ದಯವೇ ಧರ್ಮದ ಮೂಲವಾಗಬೇಕೆ ವಿನಃ ಭಯವೇ ಧರ್ಮದ ಮೂಲವಾಗಬಾರದು: ವೀರಭದ್ರ ಚನ್ನಮಲ್ಲ ಸ್ವಾಮೀಜಿ
ಬಾಗೇಪಲ್ಲಿ, ಸೆ.10: ನಮ್ಮ ದೇಶದಲ್ಲಿ ಹಿಂದುತ್ವದ ಹೆಸರಿನಲ್ಲಿ ಭಯೋತ್ಪಾದಕ ವಾತಾವರಣ ನಿರ್ಮಾಣವಾಗಿದ್ದು, ಹಿಂಸೆಗೆ ಹೆಚ್ಚು ಪ್ರಚೋದನೆಗೆ ಅವಕಾಶ ಕೊಡುತ್ತಿದ್ದಾರೆ ಎಂದು ನಿಡುಮಾಮಿಡಿ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.
ಅವರು ತಾಲೂಕಿನ ಗೂಳೂರು ನಿಡುಮಾಮಿಡಿ ಮಠದ ಆವರಣದಲ್ಲಿ ಸ್ವಾಸ್ಥ್ಯ ಸಮೃದ್ದಿ ಮತ್ತು ಸಮಾಜ ಪರಿವರ್ತನಾ ಸಮಿತಿ ಆಶ್ರಯದಲ್ಲಿ ಏರ್ಪಡಿಸಿದ್ದ ಪತ್ರಕರ್ತೆ ಗೌರಿ ಲಂಕೇಶ್ ಅವರ ಶ್ರದ್ಧಾಂಜಲಿ ಸಭೆ, ದಲಿತ ಕೇರಿಗಗಳಲ್ಲಿನ ಬಡ ಮಕ್ಕಳಿಗೆ ಶಿಕ್ಷಣ ಕೇಂದ್ರಗಳು ಮತ್ತು ಗ್ರಾಮೀಣ ಪ್ರದೇಶದ 10ನೇ ತರಗತಿಯ ಬಡ ವಿದ್ಯಾರ್ಥಿಗಳಿಗಾಗಿ ಉಚಿತ ಪುನ:ಶ್ಚೇತನ ತರಗತಿಗಳು ಹಾಗೂ ಗ್ರಾಮೀಣ ಬಡವರಿಗೆ ಜನಾರೋಗ್ಯಸಿರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಾವುದೇ ಒಂದು ದೇಶ ಅಭಿವೃದ್ಧಿಯಾಗಬೇಕಾದರೆ ಅಹಿಂಸೆಯಿಂದ ಮಾತ್ರ ಸಾಧ್ಯ. ಇಂದು ಜಗತ್ತು ಅತ್ಯಂತ ಹಿಂಸಾತ್ಮಕವಾಗಿ ಪರಿವರ್ತನೆಯಾಗುತ್ತಿದೆ ಎಲ್ಲವನ್ನು ಹಿಂಸೆಯಿಂದ ಮಾತ್ರ ಗೆಲ್ಲಬಹುದು ಎಂಬ ಭ್ರಮೆ ಬಹುತೇಕರಲ್ಲಿದೆ. ದಯವೇ ಧರ್ಮದ ಮೂಲವಾಗಬೇಕೆ ವಿನಃ ಭಯವೇ ಧರ್ಮದ ಮೂಲವಾಗಬಾರದು ಎಂದು ಹೇಳಿದರು.
ಧರ್ಮದ ಹೆಸರಿನಲ್ಲಿ ವಿಚಾರವಾದಿಗಳನ್ನು ಸತ್ಯಸಾಧಕರನ್ನು ಕ್ರಾಂತಿಕಾರರನ್ನು, ಹೋರಾಟಗಾರರನ್ನು ಹತ್ಯೆ ಮಾಡಿದರೆ ಇದಕ್ಕೆ ಶಾಶ್ವತ ಪರಿಹಾರ ಸಿಗುತ್ತದಯೇ? ಇದರ ಹೆಸರಿನಲ್ಲಿ ಹಿಂಸಾತ್ಮಕವಾಗಿ ಅತ್ಯಂತ ಕ್ರೋರಿಯಾಗಿ ಕೋಮುಗಲಭೆಗಳನ್ನು ಸೃಷ್ಟಿಸಲು ಹೊರಟಿರುವವರನ್ನು ಮಟ್ಟ ಹಾಕಬೇಕಾದ ಅನಿವಾರ್ಯತೆ ಇದೆ ಎಂದರು.
