ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕಲು ಗೌರಿ ಲಂಕೇಶ್ ಹತ್ಯೆ: ಕೆ.ಎ.ಯಾಕೂಬ್

Update: 2017-09-08 13:00 GMT

ಮಡಿಕೇರಿ, ಸೆ.8: ವಿಚಾರವಾದಿ ಹಾಗೂ ಹಿರಿಯ ಪತ್ರಕರ್ತೆ ಗೌರಿಲಂಕೇಶ್ ಅವರ ಹತ್ಯೆ ಅತ್ಯಂತ ಖಂಡನೀಯವಾಗಿದ್ದು, ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಷಡ್ಯಂತ್ರ ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ನಡೆಯುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕ ಅಸಮಾಧಾನ ವ್ಯಕ್ತಪಡಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಕೆ.ಎ.ಯಾಕೂಬ್, ಇದು ಸತ್ಯ ಶೋಧನೆಯನ್ನು ದಮನ ಮಾಡುವ ಹೇಯ ಕೃತ್ಯವಾಗಿದ್ದು, ದಿಟ್ಟ ಮಹಿಳೆಯ ಮೇಲಿನ ದಾಳಿಯಿಂದಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯೇ ತಲೆ ತಗ್ಗಿಸುವಂತ್ತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ದೇಶದ ಸಂವಿಧಾನದ ಮೇಲೆ ಗೌರವ ಇಲ್ಲದವರು ಮಾಡಿದ ನೀಚ ಕೃತ್ಯ ಇದಾಗಿದ್ದು, ಇತ್ತೀಚಿನ ದಿನಗಳಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ನಿಯಂತ್ರಿಸುವ ಶಕ್ತಿಗಳು ದೌರ್ಜನ್ಯದಲ್ಲಿ ತೊಡಗಿವೆ ಎಂದು ಆರೋಪಿಸಿದರು.

ತುಳಿತಕ್ಕೊಳಗಾದವರ ಪರ ಹೋರಾಟ ನಡೆಸಲು ಮತ್ತು ಹಾದಿ ತಪ್ಪಿದವರನ್ನು ಮುಖ್ಯವಾಹಿನಿಗೆ ತರಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದ ಗೌರಿ ಲಂಕೇಶ್ ಅವರ ಕಾರ್ಯವನ್ನು ನಾವು ಸದಾ ಸ್ಮರಿಸುತ್ತೇವೆ ಹಾಗೂ ಗೌರವಿಸುತ್ತೇವೆ. ಒಬ್ಬ ಮಹಿಳೆಯಾಗಿಯೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ವ್ಯಕ್ತಪಡಿಸುತ್ತಿದ್ದ ಅವರ ಎದೆಗಾರಿಕೆಯನ್ನು ಸಹಿಸದ ವಿಚ್ಛಿದ್ರಕಾರಿ ಶಕ್ತಿಗಳು ಹತ್ಯೆಯ ಸಂಚು ರೂಪಿಸಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ.
 ಪೊಲೀಸರು ತನಿಖೆಯನ್ನು ಚುರುಕುಗೊಳಿಸಿ ನೈಜ ಕೊಲೆಗಾರರನ್ನು ಬಂಧಿಸುವ ಮೂಲಕ ಸತ್ಯವನ್ನು ಬಯಲಿಗೆಳೆಯಬೇಕು ಮತ್ತು ಕೊಲೆಗಟುಕರಿಗೆ ಪ್ರಚೋದನೆ ನೀಡಿದ ಸಂಚುಕೋರರನ್ನು ಕೂಡ ವಶಕ್ಕೆ ಪಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು. 

