ನೇತ್ರ ಶಿಬಿರಗಳು ಹೆಚ್ಚು ಆಯೋಜಿಸುವುದರಿಂದ ಅಂಧತ್ವ ನಿವಾರಣೆಯಾಗುತ್ತದೆ: ಕಾಗೋಡು ತಿಮ್ಮಪ್ಪ
ಸಾಗರ, ಸೆ.10: ನೇತ್ರ ತಪಾಸಣೆಯಂತಹ ಶಿಬಿರಗಳು ಹೆಚ್ಚು ಆಯೋಜಿಸುವುದರಿಂದ ಅಂಧತ್ವ ನಿವಾರಣೆಯಾಗುತ್ತದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.
ಇಲ್ಲಿನ ಉಪವಿಭಾಗೀಯ ಆಸ್ಪತ್ರೆಯಲ್ಲಿ ಭಾನುವಾರ ಕಾಗೋಡು ತಿಮ್ಮಪ್ಪ ಅಭಿಮಾನಿ ಸಮಾಜ ಸೇವಾ ಬಳಗ, ಪ್ರೇಮಕುಮಾರ್ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆ ಹಾಗೂ ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 16ನೆ ವರ್ಷದ ಉಚಿತ ಕಣ್ಣಿನ ತಪಾಸಣೆ, ಹೊಲಿಗೆರಹಿತ ಕಣ್ಣಿನ ಶಸ್ತ್ರಚಿಕಿತ್ಸೆ, ಮಸೂರ ಅಳವಡಿಕೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಚಿಕಿತ್ಸೆಗೊಳಗಾದ ರೋಗಿಗಳಿಗೆ ಹಣ್ಣುಹಂಪಲು ವಿತರಣೆ ಮಾಡಿ ಮಾತನಾಡುತ್ತಿದ್ದರು.
ಒತ್ತಡದಲ್ಲಿ ಕೆಲಸ ಮಾಡುತ್ತಿರುವ ಮನುಷ್ಯನಿಗೆ ತನ್ನ ಆರೋಗ್ಯ ರಕ್ಷಣೆಯ ಕಾಳಜಿಯು ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲಿಯೂ ಮನುಷ್ಯ ನೆಮ್ಮದಿಯಿಂದ ಬದುಕ ಬೇಕಾದರೆ ಕಣ್ಣು ಮುಖ್ಯವಾದ ಅವಯವ. ಇದನ್ನು ಸಂರಕ್ಷಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ನನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ ಇಂತಹ ಶಿಬಿರವನ್ನು ಆಯೋಜಿಸಿ ಬಡವರಿಗೆ ಉಚಿತವಾಗಿ ನೇತ್ರ ಚಿಕಿತ್ಸೆಯನ್ನು ನೀಡಿರುವುದು ನಿಜಕ್ಕೂ ಸಂತೋಷದ ಸಂಗತಿ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕೆಪಿಸಿಸಿ ಕಾರ್ಯದರ್ಶಿ ಡಾ. ರಾಜನಂದಿನಿ ಕಾಗೋಡು, ಕಳೆದ 16 ವರ್ಷಗಳಿಂದ ಸಂಸ್ಥೆಯು ಕಾಗೋಡು ತಿಮ್ಮಪ್ಪ ಅವರ ಹುಟ್ಟುಹಬ್ಬದ ಸವಿನೆನಪಿಗಾಗಿ ನೇತ್ರ ತಪಾಸಣೆ, ಶಸ್ತ್ರ ಚಿಕಿತ್ಸೆ ಶಿಬಿರ ನಡೆಸಿಕೊಂಡು ಬರುತ್ತಿರುವುದು ಸ್ಮರಣೀಯ ಸಂಗತಿ. ಹಿರಿಯ ರಾಜಕಾರಣಿಯೊಬ್ಬರ ಹುಟ್ಟುಹಬ್ಬವನ್ನು ಇಂತಹ ಸೇವಾ ಕಾರ್ಯಗಳ ಮೂಲಕ ನಡೆಸಿದರೆ ಅದು ಹೆಚ್ಚು ಅರ್ಥಪೂರ್ಣವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಭಿಮಾನಿ ಬಳಗದ ಸಂಚಾಲಕ ಮೈಕಲ್ ಜೆ. ಡಿಸೋಜ, ಕಳೆದ 16 ವರ್ಷಗಳಿಂದ ಸಾವಿರಾರು ಜನರಿಗೆ ನೇತ್ರದಾನದಂತಹ ಪುಣ್ಯ ಕೆಲಸವನ್ನು ಮಾಡಿದ ತೃಪ್ತಿ ಸಂಸ್ಥೆಗೆ ಇದೆ. ಈ ಬಾರಿ 300ಕ್ಕೂ ಹೆಚ್ಚು ಜನರು ನೇತ್ರ ತಪಾಸಣೆಗೆ ಒಳಪಟ್ಟಿದ್ದು, ಅವರಲ್ಲಿ 81 ಜನರು ನೇತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಬೀಬಿ ಫಸಿಹಾ, ಉಪಾಧ್ಯಕ್ಷೆ ಸರಸ್ವತಿ ಕುಮಾರಸ್ವಾಮಿ, ಜನಪದ ಅಕಾಡಮಿ ಅಧ್ಯಕ್ಷ ಬಿ.ಟಾಕಪ್ಪ, ಎಪಿಎಂಸಿ ಅಧ್ಯಕ್ಷ ಕೆ.ಹೊಳಿಯಪ್ಪ, ಪ್ರಮುಖರಾದ ಎಲ್.ಟಿ.ತಿಮ್ಮಪ್ಪ, ಮಕ್ಬೂಲ್ ಅಹ್ಮದ್, ಲಲಿತಮ್ಮ, ಅನ್ವರ್ ಭಾಷಾ, ಅನಿತಾಕುಮಾರಿ, ಅಬ್ದುಲ್ ಹಮೀದ್, ಡಾ. ಪ್ರಕಾಶ್ ಬೋಸ್ಲೆ, ಡಾ. ಕೆ.ಪಿ.ಅಚ್ಚುತ್ ಇನ್ನಿತರರು ಹಾಜರಿದ್ದರು.