ನಕಲಿ ಪ್ರಮಾಣ ಪತ್ರ ನೀಡಿ ಮಾಸಾಶನ ಪಡೆದರೆ ಕಠಿಣ ಕ್ರಮ: ಜಿಲ್ಲಾಧಿಕಾರಿ ಡಿ.ಎಸ್.ರಮೇಶ್
ದಾವಣಗೆರೆ, ಸೆ.8: ವಿಕಲಚೇತನ ಎಂದು ನಕಲಿ ಪ್ರಮಾಣ ಪತ್ರ ನೀಡಿ ಮಾಸಾಶನ ಪಡೆಯುತ್ತಿರುವವರ ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಅವರು ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ವಿಕಲ ಚೇತನರ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾಧಿಕಾರಿಗಳು ಅಂತಹ ಯಾವುದೇ ಮಾಹಿತಿ ಇದ್ದರೆ ನೀಡಿ ತಕ್ಷಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ವಿಕಲಚೇತನರ ಕೋಟಾದಡಿ ಅನರ್ಹರು ಹೆಚ್ಚು ಸೌಲಭ್ಯಗಳನ್ನು ಪಡೆಯುತ್ತಿದ್ದು, ಶೇ 40 ರಷ್ಟು ಅಂಗವೈಕಲ್ಯ ಹೊಂದಿರುವವರಿಗೆ ವೈದ್ಯರು ಹಣ ಪಡೆದು ಶೇ. 80 ರಷ್ಟು ಅಂಗವೈಕಲ್ಯ ಇದೆಯೆಂದು ಪ್ರಮಾಣ ಪತ್ರ ನೀಡುತ್ತಿದ್ದಾರೆ. ಈ ಬಗ್ಗೆ ಗಮನ ಹರಿಸಬೇಕೆಂದು ವಿಕಲ ಚೇತನರು ಜಿಲ್ಲಾಧಿಕಾರಿಗಳಿಗೆ
ಆಗ್ರಹಿಸಿದರು.
ಕೆಲವು ಎಟಿಎಂಗಳು ಎತ್ತರದ ಸ್ಥಳಗಳಲ್ಲಿದ್ದು, ಅಲ್ಲಿಗೆ ಹತ್ತಲು ವಿಕಲಚೇತನರು ಬಹಳ ಕಷ್ಟ ಪಡಬೇಕಾಗುತ್ತದೆ. ಹಾಗಾಗಿ ಅಂತಹ ಕಡೆ ರ್ಯಾಂಪ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಅಂತಹ ಕೆಲವು ಎಟಿಎಂ ಗುರುತಿಸಿ ಅಗತ್ಯ ವ್ಯವಸ್ಥೆ ಮಾಡಲಾಗುವುದು ಎಂದರು.
ವಿಕಲ ಚೇತನರಿಗೆ ನೀಡುವ ಆಧಾರ ಸಾಲ 35 ಸಾವಿರ ರೂ. ಇದ್ದು ಇದನ್ನು ಮರುಪಾವತಿ ಮಾಡಬೇಕು. ಆದರೆ ತ್ರಿಚಕ್ರ ವಾಹನಕ್ಕೆ 65 ಸಾವಿರ ಸಾಲ ನೀಡಲಾಗುತ್ತಿದೆ. ಆ ಸಾಲವನ್ನು ವಾಪಸ್ ಕಟ್ಟುವಂತಿಲ್ಲ ಇದೆಂತಹ ನ್ಯಾಯ? ಹಾಗಾಗಿ ಬದುಕು ಕಟ್ಟಿಕೊಳ್ಳುವ ಆಧಾರ ಯೋಜನೆಯ ಸಾಲದ ಮೊತ್ತವನ್ನು ಹೆಚ್ಚು ಮಾಡಿ ಎಂದು ಒಕ್ಕೊರಲನಿಂದ ಮನವಿ ಮಾಡಿದರು.
ವಿಕಲಚೇತನರ ಕಲ್ಯಾಣಾಧಿಕಾರಿ ಸದಾಶಿವ ಮಾತನಾಡಿದ, ವಾಹನ ನೀಡುವುದು ಸ್ವಂತ ಉದ್ಯೋಗ ಮಾಡುವವರಿಗೆ ಅವರು ಮಾಡುವ ಉದ್ಯೋಗಕ್ಕೆ ಪೂರಕವಾಗಿರಲಿ ಎಂದು ಹಾಗೂ ಆಧಾರ ಯೋಜನೆಯಡಿ ಸಾಲ ಪಡೆದಿರುವವರಾರು ಸಾಲ ಮರು ಪಾವತಿ ಮಾಡಿಲ್ಲ. ಹಳೇ ಸಾಲಗಳು ಮನ್ನಾ ಆಗಿವೆ ಎಂದರು. ಕೆ.ಎಸ್.ಆರ್.ಟಿ.ಸಿ ಬಸ್‍ಸ್ಟ್ಯಾಂಡ್‍ನಲ್ಲಿ ವ್ಹೀಲ್‍ಚೇರ್, ಪ್ರತ್ಯೇಕ ಶೌಚಾಲಯ ಹಾಗೂ ವಿಶ್ರಾಂತಿ ಕೊಠಡಿಗಳ ಸೌಲಭ್ಯವನ್ನು ಕಲ್ಪಿಸಿಕೊಡುವಂತೆ ಕೇಳಿದರು. ಬಸ್‍ಸ್ಟ್ಯಾಂಡ್ ಹಾಗೂ ರೈಲ್ವೆ ಸ್ಟೇಷನಗಳ ವಾಹನ ನಿಲ್ದಾಣಗಳ ಗುತ್ತಿಗೆಯನ್ನು ವಿಕಲಚೇತನರಿಗೆ ಅವಕಾಶ ಕಲ್ಪಿಸಿಕೊಟ್ಟು ಸಹಾಯ ಮಾಡಬೇಕು ಎಂದರು.
