ಆಮ್ಲಜನಕ ಸಿಲಿಂಡರ್ ಬೇಕಾಗಿದ್ದು ಯಾರಿಗೆ?

Update: 2017-09-11 05:07 GMT

ಉತ್ತರ ಪ್ರದೇಶದ ಗೋರಖ್‌ಪುರದ ಆಸ್ಪತ್ರೆಯಲ್ಲಿ ಆಮ್ಲಜನಕ ಸಿಲಿಂಡರ್ ಕೊರತೆಯಿಂದ ನೂರಾರು ಮಕ್ಕಳು ಮೃತಪಟ್ಟ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿತು. ವಿಶ್ವದ ‘ಸೂಪರ್ ಪವರ್’ ಎನಿಸಿಕೊಳ್ಳಲು ಹಂಬಲಿಸುವ ಭಾರತದ ಭವಿಷ್ಯವನ್ನು ಗೋರಖ್‌ಪುರದ ದುರಂತ ಅಣಕಿಸಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಆರೋಗ್ಯಕ್ಕೆ ನೀಡುವ ಮಹತ್ವ ಎಷ್ಟು ಕಳಪೆ ಎನ್ನುವುದು ಚರ್ಚೆಗೊಳಗಾಯಿತು.

ವಿಪರ್ಯಾಸವೆಂದರೆ, ಈ ಘಟನೆ ಬರೇ ಸಿಲಿಂಡರ್ ಕೊರತೆಯಿಂದ ನಡೆಯಿತು ಎನ್ನುವ ನೆಲೆಯಲ್ಲಿ ಮಾಧ್ಯಮಗಳಲ್ಲಿ ಚರ್ಚೆಗೊಳಗಾಯಿತೇ ಹೊರತು, ಅದರಾಚೆಗೆ ಉತ್ತರ ಪ್ರದೇಶವೂ ಸೇರಿದಂತೆ ಭಾರತದ ಆಸ್ಪತ್ರೆಗಳಲ್ಲಿ ನಡೆಯುವ ಮಕ್ಕಳ ಸಾವಿನ ಹಿಂದೆ ಇತರ ಸರಕಾರಿ ವೈಫಲ್ಯಗಳು ಮುನ್ನೆಲೆಗೆ ಬರಲೇ ಇಲ್ಲ. ಕೇವಲ ಆಮ್ಲಜನಕ ಸಿಲಿಂಡರ್ ಕೊರತೆಯಿಂದ ಅಷ್ಟೂ ಮಕ್ಕಳ ಸಾವುಗಳು ಸಂಭವಿಸಿದೆ ಎಂದಾದರೆ ಅದಕ್ಕೆ ಸಿಲಿಂಡರ್ ಪೂರೈಕೆದಾರರು ಮತ್ತು ಕಂಪೆನಿಗೆ ಸಕಾಲದಲ್ಲಿ ಹಣ ಪಾವತಿಸದ ವ್ಯವಸ್ಥೆಯ ಕೆಲವು ಅಧಿಕಾರಿಗಳನ್ನು ಹೊಣೆ ಮಾಡಿಸಿ ಕೈ ತೊಳೆದುಕೊಳ್ಳಬಹುದು. ಸಿಲಿಂಡರ್ ಪೂರೈಕೆಯಲ್ಲಿ ಯಶಸ್ವಿಯಾಗಿದ್ದರೆ ದುರಂತ ನಡೆಯುತ್ತಿರಲಿಲ್ಲ ಎಂದು ದೇಶ ಭಾವಿಸಿದೆ. ದುರಂತಕ್ಕೆ ಒಂದು ನಿರ್ದಿಷ್ಟ ಆಸ್ಪತ್ರೆಯ ವೈಫಲ್ಯ ಮೂಲ ಕಾರಣ ಎಂದು ದೇಶದ ಬಹುತೇಕರು ನಂಬಿದ್ದಾರೆ.

