ಎಸೆಸೆಲ್ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗೆ ಜಿಲ್ಲಾಧಿಕಾರಿ ಸೂಚನೆ
ಮಡಿಕೇರಿ, ಸೆ.7: 2016-17ನೆ ಸಾಲಿನಲ್ಲಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.50ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಶಾಲೆಗಳಲ್ಲಿ ಎಸೆಸೆಲ್ಸಿ ಫಲಿತಾಂಶ ಉತ್ತಮಪಡಿಸಲು ಈಗಿನಿಂದಲೇ ಅಗತ್ಯ ತಯಾರಿ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.50ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಶಾಲೆಗಳ ಮುಖ್ಯೋಪಾಧ್ಯಾಯರ ಜೊತೆ ಗುರುವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಎಸೆಸೆಲ್ಸಿ ಉತ್ತೀರ್ಣರಾಗದೆ ಸರ್ಕಾರದ ಯಾವುದೇ ಸೌಲಭ್ಯಗಳನ್ನು ಪಡೆಯಲು ಮುಂದಿನ ದಿನಗಳಲ್ಲಿ ಕಷ್ಟಸಾಧ್ಯವಾಗಲಿದೆ. ವಾಹನ ಚಾಲನಾ ಪರವಾನಿಗೆಗೂ ಎಸೆಸೆಲ್ಸಿ ಉತ್ತೀರ್ಣರಾಗಿರಬೇಕು ಎಂಬುದು ಆದೇಶ ಬರಬಹುದು. ಆದ್ದರಿಂದ ಈಗ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಎಸೆಸೆಲ್ಸಿ ಉತ್ತೀರ್ಣರಾಗಲು ವಿಶೇಷ ಗಮನ ನೀಡಬೇಕಿದೆ. ಆ ನಿಟ್ಟಿನಲ್ಲಿ ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರು ಮಕ್ಕಳಿಗೆ ಮಾರ್ಗದರ್ಶನ ಮಾಡಬೇಕಿದೆ ಎಂದರು.
ಎಸೆಸೆಲ್ಸಿ ಫಲಿತಾಂಶ ಸುಧಾರಣೆ ಮಾಡುವ ನಿಟ್ಟಿನಲ್ಲಿ ವಿಶೇಷ ಆಸಕ್ತಿ ವಹಿಸಬೇಕು. ಶಿಕ್ಷಕರು ಮೊದಲು ಶಾಲೆಗೆ ಸರಿಯಾದ ಸಮಯಕ್ಕೆ ಹಾಜರಾಗಬೇಕು. ವಿದ್ಯಾರ್ಥಿಗಳಿಗೆ ಶಿಕ್ಷಣದ ಮಹತ್ವದ ಬಗ್ಗೆ ತಿಳುವಳಿಕೆ ನೀಡಬೇಕು. ಪೋಷಕರ ಸಭೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.
ಶಿಕ್ಷಕರು ಮಕ್ಕಳ ಬಗ್ಗೆ ವಿಶೇಷ ಆಸಕ್ತಿ ಮತ್ತು ಇಚ್ಚಾಶಕ್ತಿ ವಹಿಸಿದ್ದಲ್ಲಿ ಎಸೆಸೆಲ್ಸಿ ಫಲಿತಾಂಶದಲ್ಲಿ ಸುಧಾರಣೆ ತರಬಹುದು. ಶಿಕ್ಷಕರ ಸಂಖ್ಯೆ ಕಡಿಮೆ ಇದ್ದಲ್ಲಿ ತಾತ್ಕಾಲಿಕವಾಗಿಯಾದರೂ ಸ್ಥಳೀಯ ಶಿಕ್ಷಕರನ್ನು ನೇಮಿಸಿಕೊಂಡು ಫಲಿತಾಂಶ ಸುಧಾರಿಸಲು ಮುಂದಾಗಬೇಕಿದೆ ಎಂದು ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಹೇಳಿದರು.
ಮನೆಯಿಂದ ತೆರಳಿರುವ ಮಕ್ಕಳು ಶಾಲೆಗೆ ಹಾಜರಾಗಿಲ್ಲವೆಂದರೆ ಇತರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಭಾವಿಸಬೇಕಾಗುತ್ತದೆ. ಜೊತೆಗೆ ಶಿಕ್ಷಕರು ಶಾಲೆಗೆ ಹಾಜರಾಗುತ್ತಿಲ್ಲವೆಂದು ತಿಳಿಯಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ದಶರಥ ಎಂ.ದಾನೋಜಿ ಅವರು ಜಿಲ್ಲೆಯ ಹೊದವಾಡ, ಎಮ್ಮೆಮಾಡು, ಸೋಮವಾರಪೇಟೆ, ಸುಂಟಿಕೊಪ್ಪ, 7ನೆ ಹೊಸಕೋಟೆ, ಸೂರ್ಲಬ್ಬಿ ಸರ್ಕಾರಿ ಪ್ರೌಢಶಾಲೆಗಳು, ಸಿದ್ದಾಪುರ, ಕಡಂಗ, ಸೋಮವಾರಪೇಟೆ ಎಸ್.ಜೆ.ಎಂ. ಪ್ರೌಢಶಾಲೆ, ಬೇಳೂರು ದೊರೆ ವೀರ ಹಾಗೂ ವಿಜಯಲಕ್ಷ್ಮಿ ಬಾಳೆಲೆ ಅನುದಾನಿತ ಪ್ರೌಢಶಾಲೆಗಳು ಹಾಗೂ ವಿರಾಜಪೇಟೆಯ ಮೌಂಟೈನ್ ವೀವ್ ಅನುದಾನ ರಹಿತ ಪ್ರೌಢಶಾಲೆಗಳಲ್ಲಿ ಶೇ.50ಕ್ಕಿಂತ ಕಡಿಮೆ ಫಲಿತಾಂಶ ಬಂದಿದೆ ಎಂದು ಅವರು ಮಾಹಿತಿ ನೀಡಿದರು.
ಈ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು ಸ್ಥಳೀಯ ಸಮಸ್ಯೆಗಳು, ಶಿಕ್ಷಕರ ಕೊರತೆ ಮತ್ತಿತರ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಶಿಕ್ಷಣಾಧಿಕಾರಿ ದೇವನಾಯಕ್, ಮೃತ್ಯುಂಜಯ, ಸೋಮವಾರಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಇತರರು ಉಪಸ್ಥಿತರಿದ್ದರು.