×
Ad

ಯುವ ಜನತೆ ಸಮಾಜಮುಖಿಯಾಗಿ ಚಿಂತನೆ ನಡೆಸಬೇಕು: ಆಂಜಿನಪ್ಪ ಪುಟ್ಟು

Update: 2017-09-10 22:46 IST

ಶಿಡ್ಲಘಟ್ಟ, ಸೆ.10: ತಾಲೂಕನ್ನು ಮಾದರಿಯಾಗಿ ರೂಪಿಸುವ ನಿಟ್ಟಿನಲ್ಲಿ ಎಲ್ಲರ ಸಾಂಘಿಕ ಸಹಕಾರ ಅಗತ್ಯವಿದೆ ಎಂದು ಎಸ್ ಎನ್ ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ಪುಟ್ಟು ತಿಳಿಸಿದರು.

ನಗರದ ಬಸ್ ನಿಲ್ದಾಣದ ಬಳಿ ಇರುವ ಎಸ್ ಎನ್ ಕ್ರಿಯಾ ಟ್ರಸ್ಟ್ ಕಚೇರಿಯಲ್ಲಿ ಭಾನುವಾರ ನಡೆದ ಸಾಧಕರಿಗೆಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಶ್ರವಣ ದೋಷವುಳ್ಳವರಿಗೆ ಶ್ರವಣ ಯಂತ್ರಗಳನ್ನು ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು, ಪೋಷಕರು ಮಕ್ಕಳ ಮೇಲೆ ಅಪಾರ ನಂಬಿಕೆಯನ್ನಿಟ್ಟಿರುತ್ತಾರೆ. ಅವರ ಆಸೆಯನ್ನು ನಿರಾಸೆ ಮಾಡಬಾರದು. ಉನ್ನತ ಸಾಧನೆಗಳನ್ನು ಮಾಡುವ ಮೂಲಕ ತಾಲೂಕಿಗೆ ಕೀರ್ತಿ ತರಬೇಕು. ತಾಲೂಕಿನಲ್ಲಿ ಬಡವರಿಗೆ ಆರೋಗ್ಯ, ವಿದ್ಯಾರ್ಥಿಗಳಿಗೆ ಅನುಕೂಲ, ಅಶಕ್ತರಿಗೆ ನೆರವು, ಸರ್ಕಾರದ ಯೋಜನೆಗಳನ್ನು ತಲುಪಿಸುವ ಕೆಲಸದಲ್ಲಿ ಟ್ರಸ್ಟ್ ಕಾರ್ಯನಿರ್ವಹಿಸುತ್ತಿದೆ. ಈ ನಿಟ್ಟಿನಲ್ಲಿ ಎಲ್ಲರ ಚಿಂತನೆ, ಗುರಿ, ಧ್ಯೇಯ ಅಭಿವೃದ್ಧಿಯೆಡೆಗೆ ಇರಲಿ. ಯುವ ಶಕ್ತಿ ಸಮಾಜಮುಖಿಯಾಗಿ ಚಿಂತನೆ ನಡೆಸಲಿ ಎಂದು ಹೇಳಿದರು.

ಈ ವೇಳೆ ಹತ್ಯೆಯಾದ ಪತ್ರಕರ್ತೆ ಗೌರಿ ಲಂಕೇಶ್ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು ಹಾಗೂ ಹಿರಿಯ ಕನ್ನಡಪರ ಹೋರಾಟಗಾರ ಖಂಡೇರಾವ್ ಹಾಗೂ ಸಾವಯವ ಕೃಷಿಕ ಬೋದಗೂರು ವೆಂಕಟಸ್ವಾಮಿರೆಡ್ಡಿ ಅವರನ್ನು ಸನ್ಮಾನಿಸಲಾಯಿತು. ಎಸೆಸೆಲ್ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಶ್ರಮಣ ತೊಂದರೆಯಿರುವ ವೃದ್ಧರಿಗೆ ಶ್ರವಣಯಂತ್ರಗಳನ್ನು ಟ್ರಸ್ಟ್ ಮೂಲಕ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಎಸ್ಎನ್ ಕ್ರಿಯಾ ಟ್ರಸ್ಟ್ ಗೌರವಾಧ್ಯಕ್ಷ ಆನೂರು ದೇವರಾಜ್, ಅಶ್ವತ್ಥನಾರಾಯಣರೆಡ್ಡಿ, ನಾರಾಯಣಸ್ವಾಮಿ, ಹಿತ್ತಲಹಳ್ಳಿ ಕೃಷ್ಣಪ್ಪ, ನರಸಿಂಹಪ್ಪ, ಮಳಮಾಚಹಳ್ಳಿ ಬೈರೇಗೌಡ, ವಿಶ್ವನಾಥ ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News