ಗೌರಿ ಲಂಕೇಶ್ ಹತ್ಯೆ ಖಂಡಿಸಿ ಬಿಎಸ್ಪಿಯಿಂದ ಪ್ರತಿಭಟನೆ
ಮೂಡಿಗೆರೆ, ಸೆ.8: ಖ್ಯಾತ ಪತ್ರಕರ್ತೆ, ಪ್ರಗತಿಪರ ಚಿಂತಕಿ ಹಾಗೂ ಸಮಾಜ ಸೇವಕಿ ಗೌರಿ ಲಂಕೇಶ್ ಅವರ ಹತ್ಯೆಯನ್ನು ಖಂಡಿಸಿ ಬಿಎಸ್ಪಿ ಪಕ್ಷದ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಬಿಎಸ್ಪಿ ಮುಖಂಡ ಮರಗುಂದ ಪ್ರಸನ್ನ ಮಾತನಾಡಿ, ಪತ್ರಿಕಾರಂಗದ ದೊಡ್ಡ ಆಸ್ತಿಯಾಗಿದ್ದ ಗೌರಿ ಲಂಕೇಶ್, ಮಾಧ್ಯಮ ಕ್ಷೇತ್ರಕ್ಕೆ ನ್ಯಾಯ ಒದಗಿಸುವಂತಹ ಗಟ್ಟಿ ಧ್ವನಿಯಾಗಿದ್ದರು. ತಾನು ನಂಬಿದ ಸಿದ್ದಾಂತವನ್ನು ದಿಟ್ಟವಾಗಿ ಮುಂದಿರಿಸಿ ಹೋರಾಟ ನಡೆಸಿದ್ದರು. ಅವರು ಕಾಡಿನಲ್ಲಿ ಶಸ್ತ್ರ ಹಿಡಿದು ಹೋರಾಡುತ್ತಿದ್ದ ನಕ್ಸಲಿಯರನ್ನು ಮುಖ್ಯವಾಹಿನಿಗೆ ತಂದಂತ ಮಹಾನ್ ಸಾಧಕಿಯಾಗಿದ್ದಾರೆ ಎಂದು ಹೇಳಿದರು.
ಸಂಘ ಪರಿವಾರದ ಹಿಂದುತ್ವವಾದಿ ಮತೀಯ ಶಕ್ತಿಗಳ ವಿರುದ್ಧ ಹೋರಾಟ ನಡೆಸಿದ್ದರು. ಅವರು ಸಾಮಾಜಿಕ ಹೋರಾಟದಲ್ಲಿ ಸಕ್ರೀಯವಾಗಿ ಚುರುಕಿನಿಂದ ತೊಡಗಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಅವರನ್ನು ಹತ್ಯೆ ನಡೆಸಿರುವ ಬಗ್ಗೆ ವ್ಯಾಪಕ ಸಂಶಯ ವ್ಯಕ್ತವಾಗುತ್ತಿದೆ ಎಂದ ಅವರು, ಸಿಬಿಐ ಕೇಂದ್ರ ಸರಕಾರದ ಅದೀನದಲ್ಲಿರುವ ಕಾರಣ ಪ್ರಕರಣವನ್ನು ಸಿಬಿಐಗೆ ವಹಿಸಿದಲ್ಲಿ ತನಿಖೆ ಹಾದಿ ತಪ್ಪಿಬಿಡುವ ಆತಂಕವಿದೆ. ಆದ್ದರಿಂದ ರಾಜ್ಯ ಸರಕಾರವೆ ರಚಿಸಿರುವ ವಿಶೇಷ ತನಿಖಾ ಘಟಕ ಅಥವಾ ಸಿಐಡಿ ಮೂಲಕ ತನಿಖೆ ನಡೆಸಿ ಕೊಲೆಗಡುಕರನ್ನು ಬಂಧಿಸಿ ನೇಣಿಗೇರಿಸಬೇಕೆಂದು ಒತ್ತಾಯಿಸಿದರು.
ಮುಖಂಡ ಯು.ಬಿ.ಮಂಜಯ್ಯ ಮಾತನಾಡಿ, ಗೌರಿ ಲಂಕೇಶ್‍ರಂತಹ ಪತ್ರಕರ್ತರನ್ನು ಕೊಲ್ಲುವುದಾದರೆ ಸಾಮಾನ್ಯ ಪತ್ರಕರ್ತರಿಗೆ ಯಾವ ರೀತಿ ರಕ್ಷಣೆ ಇರಬಹುದು ಎನ್ನುವ ಬಗ್ಗೆ ಆಲೋಚಿಸಬಹುದಾಗಿದೆ. ಇಂದು ನಿಷ್ಟುರವಾಗಿ ನಡೆದುಕೊಂಡರೆ ಕೊಲ್ಲುವ ಪ್ರವೃತ್ತಿ ಬೆಳೆಯುತ್ತಿದ್ದು, ಇದು ಸಮಾಜ ಅಧಃ ಪತನಕ್ಕೆ ದಾರಿಯಾಗುತ್ತಿದೆ. ಭವಿಷ್ಯದಲ್ಲಿ ಇಂತಹ ಕೃತ್ಯಗಳನ್ನು ಹತ್ತಿಕ್ಕಿ ಬದುಕುವ ಜೀವಗಳಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಡನೆಗೂ ಮುನ್ನ ಬಿಎಸ್ಪಿ ಕಾರ್ಯಕರ್ತರು ಮೂಡಿಗೆರೆ ಪ್ರವಾಸಿ ಮಂದಿರದ ಆವರಣದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೌನ ಮೆರವಣಿಗೆ ನಡೆಸಿ ನಂತರ ತಾಲೂಕು ಕಚೇರಿ ಆವರಣದಲ್ಲಿ ಸಭೆ ನಡೆಸಿದರಲ್ಲದೇ ತಹಸಿಲ್ದಾರರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಯು.ಬಿ.ಮಂಜಯ್ಯ, ಪಿ.ಕೆ.ಮಂಜುನಾಥ್, ರಾಮು, ಬಕ್ಕಿ ಮಂಜುನಾಥ್, ಯು.ಬಿ.ನಾಗೇಶ್, ಬಿವಿಎಸ್ ಸಂತೋಷ್‍ಕುಮಾರ್, ವಕೀಲ ಚಂದ್ರಶೇಖರ್ ಮತ್ತಿತರರಿದ್ದರು.