ಹುಟ್ಟಿದ ಭಾವನೆಗೆ ಅಕ್ಷರ ನೀಡುವುದೇ ಕವಿತೆ: ಪ್ರಸನ್ನ ಗೌಡಹಳ್ಳಿ
ಮೂಡಿಗೆರೆ, ಸೆ.10: ಹುಟ್ಟಿದ ಭಾವನೆಗೆ ಅಕ್ಷರ ನೀಡುವುದೇ ಕವಿತೆಯಾಗಿದ್ದು, ಅದನ್ನು ಸೂಕ್ತವಾದ ಪದಗಳನ್ನು ಬಳಸಿ ಅಲಂಕಾರ, ವರ್ಣನೆ, ಛಂದಸ್ಸು, ಭಾಷಾ ವೈವಿದ್ಯತೆಯಿಂದ ಸಮನ್ವಯಗೊಳಿಸಿದರೇ ಉತ್ತಮ ಕವಿತೆ ರೂಪುಗೊಳ್ಳುತ್ತದೆ ಎಂದು ಮೂಡಿಗೆರೆ ಜೇಸಿಐ ನಿಕಟಪೂರ್ವ ಅಧ್ಯಕ್ಷ ಪ್ರಸನ್ನ ಗೌಡಹಳ್ಳಿ ಹೇಳಿದರು.
ಅವರು ಮೂಡಿಗೆರೆ ಪಟ್ಟಣದಲ್ಲಿ ಜೇಸಿಐ ವತಿಯಿಂದ ನಡೆದ ಸ್ವರಚಿತ ಕವನವಾಚನ ಸ್ಪರ್ದೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕವಿತೆಯೂ ಸ್ವವಿಮರ್ಶೆಯ ಜೊತೆಗೆ ಸಮಾಜದ ಬದಲಾವಣೆಗೆ ಸ್ಪಂದಿಸುವ ಪರಿಣಾಮಕಾರಿ ಅಸ್ತ್ರವಾಗಿದ್ದು ಕವಿತೆಯೂ ಆತ್ಮವಿಮರ್ಶೆಯ ಮಾರ್ಗವಾಗಲಿ. ಕವಿತೆ ಬರೆಯುವ ಹವ್ಯಾಸ ಒತ್ತಡದ ಬದುಕಿನಲ್ಲಿ ಆತ್ಮಸೈರ್ಯ ಮತ್ತು ಜೀವನೋತ್ಸಾಹ ಮೂಡಿಸುತ್ತದೆ. ವ್ಯಕ್ತಿತ್ವ ವಿಕಸನದಲ್ಲಿ ಸಾಹಿತ್ಯವೂ ಪರಿಣಾಮಕಾರಿ ಪಾತ್ರವನ್ನು ವಹಿಸುತ್ತದೆ ಎಂದು ತಿಳಿಸಿದರು.
ಕವನವಾಚನ ಸ್ಪರ್ಧೆಯ ತೀರ್ಪುಗಾರ ನಂದೀಶ್ ಬಂಕೇನಹಳ್ಳಿ ಮಾತನಾಡಿ, ಧಾವಂತದ ಬದುಕಿನಲ್ಲಿ ಕವಿತೆ ಬರೆಯುವ ಹವ್ಯಾಸ ಕಡಿಮೆಯಾಗುತ್ತಿದೆ. ತಯಾರಿಸುವುದು ಮತ್ತು ಹುಟ್ಟುವುದಕ್ಕೆ ವ್ಯತ್ಯಾಸವಿದೆ. ಹುಟ್ಟು ಎಂದಾಗ ಅಲ್ಲಿ ಜೀವ, ಭಾವನೆ ಮತ್ತು ಸ್ಪಂದನೆ ಇರುತ್ತದೆ. ಕವಿತೆಗಳಲ್ಲಿ ಜೀವಸ್ಪಂದನೆ ಇದ್ದಾಗ ಮಾತ್ರ ಓದುಗರನ್ನು ತಲುಪುತ್ತದೆ ಎಂದರು.