ಆದರೆ ಒಂದನ್ನು ಗಮನಿಸಬೇಕಾಗಿದೆ. ನೂರಕ್ಕೂ ಅಧಿಕ ಮಕ್ಕಳು ಸಾವಿಗೀಡಾಗಿರುವುದು ಬಹಿರಂಗವಾದಾಕ್ಷಣ ಸರಕಾರ ಮಧ್ಯ ಪ್ರವೇಶಿಸಿತು. ಅಂದರೆ ಸಿಲಿಂಡರ್ ಪೂರೈಸಲು ಸರಕಾರ ಪರ್ಯಾಯ ಕ್ರಮ ಕೈಗೊಂಡಿತು ಎಂದು ನಾವು ಭಾವಿಸಿದೆವು. ಆದರೆ, ಈ ಘಟನೆ ಬಹಿರಂಗವಾಗಿ ಮಾಧ್ಯಮಗಳಲ್ಲಿ ಸಾಲು ಸಾಲಾಗಿ ವರದಿ ಬಂದ ಬಳಿಕವೂ ಸಾವಿನ ಸರಣಿಯಲ್ಲಿ ಮಾತ್ರ ಇಳಿಮುಖವಾಗಲಿಲ್ಲ. ಇನ್ನಷ್ಟು ಮಕ್ಕಳ ಸಾವು ಸಂಭವಿಸುತ್ತಲೇ ಹೋಯಿತು. ಬರೇ ಸಿಲಿಂಡರ್ ಕೊರತೆಯೇ ಕಾರಣ ಎಂದಾದರೆ ಆ ಬಳಿಕ ಸಾವುಗಳು ಸಂಭವಿಸಬಾರದಿತ್ತಲ್ಲವೇ? ಸಾವಿನ ಸಂಖ್ಯೆ ಆ ಬಳಿಕವೂ ಹೆಚ್ಚಲು ಕಾರಣವೇನು? ಮತ್ತು ಈಗಲೂ ಆಸ್ಪತ್ರೆಯೊಳಗಿಂದ ಸಾವಿನ ಸಂಖ್ಯೆ ಬಿಡುಗಡೆಯಾಗುತ್ತಲೇ ಇದೆ ಯಾಕೆ? ಇಷ್ಟಕ್ಕೂ ಇಂತಹ ಗುಂಪು ಸಾವುಗಳು ಸಂಭವಿಸಿರುವುದು ಕೇವಲ ಗೋರಖ್‌ಪುರ ಆಸ್ಪತ್ರೆಗಳಲ್ಲಿ ಮಾತ್ರವಲ್ಲ. ಇದಾದ ಕೆಲವೇ ದಿನಗಳಲ್ಲಿ ಉತ್ತರ ಪ್ರದೇಶದ ಫಾರೂಕಾಬಾದ್ ಆಸ್ಪತ್ರೆಯೊಂದರಲ್ಲೂ ಇಂತಹದೇ ಸಾವುಗಳು ಸಂಭವಿಸಿದವು. ಇಲ್ಲಿಯೂ 40ಕ್ಕೂ ಅಧಿಕ ಮಕ್ಕಳು ಮೃತಪಟ್ಟವು.

ಈ ಹಿಂದಿನ ಕಾರಣಕ್ಕಾಗಿಯೇ ಈ ಸಾವುಗಳು ಸಂಭವಿಸಿದವು. ಆಕ್ಸಿಜನ್ ಕೊರತೆ ಸಾವಿನಲ್ಲಿ ಮಹತ್ತರ ಪಾತ್ರ ವಹಿಸಿದೆ. ಗೋರಖ್‌ಪುರದ ದುರಂತ ಯಾಕೆ ಈ ಆಸ್ಪತ್ರೆಯನ್ನು ಎಚ್ಚರಗೊಳಿಸಲಿಲ್ಲ. ಗೋರಖ್‌ಪುರದಲ್ಲಿ ನಡೆದ ದುರಂತದ ಗಂಭೀರತೆಯನ್ನು ಅರಿತು, ತಕ್ಷಣ ಈ ಫಾರೂಕಾಬಾದ್ ಆಸ್ಪತ್ರೆ ತಕ್ಷಣ ತನ್ನ ತಪ್ಪುಗಳನ್ನು ತಿದ್ದಿಕೊಳ್ಳಬೇಕಾಗಿತ್ತು. ಆದರೆ ಆ ಆಸ್ಪತ್ರೆಗೆ ತನ್ನ ತಪ್ಪುಗಳನ್ನು ತಿದ್ದಿಕೊಳ್ಳಲು ಸಾಧ್ಯವಾಗಲಿಲ್ಲ ಎನ್ನುವುದಕ್ಕೆ ಅಲ್ಲಿ ಮೃತಪಟ್ಟ ಹಸುಳೆಗಳೇ ಸಾಕ್ಷಿಯಾಗಿವೆ.

