ದಕ್ಷಿಣ ಭಾರತದಲ್ಲಿ ಮಠಗಳು ಕರ್ಮಯೋಗದಲ್ಲಿ ತೊಡಗಿವೆ: ವಾಜುಬಾಯಿ ವಾಲಾ
ತುಮಕೂರು, ಸೆ.10: ದಕ್ಷಿಣ ಭಾರತದಲ್ಲಿ ಧರ್ಮ ಗುರುಗಳು ಕೇವಲ, ಪೂಜೆ, ಪುನಸ್ಕಾರ, ಬೋಧನೆಗೆ ತಮ್ಮನ್ನು ಸಿಮೀತ ಗೊಳಿಸದೆ, ಜನಸಾಮಾನ್ಯರಿಗೆ ಶಿಕ್ಷಣ, ಆರೋಗ್ಯದಂತಹ ಸೇವೆಗಳನ್ನು ಒದಗಿಸುತ್ತಿರುವುದು ಕಾಯಕವೇ ಕೈಲಾಸವೆಂಬ ಬಸವಣ್ಣನವರ ನುಡಿಗೆ ಪೂರಕವಾಗಿದೆ ಎಂದು ರಾಜ್ಯಪಾಲ ವಾಜುಬಾಯಿ ವಾಲಾ ಬಣ್ಣಿಸಿದ್ದಾರೆ.
ನಗರದ ಬಸವೇಶ್ವರ ಶಾಲಾ ಮೈದಾನದಲ್ಲಿ ಶ್ರೀಸಿದ್ದಗಂಗಾ ಶಿಕ್ಷಣ ಸಂಸ್ಥೆ ವತಿಯಿಂದ ಸ್ಥಾಪಿಸಿರುವ ಶ್ರೀಸಿದ್ದಗಂಗಾ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಸರಕಾರ ಶಾಲಾ ಕಾಲೇಜು, ಆಸ್ಪತ್ರೆಗಳನ್ನು ತೆರೆದು ಜನಸಾಮಾನ್ಯರಿಗೆ ಶಿಕ್ಷಣ ನೀಡುತ್ತಿದ್ದರೆ, ದಕ್ಷಿಣ ಭಾರತದಲ್ಲಿ ಸರಕಾರದ ಕಾರ್ಯಗಳಿಗೆ ಮಠ ಮಾನ್ಯಗಳು ಕೈಜೋಡಿಸಿ ಧಾರ್ಮಿಕ ಕಾರ್ಯಕ್ರಮಗಳ ಜತಗೆ ಕರ್ಮಯೋಗಿಗಳಾಗಿ ಸೌಲಭ್ಯಗಳು ಹೆಚ್ಚು ಹೆಚ್ಚು ಜನರಿಗೆ ತಲುಪುವಂತೆ ಮಾಡಿರುವುದಲ್ಲದೆ, ಇತರರಿಗೆ ಪ್ರೇರಣೆಯಾಗಿದ್ದಾರೆ ಎಂದರು.
ಇಂದು ಸಮಾಜದಲ್ಲಿ ಹಣವಂತನಿಗೆ, ದೊಡ್ಡ ಜಮೀನ್ದಾರನಿಗೆ ಬೆಲೆ ಇದೆ ಎಂದು ಕೆಲವರು ತಿಳಿದುಕೊಂಡಿದ್ದಾರೆ. ಇದು ತಪ್ಪು ನಮ್ಮ ಸಮಾಜದಲ್ಲಿ ಗೌರವವಿರುವುದು ಗುಣವಂತನಿಗೆ ಮಾತ್ರ. ಗುಣವಂತ ಮತ್ತು ಧೈರ್ಯವಂತನಿಗೆ ಎಂದಿಗೂ ಮಾನ್ಯತೆ ಇರುತ್ತದೆ ಎಂಬುದನ್ನು ಹಲವಾರು ನಿದರ್ಶನಗಳು ತೋರಿಸಿಕೊಟ್ಟಿವೆ. ಆದ್ದರಿಂದ ಇನ್ನೊಬ್ಬರ ಸೇವೆಯಲ್ಲಿ ತೊಡಗಿಸಿಕೊಳ್ಳುವ ಗುಣವನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕಿದೆ ಎಂದ ಅವರು, ಅಜ್ಞಾನದಿಂದ ಬಡವರಾಗಿರುವವರಿಗೆ ಜ್ಞಾನ ದೊರೆಯುವಂತೆ ಮಾಡಿ ಅವರು ಬೌದ್ಧಿಕವಾಗಿ ಶ್ರೀಮಂತರಾಗುವಂತೆ ಮಾಡಬೇಕಾಗಿದೆ ಎಂದರು.
ಯುವಜನತೆ ಬಡಜನರ ಸೇವೆಗೆ ತಮ್ಮನ್ನು ತಾವು ತೊಡಗಿಕೊಳ್ಳಬೇಕಾಗಿದೆ. ನನ್ನ ಪ್ರಕಾರ ಯುವಜನರೆಂದರೆ, ವಯಸ್ಸಿನಲ್ಲಿ ಕಿರಿಯರಿದ್ದು, ಕೆಲಸಕ್ಕೆ ಬಾರದ ಆಟೋಟಗಳಲ್ಲಿ ತೊಡಗಿಕೊಂಡವರಲ್ಲ. ಬದಲಾಗಿ ವಯಸ್ಸನ್ನು ಲಕ್ಕಿಸದೆ ಸದಾ ಬಡವರ ಸೇವೆಯ ಬಗ್ಗೆ ಆಲೋಚಿಸುವ, ಸದಾ ಚಟುವಟಿಕೆಯಿಂದ ಇರುವ 110 ವರ್ಷದ ಸ್ವಾಮೀಜಿಯೂ ಯುವಕರೇ. ತಮ್ಮ ಇಳಿ ವಯಸ್ಸಿನಲ್ಲಿಯೂ ಬಡಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಎಲ್ಲಾ ಸೌಲಭ್ಯಗಳನ್ನು ಒಳಗೊಂಡ ಆಸ್ಪತ್ರೆ ತೆರೆದು ಸೇವೆ ನೀಡಲು ಮುಂದಾಗಿರುವುದು ಅವರ ಸೇವಾ ತತ್ಪರತೆಯನ್ನು ಎತ್ತಿ ತೋರಿಸುತ್ತದೆ. ಇದು ಯಾವುದೇ ಸ್ವಾರ್ಥವಿಲ್ಲದ ಸೇವೆ ಎಂದು ನುಡಿದರು.
