ಗೌರಿ ಲಂಕೇಶ್ ಹತ್ಯೆ ಪ್ರಕರಣ: ಆರೋಪಿಗಳ ಬಂಧನಕ್ಕೆ ದಸಂಸ ಆಗ್ರಹ
ಶಿವಮೊಗ್ಗ, ಸೆ.8: ಪತ್ರಕರ್ತೆ ಗೌರಿ ಲಂಕೇಶ್ ಹಂತಕರ ಪತ್ತೆಗೆ ತ್ವರಿತಗತಿಯಲ್ಲಿ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಧರಣಿ ನಡೆಸಿ, ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಧರಣಿನಿರತರರು ಮಾತನಾಡಿ, ದೇಶದಲ್ಲಿ ವಿಚಾರವಾದಿಗಳ ಸರಣಿ ಹತ್ಯೆ ನಡೆಯುತ್ತಿರುವುದು ನಿಜಕ್ಕೂ ಆತಂಕಕಾರಿ ಸಂಗತಿಯಾಗಿದೆ. ಗೌರಿ ಲಂಕೇಶ್‍ರವರ ಹತ್ಯೆಯು ವೈಚಾರಿಕತೆಯ ಹತ್ಯೆಯಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಕಗ್ಗೊಲೆಯಾಗಿದೆ. ಇಡೀ ನಾಗರೀಕ ಸಮಾಜ ತಲೆತಗ್ಗಿಸುವಂತಹ ಹೇಯ ಕೃತ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ದಾಭೋಲ್ಕರ್, ಪೆನ್ಸಾರೆ, ಎಂ.ಎಂ.ಕಲಬುರ್ಗಿಯವರನ್ನು ಹಂತಕರು ಕೊಲೆ ಮಾಡಿದ್ದಾರೆ. ಇದೀಗ ಗೌರಿ ಲಂಕೇಶ್‍ರವರನ್ನು ಕೂಡ ಹತ್ಯೆ ಮಾಡಿದ್ದಾರೆ. ಸಾಲುಸಾಲಾಗಿ ವಿಚಾರವಾದಿಗಳ ಹತ್ಯೆ ನಡೆಯುತ್ತಿದ್ದರೂ ಇಲ್ಲಿಯವರೆಗೂ ಹಂತಕರನ್ನು ಬಂಧಿಸಿ ಶಿಸ್ತು ಕಾನೂನು ಕ್ರಮ ಜರಗಿಸಲು ಮುಂದಾಗಿದಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದರಿಂದ ಹಂತಕರು ತಮ್ಮ ಕೃತ್ಯಗಳನ್ನು ನಿರಾಂತಕವಾಗಿ ಮುಂದುವರಿಸಿಕೊಂಡು ಹೋಗುವಂತಾಗಿದೆ. ಇದು ಸರ್ಕಾರಗಳ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ವಿಚಾರವಾದಿಗಳಿಗೆ, ಸಾಹಿತಿಗಳಿಗೆ, ಹೋರಾಟಗಾರರಿಗೆ ರಕ್ಷಣೆಯೇ ಇಲ್ಲದಂತಾಗಿರುವುದು ನಿಜಕ್ಕೂ ದುರಂತದ ಸಂಗತಿಯಾಗಿದೆ ಎಂದರು.
ಧರಣಿಯಲ್ಲಿ ಸಂಘಟನೆಯ ಮುಖಂಡರಾದ ಚಿನ್ನಯ್ಯ, ಸತ್ಯ ಭದ್ರಾವತಿ, ಕೆ. ನರಸಿಂಹ ಶೆಟ್ಟಿ, ಗುರುರಾಜ, ಕೆ.ಎ.ರಾಜಕುಮಾರ್, ಎಂ.ಪಳನಿರಾಜ್, ಪ್ರಕಾಶ್ ಲಿಗಾಡಿ ಆರ್., ಎಂ.ರಂಗಪ್ಪ, ಬಂಗಾರಪ್ಪ ನಿಟ್ಟಕ್ಕಿ, ಈಶ್ವರಪ್ಪ, ರವಿ ಸೇರಿದಂತೆ ಮೊದಲಾದವರಿದ್ದರು.