 ಮುಖ್ಯವಾಗಿ ಇಷ್ಟೂ ಪ್ರಮಾಣದಲ್ಲಿ ಒಂದು ಆಸ್ಪತ್ರೆಗೆ ಆಕ್ಸಿಜನ್ ಕೊರತೆ ಯಾಕೆ ಬೀಳುತ್ತವೆ ಎನ್ನುವ ಪ್ರಶ್ನೆಯನ್ನು ನಾವು ಕೇಳಿಕೊಳ್ಳಬೇಕಾಗಿದೆ. ಕೊರತೆಯಾಗಿರುವುದು ಆಸ್ಪತ್ರೆಯ ಆಕ್ಸಿಜನ್ ಸಿಲಿಂಡರ್ ಎನ್ನುವುದಕ್ಕಿಂತ, ಆಸ್ಪತ್ರೆಗಳಲ್ಲಿ ದಾಖಲಾಗುತ್ತಿರುವ ರೋಗಿಷ್ಠ ಮಕ್ಕಳ ಸಂಖ್ಯೆ ಹೆಚ್ಚುತ್ತಿವೆ ಎನ್ನುವುದೇ ಸರಿಯಾದ ಕ್ರಮ. ಕಾಯಿಲೆ ಪೀಡಿತ ಮಕ್ಕಳು ಆಸ್ಪತ್ರೆಗಳಲ್ಲಿ ದಾಖಲಾಗುತ್ತಿರುವ ಸಂಖ್ಯೆ ಹೆಚ್ಚುತ್ತಿವೆ. ಇದು ಯಾವ ಪ್ರಮಾಣದಲ್ಲಿ ಹೆಚ್ಚುತ್ತಿವೆ ಎಂದರೆ ಮೂಲಭೂತ ಸೌಕರ್ಯಗಳ ಕೊರತೆಗಳಿಂದ ನರಳುತ್ತಿರುವ ಆಸ್ಪತ್ರೆಗಳಿಗೆ ಈ ರೋಗಿಗಳನ್ನು ನಿಭಾಯಿಸಲು ಆಗುತ್ತಿಲ್ಲ. ಕಾಟಾಚಾರಕ್ಕೆ ಇವರನ್ನು ಸ್ವೀಕರಿಸುತ್ತಿವೆಯೇ ಹೊರತು, ಈ ಪ್ರಮಾಣದ ರೋಗಿಗಳಿಗೆ ಸೂಕ್ತ ರೀತಿಯ ಚಿಕಿತ್ಸೆ ನೀಡುವಲ್ಲಿ ಆಸ್ಪತ್ರೆಗಳು ವಿಫಲವಾಗುತ್ತಿವೆ. ಸೂಕ್ತ ಚಿಕಿತ್ಸೆ ನೀಡಲು ವಿಫಲವಾದ ಕಾರಣದಿಂದ ಜೀವನ್ಮರಣ ಹೋರಾಟದಲ್ಲಿರುವ ಮಕ್ಕಳಿಗೆ ಆಕ್ಸಿಜನ್ ಸಿಲಿಂಡರ್‌ಗಳ ಬೇಡಿಕೆ ಹೆಚ್ಚುತ್ತಿವೆ.

