‍ನ್ನು ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಮುಚ್ಚಲಾಗಿತ್ತು. ಆದರೆ ವೈನ್‍ಶಾಪ್ ಮಾಲಕರು ಸರ್ಕಾರದಿಂದ ಮತ್ತೊಮ್ಮೆ ಅನುಮತಿ ಪಡೆದು ಮದ್ಯದಂಗಡಿಯನ್ನು ಪುನಃ ತೆರೆಯುವ ಹುನ್ನಾರ ನಡೆಸಿದ್ದಾರೆ ಎಂದು ದೂರಿದ್ದಾರೆ.
ಮದ್ಯದಂಗಡಿಯಿದ್ದ ಪ್ರದೇಶದ ಸುತ್ತ-ಮುತ್ತಲು ದೇವಸ್ಥಾನ, ದಲಿತರ ಕೇರಿ, ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿವೆ. ಈ ಮದ್ಯದಂಗಡಿಯ ಎದುರಿನಿಂದಲೇ ಮಕ್ಕಳು, ಮಹಿಳೆಯರು, ವಿದ್ಯಾರ್ಥಿಗಳು ಸಾಗುವುದರಿಂದ ಅವರ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ತಿಳಿಸಿದರು.
ಮದ್ಯದಂಗಡಿಯ ಬಳಿ ಮಹಿಳೆಯರು ಓಡಾಡಲು ಸಾಧ್ಯವಾಗದಂತಹ ಸ್ಥಿತಿಯಿತ್ತು. ಮದ್ಯ ವ್ಯಸನಿಗಳು ಅವ್ಯಾಚ್ಯ ಶಬ್ದಗಳಿಂದ ನಿಂದಿಸುವುದು ಸೇರಿದಂತೆ ಅಸಭ್ಯ ಚಟುವಟಿಕೆಗಳಲ್ಲಿ ತೊಡಗುತ್ತಿದ್ದರು. ಜೊತೆಗೆ ಗ್ರಾಮದಲ್ಲಿರುವ ಹದಿಹರಿಯದವರು ಮದ್ಯ ವ್ಯಸನದ ದುಶ್ಚಟಕ್ಕೆ ಬಲಿಯಾಗುತ್ತಿದ್ದು, ಇದೀಗ ಮತ್ತೆ ಮದ್ಯದಂಗಡಿ ತೆರೆಯಲು ಅನುಮತಿಗೆ ಯತ್ನಿಸಲಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು. ಅನುಮತಿ ನೀಡಿದರೆ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.
ಧರಣಿಯಲ್ಲಿ ರಾಧಾ, ಶ್ರೀನಿವಾಸ್, ಬಸಮ್ಮ, ಗಂಗಮ್ಮ, ಆದಿತ್ಯ, ಮಂಜುನಾಥ ಮೊದಲಾದವರಿದ್ದರು.