×
Ad

ಹೈಕೋರ್ಟ್ ನೀಡಿರುವ ಬಗರ್‍ ಹುಕುಂ ತಡೆಯಾಜ್ಞೆ ರೈತರ ಆಸೆಗೆ ತಣ್ಣೀರು ಎರಚಿದೆ: ದತ್ತ

Update: 2017-09-10 21:58 IST

ಕಡೂರು, ಸೆ.10: ಬಗರ್‍ ಹುಕುಂ ಸಾಗುವಳಿ ಸಂಬಂಧಪಟ್ಟಂತೆ ರಾಜ್ಯ ಉಚ್ಚ ನ್ಯಾಯಾಲಯ ನೀಡಿರುವ ಮಧ್ಯಂತರ ತಡೆಯಾಜ್ಞೆ ರಾಜ್ಯದ ರೈತರ ಆಸೆಗೆ ತಣ್ಣೀರು ಎರಚಿದೆ ಎಂದು ಶಾಸಕ ವೈ.ಎಸ್.ವಿ. ದತ್ತ ಹೇಳಿದರು.

ಅವರು ಭಾನುವಾರ ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಸುಮಾರು 1 ಕೋಟಿಗೂ ಅಧಿಕ ಬಗರ್‍ ಹುಕುಂ ಸಾಗುವಳಿದಾರಿದ್ದಾರೆ. ಪ್ರತೀ ವಿಧಾನಸಭಾ ಕ್ಷೇತ್ರದಲ್ಲೂ ಸರಿ ಸುಮಾರು 15 ಸಾವಿರಕ್ಕೂ ಹೆಚ್ಚು ಸಾಗುವಳಿದಾರಿದ್ದಾರೆ. ನ್ಯಾಯಾಲಯದ ಆದೇಶದಿಂದ ಈ ರೈತರ ಭೂಮಿ ಪಡೆಯುವ ಆಸೆ ಕಮರಿದೆ. ರಾಜ್ಯ ಸರ್ಕಾರವು ನ್ಯಾಯಾಲಯದ ಮಧ್ಯಂತರ ಆದೇಶವನ್ನು ತೆರವುಗೊಳಿಸಲು ಮುಂದಾಗಬೇಕು ಎಂದು ತಿಳಿಸಿದರು.

ಕಾವೇರಿ ವಿಷಯದಲ್ಲಿ ನೇಮಕ ಮಾಡಿರುವ ವಕೀಲರ ತಂಡದಂತೆ ಬಗರ್‍ ಹುಕುಂ ವಿಷಯದಲ್ಲಿಯೂ ಉನ್ನತ ಮಟ್ಟದ ಅಧಿಕಾರಗಳ ಹಾಗೂ ಕಾನೂನು ತಜ್ಞರ ತಂಡವನ್ನು ರಚಿಸಿ ನ್ಯಾಯಾಲಯಕ್ಕೆ ಬಗರ್‍ ಹುಕುಂ ಸಮಸ್ಯೆ ಮನವರಿಕೆ ಮಾಡಿಕೊಡಬೇಕು. ಬರುವ 15 ದಿನಗಳಲ್ಲಿ ರಾಜ್ಯ ಸರ್ಕಾರ ತನ್ನ ಕಾನೂನು ತಂಡದೊಂದಿಗೆ ಸಮಾಲೋಚಿಸಿ ರೈತರಿಗೆ ಅನ್ಯಾಯ ಆಗದಂತೆ ತಡೆಯಾಜ್ಞೆಯನ್ನು ತೆರವುಗೊಳಿಸಬೇಕು. ನ್ಯಾಯಾಲಯದ ಆದೇಶವನ್ನು ಮರುಪರಿಶೀಲನೆ ಮಾಡಿ ತಜ್ಞರ ಜೊತೆ ಚರ್ಚಿಸಿ ಪರ್ಯಾಯ ಮಾರ್ಗ ಕಂಡುಹಿಡಿಯಬೇಕು ಎಂದು ಒತ್ತಾಯಿಸಿದರು.