ಪ್ರಾಥಮಿಕ ಔಷಧಿಯನ್ನೇ ನೀಡುವಲ್ಲಿ ವಿಫಲವಾಗಿರುವ ಆಸ್ಪತ್ರೆ, ಇಷ್ಟೂ ಮಕ್ಕಳಿಗೆ ಏಕಾಏಕಿ ಸಿಲಿಂಡರ್‌ಗಳನ್ನು ಪೂರೈಸುವುದು ಸಾಧ್ಯವೇ? ಎಂಬ ಅಂಶಗಳ ಕಡೆಗೂ ನಾವು ಗಮನ ಹರಿಸಬೇಕಾಗಿದೆ. ರೋಗಗಳಿಗೆ ಮಕ್ಕಳು ಯಾಕೆ ಬಲಿಯಾಗುತ್ತಿದ್ದಾರೆ ಎನ್ನುವ ಅಂಶ ಮೊದಲು ಚರ್ಚೆಗೆ ಒಳಗಾಗಿ, ಅದಕ್ಕೆ ಸೂಕ್ತ ಬಂದೋಬಸ್ತು ಮಾಡದೇ ಇದ್ದರೆ, ಬರೇ ಸಿಲಿಂಡರ್‌ನಿಂದ ಮಕ್ಕಳನ್ನು ಬದುಕಿಸಲು ಸಾಧ್ಯವಿಲ್ಲ. ಅದು ಈಗಾಗಲೇ ಸಾಬೀತಾಗಿದೆ. ಇದೀಗ ಇನ್ನೊಂದು ಬರ್ಬರ ಘಟನೆ ಉತ್ತರ ಪ್ರದೇಶದ ಇನ್ನೊಂದು ಆಸ್ಪತ್ರೆಯಲ್ಲಿ ನಡೆದಿದೆ. ಆ ಆಸ್ಪತ್ರೆಯಲ್ಲಿ 96 ಮಕ್ಕಳು ಮೃತಪಟ್ಟಿದ್ದಾರೆ. ಯಾವುದೇ ಆಕ್ಸಿಜನ್ ಕೊರತೆಯಿಂದ ಅವುಗಳು ಮೃತಪಟ್ಟಿಲ್ಲ. ಆಸ್ಪತ್ರೆಯ ಸಿಬ್ಬಂದಿ, ವೈದ್ಯರು ಹೇಳುವಂತೆ, ಅವರೆಲ್ಲ ಮೃತಪಟ್ಟಿರುವುದು ಅಪೌಷ್ಟಿಕತೆಯ ಕಾರಣದಿಂದ. ಅಷ್ಟೂ ಮಕ್ಕಳು ಅಪೌಷ್ಟಿಕತೆಯ ಕೊರತೆಯಿಂದ ನರಳುತ್ತಿದ್ದರು. ಆ ಆಸ್ಪತ್ರೆಯಲ್ಲಿರುವುದು 800 ಹಾಸಿಗೆಗಳು. ಆದರೆ 1,200 ರೋಗಿಗಳನ್ನು ದಾಖಲಿಸಿಕೊಳ್ಳುತ್ತಿದ್ದಾರಂತೆ. ಪ್ರತೀ ದಿನ ಇಲ್ಲಿ 45 ಮಕ್ಕಳ ಜನನವಾಗುತ್ತವೆ. ಆದರೆ ಆ ಆಸ್ಪತ್ರೆ ಬರೇ 30 ಮಕ್ಕಳನ್ನು ಹೆರಿಗೆ ಮಾಡಿಸುವ ಸಾಮರ್ಥ್ಯವನ್ನು ಹೊಂದಿವೆ. ಎಲ್ಲಕ್ಕಿಂತ ವಿಪರ್ಯಾಸವೆಂದರೆ, ಇಲ್ಲಿ ದಾಖಲಾಗುವ ಎಲ್ಲ ಮಕ್ಕಳೂ ಬಡವರು. ಶೇ. 90ರಷ್ಟು ಮಹಿಳೆಯರು ರಕ್ತಹೀನತೆ ಮತ್ತು ಅಪೌಷ್ಟಿಕತೆಯಿಂದ ನರಳುವವರು. ಅಂದರೆ ಅವರು ಆಸ್ಪತ್ರೆಗೆ ಕಾಲಿಡುವ ಮೊದಲೇ ಸಾವಿನ ಮೊದಲ ಮೆಟ್ಟಿಲನ್ನು ಏರಿ ಬಂದವರು. ಅಂತಿಮವಾಗಿ ಎಲ್ಲಾ ಹೊಣೆಯನ್ನೂ ಆಸ್ಪತ್ರೆ ಹೊತ್ತುಕೊಳ್ಳಬೇಕಾಗುತ್ತದೆ.

