ಮಳೆ ಕೊರತೆಯಿಂದ ಭದ್ರಾ ಜಲಾಶಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹವಾಗಿಲ್ಲ: ಎಚ್.ಎಸ್.ಸುಂದರೇಶ್
ಶಿವಮೊಗ್ಗ, ಸೆ. 7: ಚಿತ್ರದುರ್ಗ ಹಾಗೂ ದಾವಣಗೆರೆ ನಗರಗಳಿಗೆ ಕುಡಿಯುವ ನೀರು ಪೂರೈಕೆಯ ಉದ್ದೇಶದಿಂದ ಶಾಂತಿಸಾಗರ (ಸೂಳೆಕೆರೆ) ಕೆರೆಗೆ ಭದ್ರಾ ಜಲಾಶಯದಿಂದ ನೀರು ಹರಿಸುವ ಸಂಬಂಧ ಇಷ್ಟರಲ್ಲಿಯೇ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭದ್ರಾ ಅಚ್ಚುಕಟ್ಟು ಪ್ರಾಧಿಕಾರ (ಕಾಡಾ) ದ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಸ್ಪಷ್ಟಪಡಿಸಿದ್ದಾರೆ.
ಗುರುವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಪ್ರಸ್ತುತ ಜಲಾನಯನ ಪ್ರದೇಶದಲ್ಲಿ ಉಂಟಾದ ಮಳೆ ಕೊರತೆಯಿಂದ ಭದ್ರಾ ಜಲಾಶಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹವಾಗಿಲ್ಲ. ಪ್ರಸ್ತುತ ಜಲಾಶಯದಲ್ಲಿ 40 ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ. ಇದರಲ್ಲಿ 13.83 ಟಿಎಂಸಿಯಷ್ಟು ನೀರು ಬಳಕೆಗೆ ಲಭ್ಯವಾಗುವುದಿಲ್ಲ. ಕುಡಿಯುವ ನೀರಿಗೆ 7 ಟಿಎಂಸಿ ಮೀಸಲಿಟ್ಟರೆ, ನೀರಾವರಿಗೆ ಕೇವಲ 19.17 ಟಿಎಂಸಿಯಷ್ಟು ನೀರು ಮಾತ್ರ ಉಳಿಯಲಿದೆ. ಈ ಎಲ್ಲ ಅಂಶಗಳ ಪರಿಶೀಲನೆ ನಡೆಸಿ ಹಾಗೂ ಅಚ್ಚುಕಟ್ಟು ವ್ಯಾಪ್ತಿಯ ಬಳಕೆದಾರರ ಅಭಿಪ್ರಾಯ ಪಡೆದು ಶಾಂತಿಸಾಗರ ಕೆರೆಗೆ ನೀರು ಹರಿಸುವ ಸಂಬಂಧ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಚಿತ್ರದುರ್ಗ ನಗರಸಭೆ ಅಧ್ಯಕ್ಷರ ನೇತೃತ್ವದಲ್ಲಿ ಅಲ್ಲಿನ ಸದಸ್ಯರ ನಿಯೋಗವು ಕಳೆದ ತಿಂಗಳು ತಮ್ಮನ್ನು ಭೇಟಿಯಾಗಿ, ಚಿತ್ರದುರ್ಗದಲ್ಲಿ ಕುಡಿಯುವ ನೀರಿನ ತೀವ್ರ ಅಭಾವವಿದೆ. ನಗರಕ್ಕೆ ನೀರು ಪೂರೈಕೆ ಮಾಡುವ ಶಾಂತಿಸಾಗರ ಕೆರೆ ಒಣಗಿ ಹೋಗಿರುವುದರಿಂದ ಸಮಸ್ಯೆ ಉಲ್ಬಣಿಸಿದೆ. ಈ ಹಿನ್ನೆಲೆಯಲ್ಲಿ ಭದ್ರಾ ಜಲಾಶಯದಿಂದ ಕೆರೆಗೆ ನೀರು ಹರಿಸುವಂತೆ ಮನವಿ ಮಾಡಿದ್ದರು. ಇದರ ಆಧಾರದ ಮೇಲೆ ತಾವು ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಕುಡಿಯುವ ನೀರಿನ ಸ್ಥಿತಿಗತಿಯ ಬಗ್ಗೆ ವರದಿ ಕೇಳಿದ್ದೆನೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳು ಕೊಡುವ ವರದಿ ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಇದೇ ಸಂದರ್ಭದಲ್ಲಿ ಎಚ್.ಎಸ್.ಸುಂದರೇಶ್ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಅಸಾಧ್ಯ: ಪ್ರಸ್ತುತ ಶಾಂತಿಸಾಗರ ಕೆರೆಗೆ ನೀರು ಹರಿಸುವ ಸ್ಥಿತಿಯಲ್ಲಿ ಭದ್ರಾ ಆಡಳಿತ ಮಂಡಳಿ ಇಲ್ಲವಾಗಿದೆ. ಡ್ಯಾಂನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹವಾಗಿಲ್ಲದಿರುವುದು ಹಾಗೂ ಡ್ಯಾಂನಿಂದ ನೀರು ಬಿಟ್ಟರೂ ಕೆರೆಗೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ತಲುಪುವ ಸಾಧ್ಯತೆ ಕಡಿಮೆಯಿರುವುದರಿಂದ ನೀರು ಬಿಡದಿರುವ ಸಾಧ್ಯತೆ ಕಡಿಮೆಯಿದೆ ಎಂದು ಕಾಡಾ ಮೂಲಗಳು ಹೇಳುತ್ತವೆ.
ನೀರಿನ ಅಗತ್ಯವಿದೆ ಎಂದ ಚಿತ್ರದುರ್ಗ ಜಿಲ್ಲಾಧಿಕಾರಿ: ಇತ್ತೀಚೆಗೆ ಕಾಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್‍ರವರು ಚಿತ್ರದುರ್ಗದಲ್ಲಿರುವ ಕುಡಿಯುವ ನೀರಿನ ಸ್ಥಿತಿಗತಿ ಹಾಗೂ ಶಾಂತಿಸಾಗರ ಕೆರೆಗೆ ನೀರು ಹರಿಸುವ ಕುರಿತಂತೆ ಚಿತ್ರದುರ್ಗ ಜಿಲ್ಲಾಧಿಕಾರಿಗೆ ಪತ್ರ ಬರೆದು ಮಾಹಿತಿ ಕೇಳಿದ್ದರು. ಈ ಪತ್ರಕ್ಕೆ ಚಿತ್ರದುರ್ಗ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯರವರು ಗುರುವಾರ ಕಾಡಾಕ್ಕೆ ಉತ್ತರ ಬರೆದಿದ್ದು, 'ಚಿತ್ರದುರ್ಗದಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿರುವುದರಿಂದ ಶಾಂತಿಸಾಗರ ಕೆರೆಗೆ ನೀರು ಹರಿಸಿದರೆ ಅನುಕೂಲವಾಗಲಿದೆ' ಎಂದು ತಿಳಿಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.