ಅಕ್ರಮ ಗಾಂಜಾ ಮಾರಾಟ: ನಾಲ್ವರ ಬಂಧನ
ಚಿಕ್ಕಮಗಳೂರು, ಸೆ.8: ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಚಿಕ್ಕಮಗಳೂರಿನ ಡಿಸಿಐಬಿ ಪೊಲೀಸರು ಬಾಳೆಹೊನ್ನೂರಿನ ಕಡ್ಲೆಮಕ್ಕಿ ಎಂಬಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಅಬ್ದುಲ್ ಮನೀರ್, ಬಾಳೆಹೊನ್ನೂರಿನ ಲಿಯಾಕತ್, ಜಾನ್ಸನ್, ಇಮ್ರಾನ್ ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿ ಅಬ್ದುಲ್ ಮುನೀರ್ ದ್ವಿಚಕ್ರ ವಾಹನದಲ್ಲಿ ಬಂದು ಅಕ್ರಮ ಗಾಂಜ ತಂದು ಇತರೆ ಆರೋಪಿಗಳಿಗೆ ಕೊಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಬಂಧಿತರಿಂದ 16 ಸಾವಿರ ರೂ. ಮೌಲ್ಯದ 700 ಗ್ರಾಂ ಗಾಂಜಾ ಎಲೆ, 1800 ಸಾವಿರ ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನವನ್ನು ಡಿಸಿಐಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಬಾಳೆಹೊನ್ನೂರು, ಕೊಪ್ಪ, ಎನ್.ಆರ್.ಪುರ ಭಾಗಕ್ಕೆ ಗಾಂಜಾ ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಅದರಂತೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ 3/4 ಮಂದಿ ಆರೋಪಿಗಳು ದಾಳಿ ವೇಳೆ ಪರಾರಿಯಾಗಿದ್ದಾರೆ.
ಈ ಬಗ್ಗೆ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರಾರಿಯಾಗಿರುವ ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.