ಕೊಳೆಗೇರಿಗಳ ಮನೆಗಳಿಗೆ ತೆರಳಿ ಮನವೊಲಿಸಿ ಸಾಕ್ಷರರನ್ನಾಗಿಸಿ: ಅನಿತಾಬಾಯಿ
ದಾವಣಗೆರೆ, ಸೆ.8: ಮಹಿಳೆಯರು ಸೇರಿದಂತೆ ಎಲ್ಲರಿಗೂ ಸಾಕ್ಷರತೆ ಅತ್ಯಗತ್ಯವಾಗಿದ್ದು, ನಗರದ ಹಿಂದುಳಿದ ಕಾಲನಿಗಳು, ಕೊಳೆಗೇರಿಗಳ ಮನೆ ಮನೆಗೆ ತೆರಳಿ ಅವರ ಮನವೊಲಿಸಿ ಸಾಕ್ಷರರನ್ನಾಗಿ ಮಾಡಬೇಕೆಂದು ಮೇಯರ್ ಅನಿತಾಬಾಯಿ ಮಾಲತೇಶ್ ಸಲಹೆ ನೀಡಿದರು.
ಶುಕ್ರವಾರ ನಗರದ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸಾಕ್ಷರತಾ ಸಮಿತಿ ಹಾಗೂ ಜನ ಶಿಕ್ಷಣ ಸಂಸ್ಥಾನ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ 51 ನೇ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ, ಸಾಕ್ಷರಾ ಸಪ್ತಾಹ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಪಿ ವಾಗೀಶ್ ಮಾತನಾಡಿ, ಜಿಲ್ಲೆಯಲ್ಲಿ ಶೇ. 76.3 ಸಾಕ್ಷರತೆ ಪ್ರಮಾಣ ಇದೆ ಎಂಬ ಅಂಕಿ ಅಂಶಗಳು ಅಷ್ಟು ಸಹಜವಾಗಿಲ್ಲ ಎಂದೆನಿಸುತ್ತದೆ. ಏಕೆಂದರೆ ಕೇವಲ ಸಹಿ ಮಾಡಲಿಕ್ಕೆ ಬರುವವರನ್ನು ಸಾಕ್ಷರರೆಂದು ಸೇರಿಸಿರುವ ಸಾಧ್ಯತೆ ಇದೆ. ಕೇರಳ ರಾಜ್ಯ ಶೇ. 100 ಸಾಕ್ಷರತೆ ಸಾಧಿಸಿರುವುದು ಅಭಿನಂದಾರ್ಹ. ನಮ್ಮ ರಾಜ್ಯವೂ ಶೇ. 100 ಸಾಕ್ಷರತೆ ಹೊಂದುವಲ್ಲಿ ನಾವೆಲ್ಲ ಶ್ರಮಿಸಬೇಕಿದೆ. ಓದು, ಬರಹ ಮಾತ್ರವಲ್ಲ ಜ್ಞಾನವನ್ನೂ ನೀಡುವಂತಾಗಬೇಕು ಎಂದರು.