ಕೋಮು ವಾದಿಗಳು ಮೂಲಭೂತ ವಾದಿಗಳ ಸಂಖ್ಯೆ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಪ್ರಗತಿಪರರನ್ನು ಅತ್ಯಂತ ಪೈಶಾಚಿಕವಾಗಿ ಹತ್ಯೆ ಮಾಡುತ್ತಿದ್ದಾರೆ. ಸತ್ಯವನ್ನು ಯಾರು ಹೇಳಲು ಹೊರಟಿದ್ದಾರೆ ಅಂತಹವರನ್ನು ಕೊಲೆ ಮಾಡಲಾಗುತ್ತಿದೆ. ಕಲಬುರ್ಗಿ ಮತ್ತು ಗೌರಿ ಲಂಕೇಶ್ ರವರಂತಹ ಕೊಲೆ ಮಾಡಬಹುದು ಆದರೆ ಅವರ ಆಶಯಗಳನ್ನು ಆದರ್ಶಗಳನ್ನು ಹಾಗೂ ಅವರ ವಿಚಾರಗಳನ್ನು ಕೊಲೆ ಮಾಡಲು ಸಾಧ್ಯವಿಲ್ಲ ಎಂದ ಅವರು, ವಿಚಾರ ವಾದಿಗಳು, ಸಂಶೋಧಕರನ್ನು ರಾಜಾರೋಷವಾಗಿ ಹತ್ಯೆ ಮಾಡುತ್ತಿದ್ದರೂ ಹಂತಕರನ್ನ ಬಂಧಿಸುವಲ್ಲಿ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿವೆ ಎಂದು ಕಿಡಿಕಾರಿದರು.
ಪ್ರಗತಿ ಪರವಾಗಿ ಮಾತನಾಡುವುದು ತಪ್ಪೇ, ಒಂದು ವೇಳೆ ಪ್ರಗತಿಪರವಾಗಿ ಮಾತನಾಡಿದರೆ ಕೊಲೆಯೇ ಅದಕ್ಕೆ ಪರಿಹಾರ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಗೌರಿ ಲಂಕೇಶ್ ರವರನ್ನು ಕೊಲೆ ಮಾಡಿ ಹಂತಕರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದ ಅವರು ರಾಜ್ಯದಲ್ಲಿ ಪ್ರಗತಿಪರ ಸಾಹಿತಿಗಳು, ವಿಚಾರವಾದಿಗಳು, ಸಂಶೋಧಕರು , ಮಠಾಧೀಶರಿಗೆ ಹೆಚ್ಚು ಭದ್ರತೆ ಕಲ್ಪಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಪ್ರಗತಿಪರ ಚಿಂತಕ ಹಾಗೂ ಡಾ. ಅನಿಲ್ ಕುಮಾರ್ ಮಾತನಾಡಿ, ನನ್ನ ವೈದ್ಯ ಸೇವೆಯನ್ನು ಬಹುತೇಕವಾಗಿ ದೀನದಲಿತರ, ದಮನಿತರಿಗೆ ಮೀಸಲಿಡುವುದಾಗಿ ಭರವಸೆ ನೀಡಿದರು. ನಮ್ಮ ತಾಲ್ಲೂಕಿನಲ್ಲಿ 10ನೆ ತರಗತಿಯಲ್ಲಿ ಗೂಳೂರು ಗ್ರಾಮದ ಶಾಲೆಯಲ್ಲಿ ಮಾತ್ರ ಫಲಿತಾಂಶದಲ್ಲಿ ತುಂಬಾ ಹಿಂದುಳಿಯುತ್ತಿದೆ ನಾನು ಈ ಬಗ್ಗೆ ಶಿಕ್ಷಕರನ್ನು ದೂಷಿಸುವುದಿಲ್ಲ, ವಿದ್ಯಾರ್ಥಿಗಳು ಓದುತ್ತಿರುವ ವತಾವರಣ ಕಲುಷಿತವಾಗುತ್ತಿರುವುದರಿಂದ ಫಲಿತಾಂಶದಲ್ಲಿ ಹಿನ್ನಡೆಯಾಗುತ್ತಿದೆ ಎಂದು ವಿಷಾದಿಸಿದರು.
ಈ ಸಂರ್ಧಬದಲ್ಲಿ ನಿವೃತ್ತ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಬೈರಾರೆಡ್ಡಿ, ನಿವೃತ್ತ ಉಪನ್ಯಾಸಕ ಡಾ.ವೆಂಕಟರೆಡ್ಡಿ, ಪ್ರಗತಿಪರ ಚಿಂತಕ ಡಾ.ಚಿನ್ನಕೈವಾರಮಯ್ಯ, ಸ್ವಾಸ್ಥ ಸಂವೃದ್ಧಿ ಸಂಸ್ಥೆ ಸಮಿತಿಯ ಪ್ರಸಾಧ್, ಯೋಜನಾಧಿಕಾರಿ ಎ.ವಿ.ವೆಂಕಟರಾಮ, ಉಪನ್ಯಾಸಕ ವೆಂಕಟಶಿವಾರೆಡ್ಡಿ, ಶಿಕ್ಷಕ ಸುಬ್ರಮಣಿ, ಸೇರಿದಂತೆ ಸಂಸ್ಥೆಯ ಎಲ್ಲಾ ಪ್ರತಿನಿಧಿಗಳು ಭಾಗವಹಿಸಿದ್ದರು.