×
Ad

ವಿಚಾರವಾದಿಗಳ ಹತ್ಯೆ ಖಂಡನಾರ್ಹ: ಸಲ್ಮಾನ್ ಖುರ್ಷಿದ್

Update: 2017-09-08 20:24 IST

ಧಾರವಾಡ, ಸೆ.8: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನು ತೀವ್ರವಾಗಿ ಖಂಡಿಸಿರುವ ಕೇಂದ್ರದ ಮಾಜಿ ಸಚಿವ ಸಲ್ಮಾನ್ ಖುರ್ಷಿದ್, ದೇಶದಲ್ಲಿ ಸೃಷ್ಟಿಯಾಗಿರುವ ಕೆಟ್ಟ ಪರಿಸ್ಥಿತಿಯ ವಿರುದ್ಧ ಇಡೀ ದೇಶ ಒಂದಾಗಿ ಹೋರಾಡಬೇಕಿದೆ ಎಂದಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬರ ಬಳಿಕ ಮತ್ತೊಬ್ಬ ವಿಚಾರವಾದಿಗಳ ಹತ್ಯೆ ಆಗುತ್ತಿದೆ. ದೇಶದಲ್ಲಿ ಒಂದು ರೀತಿಯ ಕೆಟ್ಟ ಪರಿಸ್ಥಿತಿ ಸೃಷ್ಟಿಯಾಗಿದೆ. ಇದರ ವಿರುದ್ಧ ಇಡೀ ದೇಶ ಒಂದಾಗಿ ಹೋರಾಡಬೇಕು ಎಂದರು.

ಗೌರಿ ಲಂಕೇಶ್ ಹತ್ಯೆ ಕುರಿತು ಪ್ರಧಾನಿ ನರೇಂದ್ರಮೋದಿ ಮೌನವಹಿಸಿದ್ದಾರೆ. ಅವರ ವೌನದ ಬಗ್ಗೆ ನಾನು ವೌನವಾಗಿರಲು ಬಯಸುತ್ತೇನೆ. ಒಬ್ಬರಿಗೊಬ್ಬರು ಬೆರಳು ಮಾಡಿ ಮಾತನಾಡುವುದು ನಿಲ್ಲಬೇಕಿದೆ ಎಂದು ಸಲ್ಮಾನ್ ಖುರ್ಷಿದ್ ಹೇಳಿದರು.

ಹತ್ಯೆ ನಡೆದ ಮೇಲೆ ಅದನ್ನು ಮಾನವೀಯ ದೃಷ್ಟಿಯಿಂದ ನೋಡಬೇಕು. ಪರ ವಿರೋಧ, ಆರೋಪ ಪ್ರತ್ಯಾರೋಪಗಳನ್ನು ಮಾಡುವುದು ತಪ್ಪು. ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದಂತೆ ನೀಡಿದ ಹೇಳಿಕೆಯಲ್ಲಿ ದುಃಖ ಅಡಗಿದೆ. ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಬಾರದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News