×
Ad

ಹಿರಿಯ ನಾಗರಿಕರಿಗೆ ಸರಕಾರ ಸೌಲಭ್ಯಗಳ ಬಗ್ಗೆ ಮಾಹಿತಿ ಇಲ್ಲದೆ ವಂಚಿತರಾಗಿದ್ದಾರೆ: ರವಿನಾರಾಯಣ

Update: 2017-09-10 23:02 IST

ದಾವಣಗೆರೆ, ಸೆ.10: ಗ್ರಾಮೀಣ ಭಾಗದ ಹಿರಿಯ ನಾಗರಿಕರನ್ನು ಗುರುತಿಸಿ ಅವರಿಗೆ ಹಿರಿಯ ನಾಗರಿಕರ ಕಾರ್ಡ್ ಜೊತೆಗೆ ಸರ್ಕಾರಿ ಸೌಲಭ್ಯ ತಲುಪಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಪ್ರಯತ್ನಿಸಬೇಕೆಂದು ನಿವೃತ್ತ ಎಎಸ್ಪಿ ರವಿನಾರಾಯಣ ಹೇಳಿದರು.

ನಗರದ ಬಾಪೂಜಿ ಬಿ ಸ್ಕೂಲ್ ಮೈದಾನದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಪಂ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ವೃದ್ಧರಿಗೆ ಏರ್ಪಡಿಸಿದ್ದ ಕ್ರೀಡಾ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಬಹುತೇಕ ಹಿರಿಯ ನಾಗರಿಕರು ಯೋಜನೆಗಳು, ಸೌಲಭ್ಯಗಳ ಬಗ್ಗೆ ಮಾಹಿತಿ ಇಲ್ಲದೆ ಇವುಗಳಿಂದ ವಂಚಿತರಾಗುತ್ತಿದ್ದಾರೆ. ಸಂಬಂಧಪಟ್ಟ ಇಲಾಖೆ ಸೌಲಭ್ಯ ವಂಚಿತ ಹಿರಿಯ ನಾಗರಿಕರ ಒಳಗೊಂಡ ಸಮಿತಿ ರಚಿಸಿ ಇದರ ಮುಖೇನಾ ಹಿರಿಯ ನಾಗರಿಕರಿಗೆ ಕಾರ್ಡ್ ಮತ್ತು ಸರ್ಕಾರ ಸೌಲಭ್ಯಗಳು ತಲುಪಿಸಲು ಮತ್ತು ಮಾಹಿತಿ ಸಹಕಾರಿಯಾಗಲಿದೆ ಎಂದರು.

ಹಿರಿಯ ನಾಗರಿಕ ಕಾರ್ಡ್ ಹೊಂದಿದವರಿಗೆ ಮಾತ್ರ ಕೆಎಸ್‍ಆರ್‍ಟಿಸಿ, ರೈಲ್ವೆ ಪ್ರಯಾಣ ದರದಲ್ಲಿ ರಿಯಾಯಿತಿ ನೀಡಲಾಗುತ್ತಿದೆ. ಇದು ಉತ್ತಮ ಯೋಜನೆ. ಆದರೆ ಎಲ್ಲರೂ ಕಾರ್ಡ್ ಮಾಡಿಸಿಲ್ಲ. ಆದ್ದರಿಂದ  ಸರ್ಕಾರ ಆಧಾರ್, ಪಡಿತರ ಚೀಟಿ, ವೋಟಿಂಗ್ ಕಾರ್ಡ್ ಪರಿಗಣನೆಗೆ ತೆಗೆದುಕೊಂಡು ಹಿರಿಯ ನಾಗರಿಕರಿಗೆ ಪ್ರಯಾಣ ದರದಲ್ಲಿ ರಿಯಾಯಿತಿ ಕೊಡುವ ವ್ಯವಸ್ಥೆ ರೂಪಿಸಬೇಕು ಎಂದು ಮನವಿ ಮಾಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಎಚ್. ವಿಜಯಕುಮಾರ್ ಮಾತನಾಡಿ, ಹಿರಿಯ ನಾಗರಿಕರಿಗೆ ಸೌಲಭ್ಯ ತಲುಪಿಸುವ ನಿಟ್ಟಿನಲ್ಲಿ ಈಗಾಗಲೇ ಸಮಿತಿ ರಚಿಸಲಾಗಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಹಿರಿಯ ನಾಗರಿಕರ ಸಂಖ್ಯೆ ಗುರುತಿಸಿ ಸೌಲಭ್ಯ ತಲುಪಿಸಲು ಸರ್ವೇ ಕಾರ್ಯ ನಡೆಸಲು ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.

ಬಾಪೂಜಿ ಶಾಲೆ ನಿರ್ದೇಶಕ ಕೆ. ಇಮಾಮ್ ಮಾತನಾಡಿ, ನಾವು ಚಿಕ್ಕವರಿದ್ದಾಗ ಗುರು-ಹಿರಿಯರು ಎಂದರೆ ಕಿರಿಯರಲ್ಲಿ ಭಯ, ಗೌರವ ಇತ್ತು. ಇದು ಈಗ ಮಾಯವಾಗಿದೆ. ವಯಸ್ಸಾದ ಪೋಷಕರನ್ನು ಅನಾಥ ಆಶ್ರಮಕ್ಕೆ ತಳ್ಳುವ ಕೆಟ್ಟ ಸಂಪ್ರದಾಯ ಬೆಳೆಯುತ್ತಿದೆ. ಇದನ್ನು ಹೋಗಲಾಡಿಸಲು ಚಿಕ್ಕಂದಿನಿಂದಲೇ ಮಕ್ಕಳಲ್ಲಿ ಗುರು, ಹಿರಿಯರ ಬಗ್ಗೆ ಗೌರವ ಭಾವನೆ ಬೆಳೆಸಬೇಕು ಎಂದು ವಿವರಿಸಿದರು.

ಈ ವೇಳೆ ಹಿರಿಯ ನಾಗರಿಕರಿಗೆ 75,100 ಮೀ ಓಟ, ಶಾಟ್‍ಪುಟ್, 200 ಮೀ ನಡಿಗೆ ಮತ್ತು ಏಕಪಾತ್ರಾಭಿನಯ, ಜಾನಪದ ಗೀತೆ ಸರ್ಧೆಗಳು ನಡೆದವು. ನೂರಕ್ಕೂ ಹೆಚ್ಚು ಹಿರಿಯ ನಾಗರಿಕರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರ ಸಹಾಯಕವಾಣಿ ಕೇಂದ್ರದ ಕಾರ್ಯದರ್ಶಿ ಕೆ.ಪಿ. ಮರಿಯಾಚಾರ್, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಕಾರಿ ಜಿ.ಎಸ್. ಶಶಿಧರ ಇತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News