ಸಾಕ್ಷರರಾಗುವ ಮೂಲಕ ಶೋಷಣೆ, ನ್ಯೂನತೆಗಳನ್ನು ಮೀರಬಹುದಾಗಿದೆ. ಅನಕ್ಷರತೆ ಅನ್ನುವುದೊಂದು ಮಹಾ ಪಾಪವಾಗಿದ್ದು ಅದರಿಂದ ಹೊರಬರಬೇಕಿದೆ. ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು. ತಾಯಿಂದಿರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಅನಕ್ಷರಸ್ಥರನ್ನು ಪ್ರೇರೇಪಿಸಿ ಅಕ್ಷರಸ್ಥರನ್ನಾಗಿಸುವ ಜವಾಬ್ದಾರಿ ನಮ್ಮ ಮೇಲಿದೆ. ಟೀಕೆಗಳಿಲ್ಲದ ಬೆಳವಣಿಗೆ ಇಲ್ಲ. ಯಾವುದೇ ಟೀಕೆಯನ್ನು ಧನಾತ್ಮಕವಾಗಿ, ರಚನಾತ್ಮಕವಾಗಿ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಪತ್ರಕರ್ತೆ ಗೌರಿ ಲಂಕೇಶ್ ಅವರ ನಿಲುವು ತಪ್ಪಾಗಿದ್ದರೆ ಸರಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕೇ ಹೊರತು ಕೊಲೆ ಮಾಡುವಂತಹ ಕೃತ್ಯವೆಸಗಬಾರದು. ಇದು ಘೋರ ಅಪರಾಧ. ವ್ಯಕ್ತಿ ಕೊಲೆ ಮೂಲಕ ವಿಚಾರಧಾರೆ ಕೊಲ್ಲಲು ಸಾಧ್ಯವಿಲ್ಲ. ಮಕ್ಕಳಿಗಾಗಿ ಆಸ್ತಿ ಮಾಡದೇ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಆಸ್ತಿವಂತರನ್ನಾಗಿ ಮಾಡೋಣ. ಸಾಕ್ಷರತೆ ಸಾರಿ ದೇಶದ ಸೇವೆ ಮಾಡೋಣವೆಂದು ಕರೆ ನೀಡಿದರು. ನಂತರ ಸಭಿಕರಿಗೆ ಸಾಕ್ಷರತಾ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಡಯಟ್‍ನ ಪ್ರಾಚಾರ್ಯ ಹೆಚ್ ಕೆ ಲಿಂಗರಾಜು ಮಾತನಾಡಿ, ಸಾಕ್ಷರತೆ ಕುರಿತು ಸ್ವಾತಂತ್ರ್ಯನಂತರ ಪರಿಣಾಮಕಾರಿಯಾಗಿ ಪ್ರಯತ್ನಿಸಲಾಗುತ್ತಿದೆ. ಅನಕ್ಷರಸ್ಥ ದೇಶಗಳು ಜಾಗತಿಕ ಮಟ್ಟದಲ್ಲಿ ಅಪಹಾಸ್ಯಕ್ಕೀಡಾದ ಎಷ್ಟೋ ಪ್ರಸಂಗಗಳಿವೆ. ಹಾಗೆಯೇ ನಮ್ಮ ದೇಶವೂ ಹಿಂದೆ ಅಪಹಾಸ್ಯಗೀಡಾಗಿದ್ದು, ಪ್ರಸ್ತುತ ದೇಶ ಅಭಿವೃದ್ಧಿ ಪಥದೆಡೆ ಸಾಗುತ್ತಿದೆ. ಇದಕ್ಕೆ ಕಾರಣ ನೂರಾರು ವರ್ಷಗಳಿಂದ ಸಾಕ್ಷರತೆಯೆಡೆಗಿನ ಪ್ರಯತ್ನವಾಗಿದೆ. ಸರ್ ಎಂ ವಿಶ್ವೇಶ್ವರಯ್ಯನವರು ಸಾಕ್ಷರತೆಯ ಪ್ರಾಮುಖ್ಯತೆ ಅರಿತು ತಾವು ಮುಖ್ಯ ಅಭಿಯಂತರರಾಗಿದ್ದಾಗ ಅನಕ್ಷರ್ಥ ಕಾರ್ಮಿಕರನ್ನು ಸಾಕ್ಷರರನ್ನಾಗಿಸಲು ವಿದ್ಯಾ ಕೇಂದ್ರಗಳನ್ನು ತೆರೆದಿದ್ದರು. ದೀವಾನರಾದಾಗ 8 ಸಾವಿರ ರಾತ್ರಿ ಕೇಂದ್ರಗಳನ್ನು ಆರಂಭಿಸಿದರು. 30 ವರ್ಷ ಸ್ವತಂತ್ರವಾಗಿ ಸಾಕ್ಷರತೆ ಕ್ಷೇತ್ರದಲ್ಲಿ ಕೆಲಸ ಮಾಡಿದರು ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಗೀತಾ ಗಂಗಾನಾಯ್ಕ್, ಜನ ಶಿಕ್ಷಣ ಸಂಸ್ಥಾನದ ಅಧ್ಯಕ್ಷೆ ಜಯಲಕ್ಷ್ಮಿ, ನಾಗಪ್ಪ, ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಹಾಜರಿದ್ದರು.