ಜನಸಾಮಾನ್ಯರ ಮೂಲಭೂತ ಅಗತ್ಯಗಳ ಕುರಿತಂತೆ ಎಳ್ಳಷ್ಟೂ ಅರಿವಿಲ್ಲದ, ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶವನ್ನು ಆಳುತ್ತಿದ್ದಾರೆ. ಅವರಿಗೆ ಜನಸಾಮಾನ್ಯರ ಬದುಕಿಗಿಂತ ಗೋವಿನ ಬದುಕೇ ಬಹುದೊಡ್ಡದು ಎನ್ನಿಸಿದೆ. ಗೋರಖ್‌ಪುರ ದುರಂತಕ್ಕೆ ಅವರು ಪ್ರತಿಕ್ರಿಯಿಸಿದ್ದು ‘‘ನಿಮ್ಮ ಮಕ್ಕಳ ಹೊಣೆಯನ್ನು ನಾವು ಹೊರಬೇಕೇ?’’ ಎಂಬ ಅರ್ಥದಲ್ಲಿ. ಗೋವುಗಳಿಗೆ ಆ್ಯಂಬ್ಯುಲೆನ್ಸ್ ಒದಗಿಸುವ ಈ ಸನ್ಯಾಸಿಗೆ, ಜನ ಸಾಮಾನ್ಯರು ಸರಕಾರಿ ಆಸ್ಪತ್ರೆಗಳಿಂದ ಶವವನ್ನು ಹೆಗಲಲ್ಲಿ ಹೊತ್ತುಕೊಂಡು ಹೋಗುತ್ತಿರುವುದನ್ನು ನೋಡಲು ಸಾಧ್ಯವಾಗುತ್ತಿಲ್ಲ. ಒಂದು ಅಂಕಿಅಂಶಗಳ ಪ್ರಕಾರ ಉತ್ತರಪ್ರದೇಶಾದ್ಯಂತ 3 ಕೋಟಿ ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ ಮತ್ತು ಈ ಅಪೌಷ್ಟಿಕತೆಯೇ ಮಕ್ಕಳನ್ನು ರೋಗಪೀಡಿತರನ್ನಾಗಿಸುತ್ತಿದೆ. ಆದುದರಿಂದ, ಅಲ್ಲಿನ ಮುಖ್ಯಮಂತ್ರಿ ಗೋವುಗಳ ಚಿಂತೆಯನ್ನು ಸ್ವಲ್ಪ ಸಮಯ ಬದಿಗಿಟ್ಟು, ಈ ಮಕ್ಕಳ ಬಗ್ಗೆ ಚಿಂತೆ ಮಾಡಬೇಕಾಗಿದೆ. ಅಪೌಷ್ಟಿಕತೆ ಸಕಲ ರೋಗಗಳ ಹೆದ್ದಾರಿ. ಆದುದರಿಂದ, ಬಡಜನರ ಹಸಿವನ್ನು ಇಂಗಿಸುವ ಕಾರ್ಯದ ಬಗ್ಗೆ ಮೊದಲು ಆದಿತ್ಯನಾಥ್ ಯೋಚಿಸಬೇಕು. ಪೌಷ್ಟಿಕ ಆಹಾರಗಳನ್ನು ಹಳ್ಳಿಹಳ್ಳಿಗಳಿಗೆ ತಲುಪಿಸುವ ಕೆಲಸ ಮಾಡಿದರೆ, ಈ ಕಾಯಿಲೆಗಳಿಗೆ ಶೇ. 50ರಷ್ಟು ತಡೆ ಬೀಳುತ್ತದೆ. ಉಳಿದಂತೆ, ಆಸ್ಪತ್ರೆಗಳಿಗೆ ಮೂಲಭೂತ ಸೌಕರ್ಯಗಳನ್ನು ನೀಡುವ ಕೆಲಸದ ಕಡೆಗೆ ಸರಕಾರ ಆದ್ಯತೆ ನೀಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಸರಕಾರ ಗೋಶಾಲೆಗಳನ್ನು ತೆರೆದಂತೆ, ಸಿಲಿಂಡರ್ ಗೋದಾಮುಗಳನ್ನು ಜಿಲ್ಲೆ ಜಿಲ್ಲೆಗಳಲ್ಲಿ ತೆರೆಯಬೇಕಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News