ಸದೃಢ ದೇಶ ನಿರ್ಮಾಣ ಮಾಡಲು ಶಿಶುವಿನ ಸರ್ವತೋಮುಖ ಬೆಳವಣಿಗೆ ಅಗತ್ಯ:ನ್ಯಾ. ಎಸ್.ಎಚ್. ಕೋರಡ್ಡಿ
ಚಿಕ್ಕಬಳ್ಳಾಪುರ, ಸೆ.7: ಸದೃಢ ದೇಶ ನಿರ್ಮಾಣ ಮಾಡಲು ಶಿಶುವಿನ ಸರ್ವತೋಮುಖ ಬೆಳವಣಿಗೆ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಮಗುವಿನ ಬೆಳವಣಿಗೆ ಪೂರಕವಾದ ಪೌಷ್ಟಿಕ ಆಹಾರವನ್ನು ಒದಗಿಸಬೇಕಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಎಚ್. ಕೋರಡ್ಡಿ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಪೌಷ್ಟಿಕತೆಯ ಸಪ್ತಾಹ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಡತನ, ಅಜ್ಞಾನ, ಮೂಢನಂಬಿಕೆಗಳಿಂದಾಗಿ ಮಹಿಳೆಯರು ಹಾಗೂ ಮಕ್ಕಳ ಅಪೌಷ್ಟಿಕತೆಗೆ ಕಾರಣವಾಗಿದೆ ಎಂದರು.
ಗರ್ಭಿಣಿಯರು ಪೌಷ್ಟಿಕ ಆಹಾರ ಸೇವನೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕಿದೆ. ಎದೆ ಹಾಲು ಅಮೃತಕ್ಕೆ ಸಮನಾಗಿದ್ದು, ತಾಯಿಯ ಎದೆ ಹಾಲನ್ನು ಮಗುವಿಗೆ ಉಣಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಜೊತೆಗೆ ಸರ್ವತೋಮುಖ ಬೆಳವಣಿಗೆ ಸಹಕಾರಿಯಾಗುವುದು ಎಂದ ಅವರು,
ಮಕ್ಕಳಲ್ಲಿನ ಅಪೌಷ್ಟಿಕತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಯೋಜನೆಗಳನ್ನು ಮಹಿಳೆಯರು ಸದುಪಯೋಗಪಡಿಸಿಕೊಂಡು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಾಣ ಮಾಡಬೇಕೆಂದು ಕರೆ ನೀಡಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ರವಿಶಂಕರ್ ಮಾತನಾಡಿ, ಸೆ.1 ರಿಂದ 7ರವರೆಗೆ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹವನ್ನು ಆಚರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರತಿಯೊಂದು ಅಂಗನವಾಡಿ ಕೇಂದ್ರಗಳಲ್ಲಿ ಮತ್ತು ಉಪಕೇಂದ್ರಗಳಲ್ಲಿ ಪೌಷ್ಠಿಕ ಆಹಾರ ಕುರಿತು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಗರ್ಭಿಣಿ ಬಾಣಂತಿಯರಿಗೆ, ಹೆಣ್ಣು ಮಕ್ಕಳಿಗೆ, ಪೌಷ್ಠಿಕ ಆಹಾರದ ಸಮಗ್ರ ಮಾಹಿತಿ ನೀಡಲಾಗುತ್ತಿದ್ದು, ಹೆಚ್ಚಿನ ಜಾಗೃತಿ ಮೂಡಿಸುವಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ತೊಡಗಿಸಿಕೊಂಡಿದ್ದಾರೆ ಎಂದರು.
ಚಿಕ್ಕಬಳ್ಳಾಪುರದಲ್ಲಿ 100ರಲ್ಲಿ ಶೇ.37 ರಷ್ಟು ಶಿಶುಗಳಲ್ಲಿ ಪೌಷ್ಠಿಕತೆಯ ಕೊರತೆಯಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಲವು ಕ್ರಮ ಕೈಗೊಂಡಿದೆ. ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ತಾವು ತೆಗೆದುಕೊಳ್ಳಬೇಕಾದ ಪೌಷ್ಠಿಕ ಆಹಾರದ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವಿಜಯ್ ಕುಮಾರ್ ಮಾತನಾಡಿ, ಮಹಿಳೆಯರು ಮೊಳಕೆ ಕಾಳು, ಹಣ್ಣು-ಹಂಪಲು, ತರಕಾರಿಗಳ ಪ್ರಾಮುಖ್ಯತೆಯನ್ನು ತಿಳಿದುಕೊಂಡು ಸೇವನೆ ಮಾಡುವುದನ್ನು ರೂಢಿಮಾಡಿಕೊಳ್ಳಬೇಕು. ಮೂಢನಂಬಿಕೆಗಳಿಂದ ಹೊರಬಂದು ವಿವಿಧ ರೀತಿಯ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಏಕೆಂದರೆ ವಿವಿಧ ರೀತಿಯ ಆಹಾರಗಳು ಅನೇಕ ರೀತಿಯ ಪೌಷ್ಠಿಕಾಂಶವನ್ನು ಒದಗಿಸುತ್ತದೆ ಎಂದು ಮಾಹಿತಿ ನೀಡಿದರು.
ಈ ವೇಳೆ ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಪೌಷ್ಠಿಕ ಆಹಾರದ ಪೊಟ್ಟಣವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಕೆ.ಎಚ್. ತಮ್ಮೇಗೌಡ ರವರು ಮಾತನಾಡಿದರು. ನ್ಯಾಯಾಧೀಶರಾದ ಎಚ್. ದೇವರಾಜ್, ಲೋಕೇಶ್, ಶೈಲಜಾ, ಅನುಪಮ, ಹರಟಗಿ, ವಕೀಲರ ಸಂಘದ ಬಿ.ವಿನೋದ್ ಕುಮಾರ್ ಸೇರಿದಂತೆ ಮತ್ತಿತರರಿದ್ದರು.