ಶಿಕ್ಷಣ ಪಡೆದು ಭವಿಷ್ಯ ರೂಪಿಸಿಕೊಳ್ಳುವ ಜವಾಬ್ದಾರಿ ಯುವ ಜನತೆಯ ಮೇಲಿದೆ: ಶಿವರಾಮ ಹೆಬ್ಬಾರ
ಮುಂಡಗೋಡ, ಸೆ.10: 21ನೆ ಶತಮಾನ ಯುವಕರ ಶತಮಾನವಾಗಿದೆ. ಆಂಗ್ಲ ಭಾಷೆಯನ್ನು ವಿರೋಧಿಸುವ ಬದಲು ಕನ್ನಡದೊಂದಿಗೆ ಆಂಗ್ಲ ವಿಷಯಕ್ಕೂ ಹೆಚ್ಚಿನ ಮಹತ್ವ ನೀಡಬೇಕಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಅವರು ತಾಲೂಕಿನ ಮಳಗಿ ಗ್ರಾಮದ ಸರ್ಕಾರಿ ಪದವಿವಪೂರ್ವ ಕಾಲೇಜಿನ ವಿಜ್ಞಾನ ಪ್ರಯೋಗಾಲಯ ಹಾಗೂ ಅಕ್ಷರದಾಸೋಹ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಆಯಾ ದೇವಸ್ಥಾನಗಳಿಗೆ ಅವರದೇ ಆದ ಜಾತಿ ಧರ್ಮದವರು ಹೋಗುತ್ತಾರೆ. ಆದರೆ ಎಲ್ಲ ಜನಾಂಗದ ದೇಗುಲವೆಂದರೆ ಶಾಲಾ ಕಾಲೇಜಗಳು. ಇಲ್ಲಿ ಎಲ್ಲ ಧರ್ಮದ ವಿದ್ಯಾರ್ಥಿಗಳು ಶೃದ್ಧಾ ಭಕ್ತಿಯಿಂದ ಬರುತ್ತಾರೆ. ಇದರಿಂದ ಎಲ್ಲರೂ ಒಂದೇ ಎನ್ನುವ ಭಾವನೆ ಮೂಡುತ್ತದೆ ಎಂದರು.
ಶಿಕ್ಷಣಕ್ಕೆ ಕ್ಷೇತ್ರಕ್ಕೆ ಸರಕಾರ ಸಾವಿರಾರು ಕೋಟಿ ಖರ್ಚು ಮಾಡುತ್ತಿದೆ. ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ಮತ್ತು ಮೂಲಭೂತ ಸೌಕರ್ಯಕ್ಕಾಗಿ ಸರ್ಕಾರ ಉಚಿತ ಶಿಕ್ಷಣ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿ ಮಾಡಿದೆ. ಗುಣಮಟ್ಟ ಶಿಕ್ಷಣ ಪಡೆದು ಭವಿಷ್ಯ ರೂಪಿಸಿಕೊಳ್ಳುವ ಜವಾಬ್ದಾರಿ ಯುವ ಜನತೆಯ ಮೇಲಿದೆ. ವಿದ್ಯಾರ್ಥಿಗಳು ಸರಕಾರ ಕೊಟ್ಟಂತಹ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಗುರುಗಳಿಗೆ ಗೌರವ ತಂದೆ ತಾಯಿಂದರಿಗೆ ಕೀರ್ತಿ ಹಾಗೂ ಸಮಾಜಕ್ಕೆ ಮಾದರಿಯಾಗಬೇಕು ಎಂದು ಕರೆ ನೀಡಿದರು.
ಮಳಗಿ ಗ್ರಾಪಂ ಅಧ್ಯಕ್ಷೆ ರೇಖಾ ಅಂಡಗಿ ಮತನಾಡಿ, ಚುನಾವಣೆ ಬಂದಾಗ ಮಾತ್ರ ರಾಜಕಾರಣ ಮಾಡಬೇಕು ಚುನಾವಣೆ ಮುಗಿದ ಬಳಿಕ ಪಕ್ಷ ಭೇದ ಮರೆತು ಎಲ್ಲರೂ ಒಗ್ಗೂಡಿ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸಬೇಕು ಎಂದ ಅವರು, ಮಳಗಿ ಗ್ರಾಮದಲ್ಲಿ ಪ್ರಥಮ ದರ್ಜೆ ಕಾಲೇಜು ಮಂಜೂರಿ ಮಾಡಿದರೆ ಉನ್ನತ ಶಿಕ್ಷಣಕ್ಕಾಗಿ ದೂರದ ಮುಂಡಗೋಡ ಹಾಗೂ ಶಿರಸಿಗೆ ಹೋಗುವ ಸುತ್ತಮುತ್ತಲಿನ ಜನರಿಗೆ ಅನುಕೂಲವಾಗಲಿದೆ ಎಂದು ಶಾಸಕರಿಗೆ ಮನವರಿಕೆ ಮಾಡಿಕೊಟ್ಟರು.
ಕಾರ್ಯಕ್ರಮದಲ್ಲಿ ಬ್ಲಾಕ್ ಅಧ್ಯಕ್ಷ ರವಿಗೌಡಾ ಪಾಟೀಲ, ತಾಪಂ ಅಧ್ಯಕ್ಷೆ ದ್ರಾಕ್ಷಾಯಿಣಿ ಸುರಗಿಮಠ, ಕೃಷ್ಣಾ ಹಿರಳ್ಳಿ, ಆರ್.ಜಿ.ನಾಯಕ್, ವಿ.ಎಸ್.ನಾಯಕ, ಪ್ರಮೋದ ಡವಳೆ,ಬಾಬಣ್ಣ ಕೋಣನಕೇರಿ, ವಲಯ ಅರಣ್ಯಾಧಿಕಾರಿ ಮಹೇಶ, ಆರ್.ಎಸ್.ಸಜ್ಜನಶೆಟ್ಟರ, ಸಮಾಜ ಕಲ್ಯಾಣಾಧಿಕಾರಿ ಮಂಜುನಾಥ ಸಾಳುಂಕೆ ಮತ್ತಿತರರು ಉಪಸ್ಥಿತರಿದ್ದರು.