ಕಂಠಿ ಕಾರ್ಯಪ್ಪ ರಾಜಿನಾಮೆ ನೀಡಲಿ:  ಜಿಲ್ಲೆಗೆ ಕಳಂಕ ತರುವ ಉದ್ದೇಶದಿಂದ ಮತ್ತು ಮುಂಬರುವ ವಿಧಾನಸಭಾ ಚುನಾವಣೆಯಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹಿಂದೂ ಹಾಗೂ ಮುಸಲ್ಮಾನರ ಬಾಂಧವ್ಯಕ್ಕೆ ಹುಳಿ ಹಿಂಡಲು ಬೆರಳೆಣಿಕೆಯಷ್ಟು ಮಂದಿ ಷಡ್ಯಂತ್ರ ನಡೆಸುತ್ತಿದ್ದಾರೆ. ಇದರ ಒಂದು ಭಾಗವಾಗಿ ಸಿದ್ದಾಪುರದಲ್ಲಿ ಇತ್ತೀಚೆಗೆ ಪ್ರತಿಭಟನಾ ಸಭೆಯೊಂದರಲ್ಲಿ ಚೆಟ್ಟಳ್ಳಿ ಗ್ರಾಪಂ ಸದಸ್ಯ ಕಂಠಿ ಕಾರ್ಯಪ್ಪ ಅವರು ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂದು ಯಾಕೂಬ್ ಆರೋಪಿಸಿದರು.

ಕೇವಲ ಪ್ರಚಾರಕ್ಕಾಗಿ ಮುಸಲ್ಮಾನರನ್ನು ಉತ್ತಮ ಬಾಂಧವ್ಯದಿಂದ ಬೇರ್ಪಡಿಸಿ ಪ್ರಚೋದನಾಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸುತ್ತೇವೆ. 
ಕಂಠಿ ಕಾರ್ಯಪ್ಪ ಅವರು ಒಬ್ಬ ಜನಪ್ರತಿನಿಧಿಯಾಗಿರುವುದರಿಂದ ಇಡೀ ಸಮಾಜದ ಕ್ಷಮೆ ಕೋರಬೇಕು. ತಪ್ಪಿದಲ್ಲಿ ತಮ್ಮ ಗ್ರಾಪಂ ಸದಸ್ಯ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಅಥವಾ ಸದಸ್ಯತ್ವವನ್ನು ರದ್ದುಗೊಳಿಸಲು ಕಾನೂನಿನ ಚೌಕಟ್ಟಿನಡಿ ಕ್ರಮ ಕೈಗೊಳ್ಳಬೇಕು ಎಂದರು.

ದೇವಾಲಯ ಅಪವಿತ್ರ ಪ್ರಕರಣ ಖಂಡನೀಯ: ಕಕ್ಕಬ್ಬೆಯ ಶ್ರೀಭಗವತಿ ದೇವಾಲಯದ ಗೇಟಿನ ಬಳಿ ಗೋವಿನ ಕಾಲುಗಳನ್ನು ನೇತು ಹಾಕಿದ ಪ್ರಕರಣವನ್ನು ತೀವ್ರವಾಗಿ ಖಂಡಿಸುತ್ತೇವೆ. ದೇವಾಲಯವನ್ನು ಅಪವಿತ್ರಗೊಳಿಸಿದವರನ್ನು ತಕ್ಷಣ ಬಂಧಿಸಬೇಕು ಮತ್ತು ತನಿಖೆಯನ್ನು ಚುರುಕುಗೊಳಿಸಿ ಈ ದುಷ್ಕೃತ್ಯಕ್ಕೆ ಕಾರಣ ಏನು ಎನ್ನುವುದನ್ನು ಪತ್ತೆ ಹಚ್ಚಬೇಕು. ಜಿಲ್ಲೆಯ ಜನತೆ ತನಿಖೆಗೆ ಸಹಕಾರ ನೀಡುವ ಮೂಲಕ ಶಾಂತಿಯನ್ನು ಕಾಪಾಡಬೇಕೆಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಖಾಲಿದ್ ಹಾಕತ್ತೂರು, ಸಂಘಟನಾ ಕಾರ್ಯದರ್ಶಿ ಎಂ.ಎ.ಮೊಯ್ದು, ನಾಪೋಕ್ಲು ಬ್ಲಾಕ್ ಅಧ್ಯಕ್ಷ ಕೆ.ಎ.ಬಷೀರ್, ಸದಸ್ಯರಾದ ಮೊಹಮ್ಮದ್ ಹನೀಫ್ ಹಾಗೂ ಹೊಸ್ಕೇರಿ ಗ್ರಾಪಂ ಉಪಾಧ್ಯಕ್ಷ ಯೂಸುಫ್ ಆಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News