ಬಗರ್‍ ಹುಕುಂ ಸಾಗುವಳಿ ಸಮಸ್ಯೆಗೆ ದಶಕಗಳ ಇತಿಹಾಸವಿದೆ. 80 ಮತ್ತು 90ರ ದಶಕದಲ್ಲಿ ಪ್ರಾರಂಭವಾದ ಈ ಸಮಸ್ಯೆ ಇಂದು ಉಲ್ಬಣವಾಗಿದೆ. ಅರ್ಜಿ ಸಂಖ್ಯೆ 50 ಮತ್ತು 53 ರಲ್ಲಿ ಸರ್ಕಾರದ ಮುಂದೆ ನೂರಾರು ಅರ್ಜಿಗಳು ಬಂದಿವೆ.  ಸಣ್ಣ ಮತ್ತು ಅತಿಸಣ್ಣ ರೈತರ ಭೂಮಿರಹಿತ ಕೃಷಿ ಕಾರ್ಮಿಕರಿಗೆ ಸಾಗುವಳಿ ಚೀಟಿ ನೀಡಲು ಭೂನ್ಯಾಯ ಮಂಡಳಿ ಹೆಸರಿನಲ್ಲಿ ಆಗಿನ ಸರ್ಕಾರ ಕ್ರಮ ತೆಗೆದುಕೊಂಡಿತ್ತು ಎಂದರು.

ದುರಂತದ ವಿಷಯವೆಂದರೆ 1993 ರಿಂದ 2013ರವರೆಗೆ ತಾಲ್ಲೂಕಿನಲ್ಲಿ ಬಗರ್‍ಹುಕುಂ ಸಮಿತಿಯೇ ರಚನೆ ಆಗಿಲ್ಲ. ಬಗರ್‍ಹುಕುಂ ಸಮಸ್ಯೆ ಕುರಿತಂತೆ ಯಡಿಯೂರಪ್ಪ ಇಡೀ ರಾಜ್ಯದಲ್ಲಿ ಜಾಗೃತಿ ಮೂಡಿಸಲು ತಿರುಗಾಡಿದರು. ಯಡಿಯೂರಪ್ಪ ಅವರ ಉದ್ದೇಶ ಬಡವರಿಗೆ ಸಾಗುವಳಿ ಚೀಟಿ ಕೊಡಿಸುವುದು ಆಗಿತ್ತು. ಆದರೆ ಅದೇ ಯಡಿಯೂರಪ್ಪ ಅವರು 2008ರಲ್ಲಿ ಅಧಿಕಾರಕ್ಕೆ ಬಂದಾಗ ಬಗರ್‍ಹುಕುಂ ಸಮಿತಿಯನ್ನು ರಚಿಸಲೇ ಇಲ್ಲ ಎಂದು ವಿಷಾದಿಸಿದರು.

ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಗಳು ರೈತರಿಗೆ ಹಾಗೂ ಬಗರ್‍ಹುಕುಂ ಸಾಗುವಳಿದಾರರಿಗೆ ಘನಘೋರ ಅನ್ಯಾಯ ಎಸಗಿವೆ. ಈ ಎರಡೂ ಪಕ್ಷಗಳಿಗೆ ರೈತರ ಮತ್ತು ಸಾಗುವಳಿದಾರರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಕಾಗೋಡು ತಿಮ್ಮಪ್ಪ ಅವರು ಕಂದಾಯ ಸಚಿವರಾದಾಗ ಎಲ್ಲಾ ಕಡೆ ಅಕ್ರಮ-ಸಕ್ರಮ ಸಮಿತಿ ರಚನೆ ಮಾಡಿ  ಸಭೆಗಳನ್ನು ಮಾಡಿ ಅರ್ಜಿಗಳ ವಿಲೇವಾರಿ ಮಾಡಲು ವೇಗ ಹೆಚ್ಚಿಸಿದರು. ಆಗ ರೈತರಿಗೆ ತಮ್ಮ ಕಾಲಕ್ಕೆ ಅಲ್ಲದಿದ್ದರೂ ಮೊಮ್ಮಕ್ಕಳ ಕಾಲಕ್ಕಾದರೂ ಸಾಗುವಳಿ ಚೀಟಿ ದೊರಕುತ್ತದೆ ಎಂಬ ಆಶಾಭಾವನೆ ಮೂಡಿತೆಂದರು.

ಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಭಂಡಾರಿ ಶ್ರೀನಿವಾಸ್, ಕೆ.ಎಸ್. ರಮೇಶ್, ಸೀಗೆಹಡ್ಲು ಹರೀಶ್, ಎಂ. ರಾಜಪ್ಪ, ಗಂಗಾಧರ್‍ನಾಯ್ಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News