ಸ್ವಾವಲಂಬನೆ ಆರೋಗ್ಯ ವಿಮೆ ಯೋಜನೆಯಡಿ ಫಲಾನುಭವಿಯ ವಂತಿಗೆ ಪಾವತಿಸಿ ಬಹಳ ದಿನ ಕಳೆದರೂ ಕಾರ್ಡ್ ಬಂದಿಲ್ಲ ಎಂಬ ದೂರಿಗೆ ವಿಕಲಚೇತನಾಧಿಕಾರಿ ಶಶಿಧರ ಮಾತನಾಡಿ, ಈ ಯೋಜನೆಯಲ್ಲಿ ಆಸ್ಪತ್ರೆಗಳಲ್ಲಿ 2 ಲಕ್ಷರೂ ವರೆಗೆ ಆರೋಗ್ಯ ವಿಮೆ ಇದ್ದು, ಕೇಂದ್ರ ಸರ್ಕಾರ ಶೇ. 90 ಹಾಗೂ ಫಲಾನುಭವಿಗಳು ಶೇ. 10 ರಷ್ಟು ವಂತಿಗೆ ಪಾವತಿಸಬೇಕಾಗುತ್ತದೆ. ಆದರೆ ಕೇಂದ್ರ ಸರ್ಕಾರ ತನ್ನ ಪಾಲಿನ ವಂತಿಗೆ ಪಾವತಿಸದೇ ಇರುವುದರಿಂದ ಈ ಕಾರ್ಡ್ ನೀಡಲು ವಿಳಂಬವಾಗುತ್ತಿದೆ ಎಂದರು.
ಮುದ್ರಾ ಯೋಜನೆಯಡಿ ಬ್ಯಾಂಕ್‍ಗಳಲ್ಲಿ ಸಾಲ ಕೇಳಿದರೆ ಕೇವಲ ಕೃಷಿಗೆ ಮಾತ್ರ ಸಾಲ ನೀಡುತ್ತಿದ್ದೇವೆ ಎನ್ನುತ್ತಾರೆ. ಹಾಗಾಗಿ ಬ್ಯಾಂಕುಗಳಲ್ಲಿ ಸ್ವ ಉದ್ಯೋಗಕ್ಕೆ ಸಾಲ ನೀಡಲು ಆದೇಶ ಮಾಡಬೇಕೆಂದರು. ಹಾಗೂ ವಿಕಲಚೇತನರಿಗೆ ಯಾವುದೇ ಷರತ್ತು ವಿಧಿಸದಂತೆ ಜಿಲ್ಲಾಧಿಕಾರಿಗಳು ಲೀಡ್ ಬ್ಯಾಂಕನ ಯರ್ರಿಸ್ವಾಮಿಯವರಿಗೆ ಈ ಕುರಿತು ಗಮನ ಹರಿಸಲು ತಿಳಿಸಿದರು.
ಕೆಲವೊಂದು ಪಂಚಾಯತ್ ಗಳಲ್ಲಿ ಶೇ.3 ರ ವಿಕಲಚೇತನರ ನಿಧಿಯಡಿ ಸೌಲಭ್ಯ ವಿತರಿಸಲಾಗಿದೆ ಎಂದಾಗ ಜಿಲ್ಲಾಧಿಕಾರಿಗಳು ಹಾಗಾಗದಂತೆ ಕ್ರಮವಹಿಸಬೇಕೆಂದು ತಿಳಿಸಿದರು. ವಿಶೇಷ ಚೇತನರು ವಿವಾಹ ಮಾಡಿಕೊಂಡರೆ 50 ಸಾವಿರ ಪ್ರೋತ್ಸಾಹಧನ ಮಾತ್ರವಿದ್ದು, ಪರಿಶಿಷ್ಟ ಜಾತಿ ಪಂಗಡದವರಿಗೆ ನೀಡುವಂತೆ ನಮಗೂ 3 ಲಕ್ಷಗಳ ಪ್ರೋತ್ಸಾಹ ಧನವನ್ನು ನೀಡಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ಸ್ಪೂರ್ತಿ ಸಂಸ್ಥೆಯ ಎಪಿಡಿ ಸಂಸ್ಥೆಯ ಪ್ರತಿನಿಧಿಗಳು, ವಿವೇಕಾನಂದ ಅಂಗವಿಕಲ ಒಕ್ಕೂಟ, ಜಿಲ್ಲಾ ಕಿವುಡರ ಸಂಘ, ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿ ಸದಸ್ಯ ರೂಪಾನಾಯ್ಕ, ಉದ್ಯೋಗಾಧಿಕಾರಿ ರುದ್ರಣ್ಣಗೌಡ, ಸುರೇಶ್, ವಿಕಲಚೇತನರ ಕಲ್ಯಾಣ ಇಲಾಖಾ ಅಧಿಕಾರಿಗಳು ವಿವಿಧ ಎನ್ ಜಿಒ ಮುಖ್ಯಸ್ಥರು ಹಾಜರಿದ್ದರು.