ಗೌರಿ ಲಂಕೇಶ್ ಹತ್ಯೆ ಪ್ರಕರಣ: ಆರೋಪಿಗಳ ಬಂಧನಕ್ಕೆ ಪತ್ರಕರ್ತರ ಒತ್ತಾಯ
ಮೂಡಿಗೆರೆ, ಸೆ.8: ಸಾಮಾಜಿಕ ಹೋರಾಟಗಾರ್ತಿ ಹಾಗೂ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‍ರ ಹತ್ಯೆ ಖಂಡಿಸಿ ಮೂಡಿಗೆರೆ ತಾಲೂಕು ಪತ್ರಕರ್ತರ ಬಳಗ ತಹಶೀಲ್ದಾರ್ ಮೂಲಕ ಶುಕ್ರವಾರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ನಿಷ್ಠಾವಂತ ಪತ್ರಕರ್ತೆ ಗೌರಿ ಲಂಕೇಶ್‍ರನ್ನು ಪೂರ್ವ ನಿಯೋಜಿತ ರೀತಿಯಲ್ಲಿ ಬಂದೂಕಿನಿಂದ ಗುಂಡಿಟ್ಟು ಹಂತಕರು ಹತ್ಯೆಗೈದಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ದುಷ್ಕರ್ಮಿಗಳು ಬಂದೂಕು ಕೈಗೆತ್ತಿಕೊಂಡಿರುವ ಸಾಧ್ಯತೆಗಳಿದ್ದು, ಹತ್ಯೆ ನಡೆಸಿದ ಆರೋಪಿಗಳು ಎಷ್ಟೇ ಪ್ರಭಾವಿ ಉಗ್ರರಾಗಿದ್ದರೂ ಯಾವುದೇ ಒತ್ತಡಗಳಿಗೂ ಮಣಿಯದೆ ಅತೀ ಶೀಘ್ರವಾಗಿ ಬಂಧಿಸಬೇಕು. ಹತ್ಯೆ ಆರೋಪಿಗಳಿಗೆ ನೆರವಾಗಿರುವ ಹಂತಕರ ಹಿಂದಿರುವ ಕಾಣದ ಕೈಗಳನ್ನು ಬಂಧಿಸಿ ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಪತ್ರಕರ್ತರಿಗೆ ರಕ್ಷಣೆ ಇಲ್ಲವಾಗಿದೆ. ನಗರ, ಪಟ್ಟಣ ಮತ್ತು ಗ್ರಾಮೀಣ ಭಾಗಗಳಲ್ಲಿ ನಿರ್ಭೀತಿಯಿಂದ ಕೆಲಸ ಮಾಡಲು ಸಾಮಾನ್ಯ ಪತ್ರಕರ್ತರಿಗೆ ಸಾಧ್ಯವಾಗದಂತ ಪರಿಸ್ಥಿತಿಯನ್ನು ದುಷ್ಕರ್ಮಿಗಳು, ಸಮಾಜಘಾತುಕ ಶಕ್ತಿಗಳು ನಿರ್ಮಿಸುತ್ತಿವೆ. ಈ ಹಿನ್ನೆಲೆಯಲ್ಲಿ ಎಲ್ಲಾ ಪತ್ರಕರ್ತರಿಗೂ ಸೂಕ್ತ ರಕ್ಷಣೆಯನ್ನು ನೀಡಬೇಕು. ಭವಿಷ್ಯದಲ್ಲಿ ಪತ್ರಕರ್ತರ ಮೇಲೆ ಹಲ್ಲೆ, ಹತ್ಯೆಯಂತಹ ಕೃತ್ಯಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಜರುಗಿಸಬೇಕು. ಸರಕಾರ ಪತ್ರಕರ್ತರ ರಕ್ಷಣೆಗೆ ನೂತನ ಕಾಯ್ದೆಯೊಂದನ್ನು ತಕ್ಷಣ ಜಾರಿಗೊಳಿಸಲು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಪತ್ರಕರ್ತರಾದ ಅಝೀಝ್ ಕಿರುಗುಂದ, ಪ್ರಸನ್ನಗೌಡಳ್ಳಿ, ವಾಸುದೇವ್, ರಫೀಕ್ ಕಿರುಗುಂದ, ಉದಯ ಕುಮಾರ್, ಕಿರುಗುಂದ ಅಬ್ಬಾಸ್, ನಂದೀಶ್ ಬಂಕೇನಹಳ್ಳಿ, ತನು ಕೊಟ್ಟಿಗೆಹಾರ, ಸಂತೋಷ್ ಅತ್ತಿಗೆರೆ ಮತ್ತಿತರರು ಪಾಲ್ಗೊಂಡಿದ್ದರು.