×
Ad

​ರಾಜ್ಯ ಸರಕಾರದ ವೈಫಲ್ಯಕ್ಕೆ ದೇವೇಗೌಡ ಕಿಡಿ

Update: 2017-09-07 23:01 IST

ತುಮಕೂರು, ಸೆ.7: ಹಿರಿಯ ಪತ್ರಕರ್ತೆ ಹಾಗೂ ವಿಚಾರವಾದಿ ಗೌರಿ ಲಂಕೇಶ್ ಹತ್ಯೆಗೆ ರಾಜ್ಯ ಸರಕಾರದ ವೈಫಲ್ಯವೇ ಕಾರಣ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಕಿಡಿಕಾರಿದ್ದಾರೆ.

ನಗರದಲ್ಲಿ ಪಕ್ಷದ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಏನಾಗಿದೆ. ನಿಮ್ಮ ಗುಪ್ತಚರ ಇಲಾಖೆ ಏನು ಮಾಡುತ್ತಿದ್ದೆ, ಅಧಿಕಾರ ನಡೆಸುವ ಮಂದಿಗೆ ಜವಾಬ್ದಾರಿ ಎಲ್ಲವೇ ಎಂದು ಗುಡುಗಿದರು.

ದುಷ್ಟ ಶಕ್ತಿಗಳ ಉಪ್ಪಟಳ ಹೆಚ್ಚಾಗಿದ್ದು, ಸರಕಾರ ಕ್ರಮಕೈಗೊಳ್ಳಬೇಕಿದೆ. ಕಾನೂನು ಕೈಗೆತ್ತಿಕೊಳ್ಳುತ್ತಿರುವ ಮಂದಿಯ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ವಿಫಲವಾಗಿದೆ. ರಾಷ್ಟ್ರೀಯ ಪಕ್ಷಗಳಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ರಾಜ್ಯದಲ್ಲಿ ಈಗಾಗಲೇ ಪಕ್ಷ ಸಂಘಟನೆಗೆ ರಾಜ್ಯವ್ಯಾಪಿ ಪ್ರವಾಸ ಮಾಡಿ, ಸಂಘಟನೆ ಬಲ ಪಡಿಸಲಾಗಿದೆ ಎಂದರು.

ಸಮೀಕ್ಷೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ವಾಸ್ತವಿಕ ವರದಿ ನಮ್ಮ ಬಳಿಯೂ ಇದೆ. ನಾವು ಸಮೀಕ್ಷೆ ಮಾಡಿದ್ದೇವೆ. ಈಗಾಗಲೇ 7 ಮಂದಿ ಉಸ್ತುವಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ, ಪಕ್ಷ ಟಿಕೆಟ್ ಹಂಚಿಕೆ ಸಂಬಂಧ ಮುಖಂಡರ ಅಭಿಪ್ರಾಯ ಸಂಗ್ರಹಿಸುವುದರ ಜೊತೆಗೆ ಹಾಲಿ ಶಾಸಕರು, ಪರಾಜೀತ ಅಭ್ಯರ್ಥಿಗ ಹಾಗೂ ಆಕಾಂಕ್ಷಿಗಳ ಸಭೆ ನಡೆಸಿ ಇರುವ ಸಣ್ಣಪುಟ್ಟ ಸಮಸ್ಯೆ ಬಗೆಹರಿಸಲಾಗುವುದು. ಯಾವುದೇ ಕಾರಣಕ್ಕೂ ಗೊಂದಲಕ್ಕೆ ಅವಕಾಶವಿಲ್ಲ ಎಂದು ದೇವೇಗೌಡರು ನುಡಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಸಿ.ಚನ್ನಿಗಪ್ಪ,ಮಾಜಿ ಸಚಿವ ಸತ್ಯನಾರಾಯಣ್, ಶಾಸಕರಾದ ಡಿ.ನಾಗರಾಜಯ್ಯ, ಎಸ್.ಆರ್.ಶ್ರೀನಿವಾಸ್,ಸುರೇಶ್‍ಬಾಬು, ಸುಧಾಕರ್‍ಲಾಲ್, ಎಂಎಲ್‍ಸಿ ಬೆಮಲ್‍ಕಾಂತರಾಜು  ಇತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News