×
Ad

ಗ್ರಾಮಗಳಿಗೆ ಬಸ್ ಸೌಲಭ್ಯ ಅಗತ್ಯ, ಅನಿವಾರ್ಯ: ಡಾ.ಅನಿಲ್ ಆನಂದ್

Update: 2017-09-10 23:11 IST

ಮಂಡ್ಯ, ಸೆ.10: ಸಾರ್ವಜನಿಕರು, ರೈತರು ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪ್ರತಿಯೊಂದು ಗ್ರಾಮಕ್ಕೂ ಬಸ್ ಸೌಲಭ್ಯ ಕಲ್ಪಿಸುವುದು ಅಗತ್ಯ ಮತ್ತು ಅನಿವಾರ್ಯವಾಗಿದೆ ಎಂದು ಮಂಡ್ಯ ಯೂತ್ ಗ್ರೂಪ್ ಅಧ್ಯಕ್ಷ ಡಾ.ಅನಿಲ್ ಆನಂದ್ ಹೇಳಿದ್ದಾರೆ.

ತಾಲೂಕಿನ ಲಾಳನಕೆರೆ ಗ್ರಾಮದಲ್ಲಿ ಮಂಡ್ಯ ಯೂತ್ ಗ್ರೂಪ್ ವತಿಯಿಂದ ಸನ್‍ಪ್ಯೂರ್ ಸಹಯೋಗದಲ್ಲಿ  ಪಡಸಾಲೆ ಶೀರ್ಷಿಕೆಯಡಿ ಆಯೋಜಿಸಿದ್ದ  ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮದಲ್ಲಿ ಅವರು ಬಸ್ ಸಂಪರ್ಕವಿಲ್ಲದ ಊರುಗಳು ವಿಷಯ ಕುರಿತು ಮಾತನಾಡಿದರು.

ಬಸ್ ಸಂಪರ್ಕವಿಲ್ಲದ ಊರುಗಳ ಪಟ್ಟಿಗೆ ಲಾಳನಕೆರೆ, ಚಿಕ್ಕಹಾರೋಹಳ್ಳಿ, ಚೊಟ್ಟನಹಳ್ಳಿ ಗ್ರಾಮಗಳೂ ಸೇರಿವೆ. ಬಸ್ ವ್ಯವಸ್ಥೆ ಇಲ್ಲದೆ ಈ ಊರುಗಳ ರೈತರು ನಗರ ಮತ್ತು ಪಟ್ಟಣ ಪ್ರದೇಶಗಳಿಗೆ ಕೃಷಿ ಉತ್ಪನ್ನಗಳನ್ನು ಸಾಗಿಸಲು ಹಾಗೂ ವಿದ್ಯಾರ್ಥಿಗಳು ಸಕಾಲದಲ್ಲಿ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಇದರಿಂದ ಅವರ ಶೈಕ್ಷಣಿಕ ಭವಿಷ್ಯ ಡೋಲಾಯಮಾನ ಸ್ಥಿತಿಯಲ್ಲಿದೆ ಎಂದು ಅವರು ವಿಷಾದಿಸಿದರು.

ಜಿಲ್ಲೆಯ ಇನ್ನೂ ಹಲವು ಗ್ರಾಮಗಳಿಗೆ ಬಸ್ ವ್ಯವಸ್ಥೆ ಇಲ್ಲ. ಎಷ್ಟೋ ವಿದ್ಯಾರ್ಥಿಗಳು ಇಂದಿಗೂ ಕಿಲೋಮೀಟರ್‍ಗಟ್ಟಲೇ ನಡೆದುಕೊಂಡು ಬಂದು ಬಸ್ ಹತ್ತುತ್ತಿದ್ದಾರೆ. ಅದರಲ್ಲೂ ಹೆಣ್ಣು ಮಕ್ಕಳ ಪಾಡು ಹೇಳತೀರದಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ಎಲ್ಲಾ ಊರುಗಳು ಸಾರಿಗೆ ಬಸ್ ವ್ಯವಸ್ಥೆ ಹೊಂದಬೇಕು ಎಂದರು.

ಗ್ರಾಮೀಣ ಪ್ರದೇಶದ ಜನರು ವೈರಲ್ ಜ್ವರ, ಡೆಂಗ್, ಚಿಕೂನ್‍ಗುನ್ಯಾ ಜ್ವರಗಳಿಂದ ಉಂಟಾಗುವ ನೋವಿನ ಸಮಸ್ಯೆಗಳಿಗೆ ನೋವು ನಿವಾರಕ ಮಾತ್ರೆಗಳಿಗೆ ಮೊರೆ ಹೋಗಬಾರದು. ಬೇವಿನ ಎಣ್ಣೆ, ಉಪ್ಪು ನೀರಿನ ಶಾಖ, ಕೀಲು ನೋವುಗಳಿಗೆ ಸಣ್ಣ ವ್ಯಾಯಾಮದ ಮೂಲಕ ಉಪಶಮನ ಮಾಡಿಕೊಳ್ಳುವಂತೆ ಅವರು ಸಲಹೆ ಮಾಡಿದರು.

ಈ ವೇಳೆ  ಹಿರಿಯ ದಂಪತಿಗಳಾದ ಶಿವಮ್ಮ-ನಂಜುಂಡಪ್ಪ, ಪುಟ್ಟನಿಂಗಮ್ಮ-ಭೋಗಪ್ಪ, ಸಿದ್ದಮ್ಮ-ಮರಿಸಿದ್ದಯ್ಯ ಅವರನ್ನು ಸನ್ಮಾನಿಸಲಾಯಿತು. 250ಕ್ಕೂ ಹೆಚ್ಚು ಮಂದಿಯ ಆರೋಗ್ಯ ತಪಾಸಣೆ ನಡೆಸಿ ಉಚಿತವಾಗಿ ಔಷಧಿ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯರಾದ ಮಹದೇವಪ್ಪ, ಶಿವಮಲ್ಲಸ್ವಾಮಿ, ಮುಖಂಡರಾದ ಎಲ್.ಎಸ್.ಮಧು, ಮಂಜುನಾಥ್ ಸಿದ್ದೇಶ್, ಗ್ರೂಪ್ ಪದಾಧಿಕಾರಿಗಳಾದ ವಿನಯ್, ದರ್ಶನ್, ಮಲ್ಲೇಶ್, ಭರತ್, ಸೈಯದ್, ಸಾಗರ್, ಕಾರ್ತಿಕ್, ವಿನಯ್, ಕಿರಣ್, ಸಂದೇಶ್‍ಬಾಬು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News