×
Ad

ಕೋಡೆಬೈಲ್ ಸುತ್ತಮುತ್ತ ಕಾಡಾನೆ ದಾಳಿ: ಅಪಾರ ಬೆಳೆ ನಾಶ

Update: 2017-09-10 22:04 IST

ಬಣಕಲ್, ಸೆ.10: ಬಣಕಲ್ ಸಮೀಪದ ಬಿನ್ನಡಿ ಗ್ರಾಮ ವ್ಯಾಪ್ತಿಯ ಕೋಡೆಬೈಲ್ ಗ್ರಾಮದಲ್ಲಿ ಕಾಡಾನೆಗಳು ಭತ್ತದ ಗದ್ದೆಗಳನ್ನು ತುಳಿದು ನಾಶಪಡಿಸಿದ್ದು ಸಸಿಮಡಿಗಳು ಕಾಡಾನೆಗಳ ಕಾಲಿಗೆ ಸಿಲುಕಿ ನಾಶವಾಗಿವೆ ಎಂದು ಕೋಡೆಬೈಲ್ ಗ್ರಾಮದ ಗ್ರಾಮಸ್ಥ ಕೆ.ಬಿ.ಮೋಹನ್‍ಗೌಡ ತಿಳಿಸಿದ್ದಾರೆ.

ಅವರು ಬಣಕಲ್ ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನನಗೆ ಮತ್ತು ನನ್ನ ಸಹೋದರರಿಗೆ ಸೇರಿದ ಒಟ್ಟು 13 ಎಕರೆ ಗದ್ದೆಗಳನ್ನು ಕಾಡಾನೆಗಳು ತುಳಿದು ನಾಶಮಾಡಿವೆ. ಈ ಭಾಗದ ಕೋಗಿಲೆ, ದೇವರಮನೆ, ಗುತ್ತಿ ಭಾಗದಲ್ಲಿ 10 ಕಾಡಾನೆಗಳು ರಾತ್ರಿ ಸಮಯದಲ್ಲಿ ದಾಂಧಲೆ ನಡೆಸುತ್ತಿದ್ದು ರೈತರಿಗೆ ಇದರಿಂದ ಗ್ರಾಮಸ್ಥರಿಗೆ ತುಂಬಾ ತೊಂದರೆಯಾಗಿದೆ ಎಂದರು.

ಕಾಫಿ ತೋಟಗಳು ಕೂಡ ಕಾಡಾನೆಯ ಸಂಚಾರದಿಂದ ತುಳಿತಕ್ಕೆ ಒಳಗಾಗಿ ಕಾಫಿ ಗಿಡಗಳು ಮುರಿದು ಬಿದ್ದಿವೆ. ಇನ್ನು 3 ಆನೆಗಳು ಕೋಡೆಬೈಲ್ ಭಾಗದಲ್ಲಿ ರಾತ್ರಿ ಸಂಚರಿಸುತ್ತವೆ. ಉಳಿದ ಆನೆಗಳು ದೇವರಮನೆ, ಕೋಗಿಲೆ, ಗುತ್ತಿ ಭಾಗದ ಕಾಡುಗಳಲ್ಲಿ ಬೀಡು ಬಿಟ್ಟಿದ್ದು ಇದರಿಂದ ಜನರಿಗೆ ಪ್ರಾಣಬೀತಿ ಎದುರಾಗಿದೆ ಎಂದು ಕೋಗಿಲೆ ಸುತ್ತಮುತ್ತಲಿನ ಗ್ರಾಮಸ್ಥರು ದೂರಿದ್ದಾರೆ.

ಕೋಡೆಬೈಲ್ ಗ್ರಾಮದ ಕೆ.ಬಿ.ರಮೇಶ್‍ಗೌಡ, ರಾಜುಗೌಡ, ಕೋಗಿಲೆ ಗ್ರಾಮದ  ಶ್ರೀನಾಥ್, ಸಚಿನ್, ಕೃಷ್ಣೆಗೌಡ, ಮಹೇಂದ್ರ, ಉಪೇಂದ್ರ, ರವೀಂದ್ರ, ಚಂದ್ರೇಗೌಡ ಮುಂತಾದವರ ಕಾಫಿ ತೋಟಗಳು ಮತ್ತು ಗದ್ದೆಗಳು ಕೂಡ ಹಾನಿಗೆ ಒಳಗಾಗಿವೆ. ಸುಮಾರು ಒಂದು ತಿಂಗಳಿನಿಂದ 10 ಆನೆಗಳ ಹಿಂಡು ರಾಜಾರೋಷವಾಗಿ ಸಂಚರಿಸುತ್ತಿದ್ದರೂ ಅರಣ್ಯ ಇಲಾಖೆ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ. ಅರಣ್ಯ ಇಲಾಖೆ ಈ ಹಿಂದೆ ನಿರ್ಮಿಸಿದ ಆನೆ ಕಾರಿಡಾರ್ ಯೋಜನೆಗಳು ಕೂಡ ಆಭಾಗದಲ್ಲಿ ಹಳ್ಳ ಹಿಡಿದಿದೆ. ಬಡರೈತರು ಕಷ್ಟಪಟ್ಟು ನಾಟಿ ಮಾಡಿದ ಗದ್ದೆಗಳು ಕಾಡಾನೆಗಳು ತುಳಿದು ನಾಶ ಮಾಡಿರುವುದರಿಂದ ರೈತರು ಕಂಗಾಲಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಬಗ್ಗೆ ಸಂಬಂಧ ಪಟ್ಟ ಅರಣ್ಯ ಇಲಾಖಾ ಅಧಿಕಾರಿಗಳು ಕಾಡಾನೆಯ ಹಾವಳಿಗೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಕೋಗಿಲೆ ಗ್ರಾಮದ ರೈತ ಕೆ.ಬಿ.ಮೋಹನ್‍ಗೌಡ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News