×
Ad

ಕರ್ನಾಟಕ ಐಟಿ ಕ್ಷೇತ್ರದಲ್ಲಿ ದಿಗ್ಗಜರಾಗಲು ತಾಂತ್ರಿಕ ಕಾಲೇಜುಗಳೇ ಕಾರಣ: ಸಚಿವ ಟಿ.ಬಿ.ಜಯಚಂದ್ರ

Update: 2017-09-11 17:15 IST

ತುಮಕೂರು, ಸೆ.11: ದೇಶದಲ್ಲಿ ಅತೀ ಹೆಚ್ಚು ಇಂಜನಿಯರ್‍ಗಳನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನವಿದ್ದು, ಇಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪಿಸಿದ್ದರಿಂದಲೇ ರಾಜ್ಯ ಇಂದು ಐಟಿ ಕ್ಷೇತ್ರದಲ್ಲಿ ಹೆಸರು ಮಾಡುವಂತಾಗಿದೆ ಎಂದು ಜಿಲ್ಲಾ ಉಸ್ತು ವಾರಿ ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.

ನಗರದ ಎಸ್‍ಐಟಿ ಬಿರ್ಲಾ ಆಡಿಟೋರಿಯಂನಲ್ಲಿ ನಡೆದ “ದಿ ಇನ್ ಸ್ಟಿಟ್ಯೂಟ್ ಆಫ್ ಇಂಜಿನಿಯರ್” (ಇಂಡಿಯಾ) ರಾಜ್ಯ ಘಟಕದ 9ನೆ ಯೂನಿಟ್ ಶಾಖೆಯನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ಇಂಜಿನಿಯರ್‍ಗಳು ಹೆಚ್ಚಾದಂತೆ ಉದ್ಯೋಗಾವಕಾಶದ ಕೊರತೆ ಕಾಡುತ್ತಿದೆ. ಕಾಲೇಜಿನಿಂದ ಹೊರಬರುವ ಇಂಜಿನಿಯರ್‍ಗಳಿಗೆ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಆಗಬೇಕಾದ ಬದಲಾವಣೆ ಬಗ್ಗೆ ವೃತ್ತಿನಿರತರು ಚಿಂತಿಸಬೇಕಿದೆ ಎಂದರು.

ಇಂಜಿನಿಯರ್ ಕಾಲೇಜುಗಳ ಸೀಟುಗಳು ಇಂದು ಭರ್ತಿಯಾಗುತ್ತಿಲ್ಲ, ಕಂಡೆಕ್ಟರ್ ಉದ್ಯೋಗಕ್ಕೆ ಇಂಜಿನಿಯರ್ ಪದವೀಧರರು ಅರ್ಜಿ ಸಲ್ಲಿಸುತ್ತಿದ್ದಾರೆ.ಇಂತಹ ಸ್ಥಿತಿಯಲ್ಲಿ ಇಂಜಿನಿಯರಿಂಗ್ ಪಠ್ಯಕ್ರಮವನ್ನು ಬದಲಿಸಿ, ಇಂದಿನ ಕಾಲಕ್ಕೆ ತಕ್ಕಂತೆ ಬದಲಿಸಬೇಕಿದೆ. ಈ ನಿಟ್ಟಿನಲ್ಲಿ “ದ ಇನ್ ಸ್ಟಿ ಟ್ಯೂಟ್ ಆಫ್ ಇಂಜಿನಿಯರ್” ಪ್ರಯತ್ನ ಮಾಡಲಿ ಎಂದು ತಿಳಿಸಿದರು.

ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ, ಶಿಕ್ಷಣಕ್ಕೆ ಪೂರಕವಾಗಿ ವಿದ್ಯಾರ್ಥಿಗಳ ಕೌಶಲ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಕೌಶಲ್ಯಕ್ರಾಂತಿ ಆಗುತ್ತಿದ್ದು, ವೃತ್ತಿ ನಿರತರು, ವಿದ್ಯಾರ್ಥಿಗಳಲ್ಲಿ ಕೌಶಲ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು. ಇಂಜಿನಿಯರ್‍ಗಳು ಒಂದೆಡೆ ಸೇರುವ ಮೂಲಕ ದೊಡ್ಡ ಶಕ್ತಿಯನ್ನು ಸೃಷ್ಟಿಸಿದ್ದಾರೆ. ತಂತ್ರಜ್ಞಾನ ಹಾಗೂ ಪಠ್ಯಕ್ರಮದಲ್ಲಿನ ಅಂತರವನ್ನು ತಗ್ಗಿಸುವ ನಿಟ್ಟಿನಲ್ಲಿ ಸಂಸ್ಥೆ ಕಾರ್ಯನಿರ್ವಹಿಸಲಿ ಎಂದು ಸಲಹೆ ನೀಡಿದರು.

