×
Ad

ಖಾದಿ ಉದ್ಯಮಕ್ಕೆ ಪ್ರೋತ್ಸಾಹ ಅಗತ್ಯ: ಕಾಗೋಡು ತಿಮ್ಮಪ್ಪ

Update: 2017-09-10 22:39 IST

ಶಿವಮೊಗ್ಗ, ಸೆ.10: ಸ್ವಾತಂತ್ರ್ಯ ಚಳವಳಿಯಲ್ಲಿ ವಿಶೇಷ ಮಹತ್ವ ಹೊಂದಿದ್ದ ಗ್ರಾಮೀಣ ಕಸುಬುಗಳು ಹಾಗೂ ಖಾದಿ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಬೇಕಾದುದು ಇಂದಿನ ತುರ್ತು ಅಗತ್ಯಗಳಲ್ಲೊಂದಾಗಿದೆ ಎಂದು ರಾಜ್ಯ ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಇವರ ಸಂಯುಕ್ತಾಶ್ರಯದಲ್ಲಿ ಹತ್ತು ದಿನಗಳ ಕಾಲ ನಗರದ ದೈವಜ್ಞ ಕಲ್ಯಾಣ ಮಂದಿರದಲ್ಲಿ ಆಯೋಜಿಸಲಾಗಿರುವ ಖಾದಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. 

ಸಣ್ಣ ಉದ್ಯೋಗ ಮತ್ತು ಸಣ್ಣ ಬಂಡವಾಳಸ್ಥರು ದೇಶದ ಅಭಿವೃದ್ಧಿಗೆ ಪೂರಕವಾಗಿದ್ದಾರೆ ಎಂದು ಗಾಂಧೀಜಿಯವರು ನಂಬಿದ್ದರು. ಅವರ ಆಶಯದಂತೆ ಖಾದಿ ಮತ್ತು ಗ್ರಾಮೀಣ ಉತ್ಪನ್ನಗಳನ್ನು ಪ್ರೋತ್ಸಾಹಿಸಬೇಕಾದ ಅಗತ್ಯವಿದೆ ಎಂದು ನುಡಿದರು.

ರಾಜ್ಯದ ಪ್ರತೀ ಪಂಚಾಯತ್ ನಲ್ಲಿ ಪಂಚಾಯತ್ ಗೆ ಕನಿಷ್ಠ 10 ಜನರನ್ನಾದರೂ ಖಾದಿ ಉದ್ಯಮದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರಣೆ ಹಾಗೂ ಪ್ರೋತ್ಸಾಹ ನೀಡಬೇಕು. ಅದಕ್ಕಾಗಿ ಅಗತ್ಯವಿರುವ ಕನಿಷ್ಠ 40 ಕೋಟಿ ರೂ. ನಾನು ಸರ್ಕಾರ ವತಿಯಿಂದ ಬಿಡುಗಡೆ ಮಾಡಲು ಯತ್ನಿಸುವುದಾಗಿ ತಿಳಿಸಿದ ಅವರು, ಗ್ರಾಮೀಣ ನಿರುದ್ಯೋಗಿಗಳಿಗೆ ಶಾಶ್ವತವಾಗಿ ಉದ್ಯೋಗಾವಕಾಶ ದೊರಕಿಸಿಕೊಡುವ ಸದುದ್ದೇಶದಿಂದ ಖಾದಿ ಉದ್ಯಮ ಹಾಗೂ ಗ್ರಾಮೀಣ ಕರಕುಶಲ ಕರ್ಮಿಗಳಿಗೆ ಉದ್ಯಮ ಹಾಗೂ ತರಬೇತಿಗಾಗಿ ಸುಮಾರು 100.00ಕೋಟಿ. ರೂ. ತುರ್ತಾಗಿ ಮಂಜೂರು ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಖಾದಿ ಮಂಡಳಿಯ ಅಧ್ಯಕ್ಷರಿಗೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ಖಾದಿ ಮಂಡಳಿಯ ಶಾಶ್ವತ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿಯನ್ನು ನಗರದ ಹೃದಯ ಭಾಗದಲ್ಲಿ ಮಂಜೂರು ಮಾಡುವಂತೆ ಸೂಡಾ ಅಧ್ಯಕ್ಷರಿಗೆ ಸೂಚಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕರ್ನಾಟಕ ರಾಜ್ಯ ಕಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷ ಯಲವಳ್ಳಿ ಎನ್.ರಮೇಶ್ ಅವರು ಮಾತನಾಡಿ, ಗ್ರಾಮೀಣ ಜನರು ತಮ್ಮ ಕಸುಬುಗಳ ಜೊತೆಗೆ ಗುಡಿ ಕೈಗಾರಿಕೆಗಳನ್ನು ಉತ್ತೇಜಿಸಲು ಹಾಗೂ ಗ್ರಾಮೀಣ ಜನರು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸಲು ಮಂಡಳಿ ಅವಿರತವಾಗಿ ಕಾರ್ಯಚಟುವಟಿಕೆಗಳನ್ನು ಮಾಡುತ್ತಿದೆ ಎಂದರು.

ರಾಜ್ಯದಾದ್ಯಂತ 146 ಖಾದಿ ಸಂಸ್ಥೆಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ 18,000ಜನ ಕಾರ್ಯನಿರ್ವಹಿಸುತ್ತಿದ್ದು, ಸುಮಾರು 9,000ಜನರಿಗೆ ಉದ್ಯೋಗ ಒದಗಿಸಿದೆ ಎಂದ ಅವರು ಗುಣಮಟ್ಟದ ವಸ್ತುಗಳನ್ನು ಉತ್ಸವದಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುವುದು ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಸೂಡಾ ಅಧ್ಯಕ್ಷ ಇಸ್ಮಾಯಿಲ್‍ಖಾನ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ವೇದಾವಿಜಯಕುಮಾರ್, ಜಿಲ್ಲಾ ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಎಚ್.ಆರ್.ರಾಜಪ್ಪ, ಮಾದಪ್ಪ, ನಬಾರ್ಡ್‍ನ ಅಧಿಕಾರಿ ಬಿ.ರವಿ, ಜಿಲ್ಲಾ ಖಾದಿ ಮತ್ತು ಗ್ರಾಮೋದ್ಯೋಗ ಅಧಿಕಾರಿ ರಾಘವೇಂದ್ರ ಅಡಿಗ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News