ಪ್ರಾಮಾಣಿಕತೆ ಮತ್ತು ನಿಷ್ಠೆ ಎಂಬುದು ಇಂದು ಎಲ್ಲೆಡೆ ಅಗತ್ಯವಾಗಿದೆ. ಜೊತೆಗೆ ತಾವುಗಳಿಸಿದ್ದರಲ್ಲಿ ಒಂದಿಷ್ಟನ್ನು ಇನ್ನೊಬ್ಬರ ಎಳಿಗೆಗೆ ಖರ್ಚು ಮಾಡುವಂತಹ ಮನೋಭಾವ ರೂಢಿಸಿಕೊಳ್ಳಬೇಕಾಗಿದೆ.ಉಳ್ಳವರು ಇಲ್ಲದ ಒಂದೊಂದು ಕುಟುಂಬವನ್ನು ದತ್ತು ಪಡೆದು ಆ ಕುಟುಂಬದ ಮಕ್ಕಳ ಓದು, ಆರೋಗ್ಯಕ್ಕೆ ಸಹಾಯ ಮಾಡಿದರೆ ಹೆಚ್ಚಿನ ಅನುಕೂಲ ಮಾಡಿದಂತಾಗುತ್ತದೆ. ಇಂತಹ ಕಾರ್ಯಗಳಲ್ಲಿ ತೊಡಗಿರುವ ಸಂಸ್ಥೆಗಳಿಗೆ ತಮ್ಮ ಶಕ್ತಾನುಸಾರ ಮತ್ತು ಇಚ್ಛಾನುಸಾರ ದಾನ ಮಾಡುವ ಮೂಲಕ ತಮ್ಮ ದುಡಿಮೆಯ ಫಲ ಇತರರ ಒಳ್ಳೆಯದಕ್ಕೆ ಬಳಕೆಯಾಗುವಂತೆ ನೋಡಿಕೊಳ್ಳಬೇಕಾಗಿದೆ ಎಂದು ರಾಜ್ಯಪಾಲ ವಾಜು ಬಾಯಿ ವಾಲಾ ಕರೆ ನೀಡಿದರು.
ಸಿದ್ದಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಸಾವಿರಾರು ಮಕ್ಕಳಿಗೆ ಅನ್ನ, ಅಕ್ಷರ, ಆಶ್ರಯ ನೀಡುತಿದ್ದ ಸಿದ್ದಗಂಗಾ ಕ್ಷೇತ್ರಕ್ಕೆ ಹೊಸದಾಗಿ ಆರೋಗ್ಯ ಸೇವೆಯೂ ಸೇರ್ಪಡೆಗೊಂಡಿರುವುದು ಸಂತೋಷದ ವಿಚಾರವಾಗಿದೆ. ಜನ ಸಾಮಾನ್ಯರ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಸಿದ್ದಗಂಗಾ ಆಸ್ಪತ್ರೆಯ ತನ್ನ ಸೇವೆ ಒದಗಿಸಲಿದೆ ಎಂದು ತಿಳಿಸಿದರು.
ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ಇಡೀ ಜಗತ್ತಿಗೆ ಮಠ ಮಾನ್ಯಗಳ ಕೊಡುಗೆ ಆಪಾರವಾಗಿದೆ. ಇದರಲ್ಲಿ ಸಿದ್ದಗಂಗಾ ಕ್ಷೇತ್ರ ಅಗ್ರಸ್ಥಾನದಲ್ಲಿದೆ. ಇಂದು ಆರಂಭವಾಗಿರುವ ಸಿದ್ದಗಂಗಾ ಆಸ್ಪತ್ರೆಯಲ್ಲಿ ಎಲ್ಲಾ ವರ್ಗದ ಬಡವರಿಗೂ ಗುಣಮಟ್ಟದ ಆರೋಗ್ಯ ದೊರೆಯುವಂತಾಗಬೇಕು ಎಂಬುದು ನಮ್ಮ ಆಶಯ. ಸಿದ್ದಗಂಗಾ ಮಠಕ್ಕೆ ಮೈದಾಳ ಕೆರೆಯಿಂದ 2.50 ಕೋಟಿ ರೂ. ವೆಚ್ಚದಲ್ಲಿ 20 ಎಂಸಿಎಫ್ ಟಿ ನೀರು ಒದಗಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಂಸದ ಜಿ.ಎಸ್.ಬಸವರಾಜು, ಶಾಸಕರಾದ ಡಾ.ರಫೀಕ್ ಅಹಮದ್, ಸುರೇಶಗೌಡ, ಜಿಲ್ಲಾಧಿಕಾರಿ ಕೆ.ಪಿ.ಮೋಹನ್‍ರಾಜ್, ಸಿಇಒ ಕೆ.ಜಿ.ಶಾಂತರಾಮ್, ಎಸ್ಪಿ ಡಾ.ದಿವ್ಯಾ ಗೋಪಿನಾಥ್ ಮತ್ತಿತರರು ಉಪಸ್ಥಿತರಿದ್ದರು.