×
Ad

ಮಂಡ್ಯದಲ್ಲಿ ವರುಣನ ಆರ್ಭಟ: ಕೃಷಿ ಚಟುವಟಿಕೆ ಚುರುಕು

Update: 2017-09-10 23:17 IST

ಮಂಡ್ಯ, ಸೆ.10: ಶನಿವಾರ ತಡರಾತ್ರಿ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದು, ಬಹುತೇಕ ಕಡೆ ಸಣ್ಣಪುಟ್ಟ ಕೆರೆಕಟ್ಟೆ, ಗುಂಡಿಗಳು ಭರ್ತಿಯಾಗಿ ರೈತರಲ್ಲಿ ಹರ್ಷ ಮೂಡಿಸಿದ್ದರೆ,  ಮತ್ತೊಂದೆಡೆ ಹಲವು ಕಡೆ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.

ಶನಿವಾರ ತಡರಾತ್ರಿ ಆರಂಭವಾದ ತುಂತುರು ಮಳೆ, ಕ್ರಮೇಣ ಬಿರುಸುಗೊಂಡು ರವಿವಾರ ಬೆಳಗಿನ ಜಾವದವರೆಗೂ ಸುರಿಯಿತು. ಇದರಿಂದಾಗಿ ಹೊಲಗದ್ದೆಗಳಲ್ಲಿನ ಸಣ್ಣಪುಟ್ಟ ಗುಂಡಿಗಳು ಭರ್ತಿಯಾಗಿ ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ.

ಹೆದ್ದಾರಿಗೆ ಹೊಂದಿಕೊಂಡಿರುವ ಮದ್ದೂರು ಪಟ್ಟಣದ ಎಲ್‍ಐಸಿ ಬಡಾವಣೆಯ ಹಲವು ಮನೆಗಳಿಗೆ ನೀರು ನುಗ್ಗಿ ಸಾವಿರಾರು ರೂ. ಮೌಲ್ಯದ ವಸ್ತುಗಳು ನಾಶವಾಗಿದ್ದರೆ, ನಾಗಮಂಗಲ ತಾಲೂಕಿನ ಹಲವೆಡೆ ಮನೆಗಳಿಗೆ ಹಾನಿಯಾದ ವರದಿಯಾಗಿದೆ.

ಮದ್ದೂರಿನ ಎಲ್‍ಐಸಿ ಕಚೇರಿ ಆವರಣ ಜಲಾವೃತಗೊಂಡಿದ್ದರೆ, ಪಕ್ಕದಲ್ಲೇ ಹಾದುಹೋಗಿರುವ ನಾಲೆಯ ನೀರು ಉಕ್ಕಿ, ಕಚೇರಿ ಹಿಂಭಾಗದ ಹಲವು ಮನೆಗಳಿಗೆ ನುಗ್ಗಿ ದವಸ, ಧಾನ್ಯ, ಬಟ್ಟೆ, ಇತರೆ ಪದಾರ್ಥಗಳು ಹಾನಿಯಾಗಿವೆ. ನಾಗಮಂಗಲ ತಾಲೂಕಿನ ಮದಲಹಳ್ಳಿ ಗ್ರಾಮದ ಕುಮಾರ್ ಎಂಬುವರ ಮನೆ ಹಾನಿಯಾಗಿದ್ದು, ಕೊಟ್ಟಿಗೆ ಮನೆ ಸಂಪೂರ್ಣ ಕುಸಿದು ಬಿದ್ದು, ರಾಸುಗಳು ಗಾಯಗೊಂಡಿವೆ. ಅದೇ ಗ್ರಾಮದ ನರಸುಂಹೇಗೌಡರ ಮಗ ಕರೀಗೌಡ ಎಂಬುವರ ತೋಟದ ಮನೆಯ ಮೇಲ್ಚಾವಣಿ ಹಾರಿಹೋಗಿವೆ. ಹಾಲ್ತಿ ಗ್ರಾಮದ ಮಲ್ಲೇಗೌಡರ ಮಗ ಉಮೇಶ್ ಎಂಬುವರ ಕೊಟ್ಟಿಗೆಯೂ ಕುಸಿದಿದೆ.

ಮಳೆ ಪ್ರಮಾಣ: ಶನಿವಾರ ತಡರಾತ್ರಿ ಮಂಡ್ಯ ತಾಲೂಕಿನಲ್ಲಿ 56 ಮಿ.ಮೀ., ಮಳವಳ್ಳಿ ತಾಲೂಕಿನ್ಲಿ 32.70 ಮಿ.ಮೀ., ಶ್ರೀರಂಗಪಟ್ಟಣದಲ್ಲಿ 18.50 ಮಿ.ಮೀ., ನಾಗಮಂಗಲದಲ್ಲಿ 71.20 ಮಿ.ಮೀ., ಕೆ.ಆರ್.ಪೇಟೆಯಲ್ಲಿ 30.20 ಮಿ.ಮೀ., ಮದ್ದೂರಿನಲ್ಲಿ 62.62 ಮಿ.ಮೀ. ಮತ್ತು ಪಾಂಡವಪುರದಲ್ಲಿ 28.60 ಮಿ.ಮೀ. ಮಳೆಯಾಗಿದೆ. ಒಟ್ಟಾರೆ ಸೆಪ್ಟೆಂಬರ್ ತಿಂಗಳಲ್ಲಿ ಈವರೆಗೆ ಜಿಲ್ಲೆಯಲ್ಲಿ 781.96 ಮಿ.ಮೀ. ಮಳೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News