ಕವನವಾಚನ ಸ್ಪರ್ಧೆಯ ಮತ್ತೋರ್ವ ತೀರ್ಪುಗಾರ ಸಂಪತ್ ಬೆಟ್ಟಗೆರೆ ಮಾತನಾಡಿ, ಕವಿತೆ ಹುಟ್ಟಲು ನಿರ್ದಿಷ್ಟ ಸಮಯ ಎಂದಿರುವುದಿಲ್ಲ. ಯಾವಾಗ ಬೇಕಾದರೂ ಕವಿತೆ ಹುಟ್ಟಬಹುದು. ಅದೊಂದು ಸಹಜ ಪ್ರಕ್ರಿಯೆಯಾಗಿದೆ. ಮೂಡಿಗೆರೆ ತಾಲೂಕಿನಲ್ಲಿ ಉದಯೋನ್ಮುಖ ಕವಿಗಳಿದ್ದು, ಇಂತಹ ವೇದಿಕೆಗಳ ಮೂಲಕ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ನುಡಿದರು.
ತಾಲೂಕಿನ ವಿವಿದಡೆಯಿಂದ ಬಂದಿದ್ದ 20ಕ್ಕೂ ಹೆಚ್ಚು ಕವಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸಿದರು. ಪರಿಸರ, ಪ್ರೇಮಕವಿತೆ ಮತ್ತು ಪ್ರಚಲಿತ ವಿದ್ಯಾಮಾನಗಳಿಗೆ ಸಂಬಂದಿಸಿದ ಕವಿತೆಗಳು ಗಮನಸೆಳೆದವು. ಗೌರಿಲಂಕೇಶ್ ಹತ್ಯೆಯ ಕುರಿತ ಕವಿತೆಗಳು ಗೋಷ್ಟಿಯಲ್ಲಿ ಬಂದುಹೋದವು.
ಕವಿಗಳಾದ ಅಲ್ತಾಫ್ ಬಿಳುಗುಳ, ಮಲ್ಲಿಕಾ ಮತ್ತಿಕಟ್ಟೆ, ಎಂ.ಎಸ್.ನಾಗರಾಜ್, ಸುನೀಲ್, ಅಬ್ದುಲ್ ನಾಜೀಮ್, ಹಾ.ಬಾ.ನಾಗೇಶ್, ಹೇಮಲತಾನಾಗೇಶ್, ರಾಜಪ್ಪ, ಮಹಾಂತೇಶ್‍ಕುಮಾರ್, ಸುಂದರೇಶ್, ಪ್ರಕಾಶ್, ವಿಶ್ವ ಹಾರ್ಲಗದ್ದೆ, ಭಾನುಮತಿ, ಶ್ರೇಷ್ಠಿ, ಧನಿಕ್, ಸುಂದರೇಶ್ ಕವನ ವಾಚಿಸಿದರು. ಸ್ವರಚಿತ ಕವನವಾಚನ ಸ್ಪರ್ದೆಯಲ್ಲಿ ಮಲ್ಲಿಕಾ ಮತ್ತಿಕಟ್ಟೆ ಪ್ರಥಮ, ಅಬ್ದುಲ್ ನಾಜೀಮ್ ದ್ವಿತೀಯ ಮತ್ತು ಹೇಮಲತಾನಾಗೇಶ್ ತೃತೀಯ ಬಹುಮಾನ ಪಡೆದರು.
ಜೇಸಿಐ ಅಧ್ಯಕ್ಷ ನಯನ ಕಣಚೂರು, ಕಾರ್ಯದರ್ಶಿ ಶಶಿಕಿರಣ್, ಸಪ್ತಾಹದ ನಿರ್ದೇಶಕ ಯೋಗೇಶ್, ಅಣ್ಣಾನಾಯಕ್, ಮಣಿಕಂಠ ಬಿಳ್ಳೂರು ಮತ್ತಿತರರಿದ್ದರು.