ಶಾಸಕ ರಫೀಕ್ ಅಹ್ಮದ್ ಮಾತನಾಡಿ, ದೇಶದಲ್ಲಿ 800 ಇಂಜಿನಿಯರಿಂಗ್ ಕಾಲೇಜುಗಳು ಮುಚ್ಚುವ ಹಂತಕ್ಕೆ ತಲುಪಿವೆ, ಕಾಲದಿಂದ ಕಾಲಕ್ಕೆ ಆಗುವ ಬದಲಾವಣೆ ಬಗ್ಗೆ ಇಂಜಿನಿಯರ್‍ಗಳಿಗೆ ತಲುಪಿಸುವ ಕೆಲಸವನ್ನು  “ದ ಇನ್ ಸ್ಟಿ ಟ್ಯೂಟ್ ಆಫ್ ಎಂಜನಿಯರ್” ಮಾಡುತ್ತಿದೆ,ಅತ್ಯಾಧುನಿಕ ತಂತ್ರಜ್ಞಾನ ಮೂಲಕ ಎತ್ತಿನಹೊಳೆ, ತುಂಗಾಭದ್ರಾ, ಭದ್ರಾ ಮೇಲ್ದಂಜೆ ಯೋಜನೆ ಮೂಲಕ ನೀರು ತರಲಾಗುತ್ತಿದೆ. ಆದರೆ ಪಠ್ಯಕ್ರಮದಲ್ಲಿ ಇನ್ನೂ ಹಳೆಯ ಪದ್ಧತಿಗಳೇ ಇದ್ದು, ವಿದ್ಯಾರ್ಥಿಗಳು ಹಾಗೂ ವೃತ್ತಿನಿರತರ ನಡುವಿನ ಅಂತರವನ್ನು ಕಡಿಮೆ ಮಾಡಬೇಕಿದೆ ಎಂದರು.

ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಯಪ್ರಕಾಶ್ ಮಾತನಾಡಿ, ವೃತ್ತಿನಿರತ ಇಂಜಿನಿಯರ್‍ಗಳು ಸೇರಿಕೊಂಡಿರುವ “ದ ಇನ್ ಸ್ಟಿಟ್ಯೂಟ್ ಆಫ್ ಇಂಜಿನಿಯರ್” ಸಂಸ್ಥೆಗೆ ಸರಕಾರ ಸ್ಥಳಾವಕಾಶವನ್ನು ಕಲ್ಪಿಸಿಕೊಟ್ಟರೆ ಸ್ವಂತ ಕಟ್ಟಡವನ್ನು ನಿರ್ಮಿಸಿಕೊಂಡು ಕಾರ್ಯಕ್ರಮಗಳನ್ನು ನಡೆಸಬಹುದು, ಸಂಸ್ಥೆಗೆ ಜಾಗ ನೀಡುವಂತೆ ಸಚಿವರು, ಶಾಸಕರಿಗೆ ಮನವಿ ಪತ್ರ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ವಿಶ್ವೇಶ್ವರಯ್ಯ ಜಲ ನಿಗಮದ ಮುಖ್ಯ ಇಂಜಿನಿಯರ್ ಪಿ.ಚೆನ್ನಪ್ಪ ನಾಯ್ಕ್, ಹೇಮಾವತಿ ನೀರಾವರಿ ನಾಲೆ ಮುಖ್ಯ ಇಂಜಿನಿಯರ್ ಶಿವಕುಮಾರ್,“ದ ಇನ್ ಸ್ಟಿಟ್ಯೂಟ್ ಆಫ್ ಇಂಜಿನಿಯರ್” ರಾಜ್ಯ ಘಟಕದ ಅಧ್ಯಕ್ಷ ಡಾ.ಎನ್.ಚಿಕ್ಕಣ್ಣ, ತುಮಕೂರು ಘಟಕದ ಅಧ್ಯಕ್ಷ ಡಾ.ಸುರೇಶ್, ಗೌರವ ಕಾರ್ಯದರ್ಶಿ ಪ್ರೊ.ಯು.ಎಸ್.ಮಲ್ಲಿಕ್, ಸದಸ್ಯರಾದ ಎಂ.ನಾಗರಾಜ್, ಆರ್.ಆನಂದಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News