ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಸಾಮಾಜಿಕ ಜಾಲತಾಣಗಳೇ ಪ್ರಮುಖ ಕಾರಣ: ವೈಎಸ್‍ವಿ ದತ್ತ
ಕಡೂರು, ಸೆ.10: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಅತ್ಯಂತ ಅಮಾನವೀಯ, ಮೃಗೀಯ ಹಾಗೂ ಖಂಡನೀಯ, ಹತ್ಯೆಗೆ ಸಾಮಾಜಿಕ ಜಾಲತಾಣಗಳೇ ಪ್ರಮುಖ ಕಾರಣ ಎಂದು ಶಾಸಕ ವೈ.ಎಸ್.ವಿ. ದತ್ತ ವಿಷಾದಿಸಿದರು.
ಅವರು ಪಟ್ಟಣದ ಕನ್ನಡ ಭವನದಲ್ಲಿ ಪ್ರಗತಿಪರ ಚಿಂತಕರು ಹಾಗೂ ಸಮಾನ ಮನಸ್ಕರು ಆಯೋಜಿಸಿದ್ದ ವಿಚಾರವಾದಿ, ಚಿಂತಕಿ ಹಾಗೂ ಪತ್ರಕರ್ತೆ ಗೌರಿಲಂಕೇಶ್ ನುಡಿ-ನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಮಾಜಿಕ ಜಾಲತಾಣಗಳಲ್ಲಿ ವಿಕೃತ ವಿಚಾರಗಳು ಬಹಳ ಬೇಗ ಹರಡುತ್ತವೆ. ಇವುಗಳ ಪರಿಣಾಮ ವ್ಯತಿರಿಕ್ತವಾಗಿರುತ್ತವೆ. ಗೌರಿ ಲಂಕೇಶ್ ಅವರ ಜೀವನದಲ್ಲಿಯೂ ಇದೇ ಸಾಮಾಜಿಕ ಜಾಲತಾಣಗಳಿಂದ ನೂರಾರು ನೋವುಗಳು ಉಂಟಾಗಿವೆ ಎಂದು ಹೇಳಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ಇಂತಹ ಸಾಮಾಜಿಕ ಜಾಲತಾಣಗಳಿಗೆ ಲಗಾಮು ಹಾಕುವ ಮೂಲಕ ಮುಂದಿನ ದಿನಗಳಲ್ಲಿ ಸಮಾಜದ ಸ್ವಾಸ್ಥ್ಯ ಕಾಪಾಡಬೇಕಾದ ಜವಾಬ್ದಾರಿ ಇದೆ. ಭವಿಷ್ಯದಲ್ಲಿ ಇನ್ನಷ್ಟು ಅಪಾಯಕಾರಿ ಬೆಳವಣಿಗೆಗಳು ಘಟಿಸದಂತೆ ಎಚ್ಚರಿಕೆಯ ಗಂಟೆಯೂ ಗೌರಿ ಲಂಕೇಶ್ ಹತ್ಯೆ ಪ್ರಕರಣ. ಗೌರಿಲಂಕೇಶ್ ಚಿಕ್ಕಮಗಳೂರನ್ನು ತನ್ನ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ಸಮಾಜದ ಮುಖ್ಯವಾಹಿನಿಗೆ ನಕ್ಸಲರನ್ನು ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಸಾವು ತುಂಬಲಾರದ ನಷ್ಟ ಎಂದು ತಿಳಿಸಿದರು.
ವಿಚಾರವಾದಿ ಹಾಗೂ ಚಿಂತಕ ಡಾ. ಎಂ.ಎಂ. ಕಲಬುರ್ಗಿ ಹತ್ಯೆಯ ನಂತರ ಸಮಾಜದ ಸಮತೋಲನ ತಪ್ಪುತ್ತಿದೆ. ಜಾತ್ಯತೀತ ಶಕ್ತಿ ಹಾಗೂ ಸಾಮಾಜಿಕ ವ್ಯಕ್ತಿಗಳಿಗೆ ದೊಡ್ಡ ಅಪಾಯ ಕಾಡುತ್ತಿದೆ. ಅಸಹಿಷ್ಣುತೆ ಕಾಡುತ್ತಿದೆ. ಗೌರಿ ಲಂಕೇಶ್ ಹತ್ಯೆಯ ಮೂಲಕ ವಿಚಾರ ಮತ್ತು ಸಿದ್ದಾಂತದ ಹತ್ಯೆಯಾಗಿದೆ. ಜನತಂತ್ರದಲ್ಲಿ ಅಭಿವ್ಯಕ್ತಿಯ ಸ್ವಾತಂತ್ರ್ಯ ಬಹಳ ಮುಖ್ಯ ಆದರೆ ಆ ವ್ಯವಸ್ಥೆ ಈಗ ಏಕಪಕ್ಷೀಯವಾಗಿ ವಾಲುತ್ತಿದೆ. ತಮ್ಮ ಬಗ್ಗೆ ವಿರುದ್ದ ವಿಚಾರ ಪತ್ರಿಕೆಗಳಲ್ಲಿ ಬಂದರೆ ಅದನ್ನು ಆರೋಗ್ಯಕರವಾಗಿ ಸ್ವೀಕರಿಸುವ ಮನೋಭಾವ ದೂರವಾಗುತ್ತಿದೆ ಎಂದರು.
ಈ ವೇಳೆ ಪ್ರಾಸ್ತಾವಿಕವಾಗಿ ಕಸಾಪ ಅಧ್ಯಕ್ಷ ವೈ.ಎಸ್. ರವಿಪ್ರಕಾಶ್ ಮಾತನಾಡಿದರು. ಬಿ.ಟಿ. ಗಂಗಾಧರನಾಯ್ಕ, ಎಂ. ರಾಜಪ್ಪ, ಭಂಡಾರಿಶ್ರೀನಿವಾಸ್, ಸೂರಿಶ್ರೀನಿವಾಸ್, ಎ.ಜೆ. ಪ್ರಕಾಶ್‍ಮೂರ್ತಿ, ಹುಲ್ಲೇಹಳ್ಳಿ ರಂಗನಾಥ್, ಹೆಚ್.ಎಸ್. ಪರಮೇಶ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೆ.ಎಂ.ಪುಟ್ಟಪ್ಪ, ಮಚ್ಚೇರಿ ಮಹೇಶ್, ಸಿ.ಹೆಚ್.ಮೂರ್ತಿ, ಕೃಷ್ಣ, ಬಿಳಿಗಿರಿ ವಿಜಯಕುಮಾರ್, ಸೀಗೇಹಡ್ಲು ಹರೀಶ್, ಮಣಿ ಉಪಸ್ಥಿತರಿದ್ದರು.